ಇಷ್ಟಪಟ್ಟು ಪರೀಕ್ಷೆ ಎದುರಿಸಿದರೆ ಯಶಸ್ಸು ಖಚಿತ

ತುಮಕೂರು:

ವಿದ್ಯಾರ್ಥಿನಿಯರು ಕಷ್ಟಪಟ್ಟು ಪರೀಕ್ಷೆ ಬರೆಯುವುದಕ್ಕಿಂತ ಇಷ್ಟಪಟ್ಟು ಪರೀಕ್ಷೆ ಎದುರಿಸಿದರೆ ಯಶಸ್ಸು ಖಂಡಿತಾ ಸಾಧ್ಯ ಎಂದು ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷರಾದ ಮುರಳೀದರ ಹಾಲಪ್ಪ ತಿಳಿಸಿದರು.

ನಗರದ ಎಂಪ್ರೆಸ್ ಪದವಿ ಪೂರ್ವ ಕಾಲೇಜಿನ ಆಡಿಟೋರಿಯಂ ಸಭಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಯುಕ್ತ ಕೌಶಲ್ಯ ತರಬೇತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸೋಮವಾರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಲಾಗಿದ್ದ ‘ಕೌಶಲ್ಯ ಪಥ’ ಪರೀಕ್ಷಾ ಸಿದ್ಧತಾ ಕೌಶಲ್ಯ ತರಬೇತಿ ಅರಿವು ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿಯರು ನಿಮಗೋಸ್ಕರವಲ್ಲದಿದ್ದರೂ ನಿಮ್ಮ ತಂದೆ ತಾಯಿಗೋಸ್ಕರ ಕಂಕಣ ಬದ್ಧರಾಗಿ ಶ್ರಮವಹಿಸಿ ಓದಿದಾಗ ಮಾತ್ರ ಉತ್ತಮ ಅಂಕದ ಜೊತೆಗೆ ಭವಿಷ್ಯದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.

ವಿದ್ಯಾರ್ಥಿನಿಯರು ಭಯ, ಆತಂಕ ಬಿಟ್ಟು ಪರೀಕ್ಷೆಯನ್ನು ಹೇಗೆ ಎದುರಿಸಬೇಕು ಎಂಬುದನ್ನು ಯುಕ್ತ ಕೌಶಲ್ಯ ತರಬೇತಿ ಕೇಂದ್ರದವರು ತಿಳಿಸಿಕೊಡಲಿದ್ದು, ಏನೇ ಸಂಶಯವಿದ್ದರೂ ಅದನ್ನು ಬಗೆಹರಿಸಿಕೊಳ್ಳಲು ಉತ್ತಮ ವೇದಿಕೆ ಇದಾಗಿದೆ ಎಂದ ಅವರು, ಸಿಕ್ಕ ಅವಕಾಶಗಳನ್ನು ಯಾರು ಸದ್ಬಳಕೆ ಮಾಡಿಕೊಳ್ಳುತ್ತಾರೋ ಅವರು ಇತಿಹಾಸ ಬರೆಯುತ್ತಾರೆ ಎಂದು ಸಲಹೆ ನೀಡಿದರು.

ತುಮಕೂರು ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಶಂಕರ್ ಬಿದರಿಯವರು ಹಂತ ಹಂತವಾಗಿ ಉನ್ನತ ಹುದ್ದೆಗೇರಿ ತಮ್ಮ ಮಕ್ಕಳನ್ನೂ ಸಹ ಐಎಎಸ್, ಐಪಿಎಸ್ ಓದಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅಂತಹವರನ್ನು ಪ್ರೇರಣೆಯಾಗಿ ತೆಗೆದುಕೊಂಡು ನೀವೂ ಸಹ ಐಎಎಸ್, ಐಪಿಎಸ್ ಕನಸು ನನಸುಮಾಡಿಕೊಳ್ಳಬೇಕು ಆಗ ನಿಮ್ಮ ಪೋಷಕರಿಗೆ ಹಾಗೂ ನೀವು ಓದಿದ ಶಾಲೆಗೆ ಕೀರ್ತಿ ತರುವಂತಹವರಾಗುತ್ತೀರಿ ಎಂದು ಹೇಳಿದರು.

ಅಭಿಯಾನ ಉದ್ಘಾಟಿಸಿ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಾಧರ್, ಇಡೀ ಜಿಲ್ಲೆಯ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಭಯ ಹೋಗಲಾಡಿಸುವ ಕುರಿತಂತೆ ಯುಕ್ತ ಕೌಶಲ್ಯ ತರಬೇತಿ ಕೇಂದ್ರದವರು ಅರಿವು ಅಭಿಯಾನದ ಮೂಲಕ ವಿದ್ಯಾರ್ಥಿಗಳು ಪರೀಕ್ಷೆಗೆ ಹೇಗೆ ತಯಾರಾಗಬೇಕು ಎಂಬುದರ ಬಗ್ಗೆ ವಿವರಿಸಲಿದ್ದಾರೆ. ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಮಾ.28 ರಿಂದ ಪ್ರಥಮ ಪಿಯುಸಿ, ಏಪ್ರಿಲ್ 22 ರಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭಗೊಳ್ಳಲಿದ್ದು, ವಿದ್ಯಾರ್ಥಿನಿಯರು ಮಾನಸಿಕವಾಗಿ, ದೈಹಿಕವಾಗಿ ಪರೀಕ್ಷೆಗೆ ಸಿದ್ಧರಾಗಬೇಕು, ನೀವೆಲ್ಲಾ ಚನ್ನಾಗಿ ಓದಿ ಹೆಚ್ಚು ಅಂಕ ಪಡೆದು ಕಾಲೇಜಿಗೆ ಮತ್ತು ಪೋಷಕರಿಗೆ ಕೀರ್ತಿ ತರಬೇಕೆಂದರು.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಇದ್ದರೂ ಸಹ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧರಾಗುವಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಎಂಪ್ರೆಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಷಣ್ಮುಖ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿನಿಯರು ನಿಮಗಾಗಿ ಓದಬೇಡಿ, ನಿಮ್ಮ ಸಂತೋಷಕ್ಕಾಗಿ ಓದಬೇಡಿ, ನಿಮ್ಮ ತಂದೆ ತಾಯಿಗೋಸ್ಕರ ಓದಿ, ನಿಮ್ಮ ತಂದೆ ತಾಯಿಗೆ ಉತ್ತಮ ಮಾಕ್ರ್ಸ್‍ಕಾರ್ಡ್ ಎಂಬ ಕಿರೀಟವನ್ನು ನೀಡಿ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಯುಕ್ತ ಕೌಶಲ್ಯ ತರಬೇತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಮಧುಗಿರಿ ದಿಲೀಪ್ 2016ರಿಂದಲೂ ಯುಕ್ತ ಕೌಶಲ್ಯ ತರಬೇತಿ ಕೇಂದ್ರದಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾ ಬಂದಿದ್ದು, ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರತಿ ಹೋಬಳಿ ಮತ್ತು ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕೌಶಲ್ಯ ಪಥ ಪರೀಕ್ಷಾ ಸಿದ್ಧತಾ ಕೌಶಲ್ಯ ತರಬೇತಿ ಅರಿವು ಅಭಿಯಾನ ನಡೆಸಲಾಗುತ್ತಿದ್ದು, ಇಂದು ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಎಂಪ್ರೆಸ್ ಪದವಿ ಪೂರ್ವ ಕಾಲೇಜು ಸೇರಿದಂತೆ ವಿವಿಧ ಕಾಲೇಜಿನ ಸುಮಾರು 1000ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಭಿಯಾನದಲ್ಲಿ ಭಾಗವಹಿಸಿ, ಪ್ರಯೋಜನ ಪಡೆದರು.

ಕಾರ್ಯಕ್ರಮದಲ್ಲಿ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಉಪನ್ಯಾಸಕರಾದ ಪಿ.ಜಯಶೀಲ, ಸಿದ್ಧಪ್ಪ, ನರಸಿಂಹಮೂರ್ತಿ, ಎ.ಡಿ.ನರಸಿಂಹಮೂರ್ತಿ, ಹೆಚ್.ಎಂ.ಸದಾಶಿವಯ್ಯ, ಯುಕ್ತ ಕೌಶಲ್ಯ ತರಬೇತಿ ಕೇಂದ್ರದ ಜಿಲ್ಲಾ ಮುಖ್ಯ ಕಾರ್ಯಕ್ರಮ ಆಯೋಜಕರಾದ ದೀಪಿಕಾ ವೆಂಕಟೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

           ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap