ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಎಂಟ್ರಿ ಕೊಟ್ಟ ಕಿಚ್ಚ….!

ಬೆಂಗಳೂರು

    ಕನ್ನಡದ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಇದೀಗ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಎಂಟ್ರಿ ಕೊಟ್ಟಿದ್ದಾರೆ.ಆದರೆ ತಾವು ರಾಜಕೀಯ ಪ್ರವೇಶ ಮಾಡಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು,ನನ್ನ ಕಷ್ಟದ ದಿನಗಳಲ್ಲಿ ಜತೆ ನಿಂತಿದ್ದರು ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ನಿಲ್ಲಲು ತೀರ್ಮಾನಿಸಿದ್ದೇನೆ ಎಂದಿದ್ದಾರೆ.

    ಇದೇ ರೀತಿ ಅವರು ಹೇಳಿದವರ ಪರ ಪ್ರಚಾರ ಮಾಡುತ್ತೇನೆ ಎಂದಿರುವ ಅವರು,ವೈಯಕ್ತಿಕ ಕಾರಣಗಳಿಗಾಗಿ ನೀಡಿದ ಬೆಂಬಲವನ್ನು ರಾಜಕೀಯ ಪ್ರವೇಶ ಎಂದು ಬಣ್ಣಿಸಬೇಕಿಲ್ಲ ಎಂದಿದ್ದಾರೆ.

    ಆದರೆ ಸುದೀಪ್ ಅವರ ಈ ನಡೆ ಗೊಂದಲಗಳಿಗೆ ಕಾರಣವಾಗಿದ್ದು, ತಮ್ಮ ಪರವಾಗಿ ಅವರು ಪ್ರಚಾರ ಮಾಡುತ್ತಾರೆ ಎಂದರೆ,ನಮ್ಮ ಪಕ್ಷಕ್ಕೆ ಅವರು ಬೆಂಬಲ ಕೊಟ್ಟಂತೆ ಎಂದು ಅದೇ ಸುದ್ದಿಗೋಷ್ಟಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

     ಇಂದಿಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸುದೀಪ್ ಅವರು,ನಾನು ವ್ಯಕ್ತಿಗತ ಪ್ರೀತಿಗಾಗಿ ಬೊಮ್ಮಾಯಿ ಮಾಮಾ ಅವರ ಜತೆ ನಿಲ್ಲಲು ತೀರ್ಮಾನಿಸಿದ್ದೇನೆ ಎಂದರು.

     ನಾನು ಕಷ್ಟ ಕಾಲದಲ್ಲಿದ್ದಾಗ ಬಸವರಾಜ ಬೊಮ್ಮಾಯಿ ಮಾಮಾ ನನ್ನ ಜತೆ ನಿಂತಿದ್ದರು.ಅದನ್ನು ನಾನು ಮರೆತಿಲ್ಲ.ಹೀಗಾಗಿ ಈ ಚುನಾವಣೆಯಲ್ಲಿ ಅವರ ಪರವಾಗಿ ನಿಲ್ಲಲು ಬಯಸಿದ್ದೇನೆ.ಅವರು ಯಾರ ಪರವಾಗಿ ಪ್ರಚಾರ ಮಾಡಲು ಹೇಳುತ್ತಾರೋ ಮಾಡುತ್ತೇನೆ.

    ಇದೇ ರೀತಿ ಕಷ್ಟ ಕಾಲದಲ್ಲಿ ನನ್ನ ಕೈ ಬೆರಳು ಹಿಡಿದುಕೊಂಡವರು ಬೇರೆ ಪಕ್ಷದಲ್ಲಿದ್ದರೂ ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದ ಅವರು,ಐಟಿ ಧಾಳಿಗೆ ಹೆದರಿ ನಾನು ಬಿಜೆಪಿ ಸೇರಿದ್ದೇನೆ ಎಂಬುದು ಸುಳ್ಳು ಎಂದರು. ನಾನು ಯಾರಿಗೂ ಹೆದರಿ ತೀರ್ಮಾನ ತೆಗೆದುಕೊಳ್ಳುವ ವ್ಯಕ್ತಿಯಲ್ಲ.

    ಎಲ್ಲಕ್ಕಿಂತ ಮುಖ್ಯವಾಗಿ ಐಟಿ ಧಾಳಿ ನಡೆದು,ಅಲ್ಲೇನೂ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಆ ಎಪಿಸೋಡೇ ಮುಗಿದು ಹೋಗಿದೆ.ಈಗ ಅದನ್ನು ಕೆದಕುವ ಅಗತ್ಯವಿಲ್ಲ ಎಂದು ನಕ್ಕರು. ಇದೇ ರೀತಿ ನಾನು ಹಣಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರ ನಿಂತಿದ್ದೇನೆ ಎಂಬುದು ಸುಳ್ಳು,ನನಗೆ ಹಣ ಬೇಕೆಂದಿದ್ದರೆ ಇಲ್ಲಿ ಬರಬೇಕಿಲ್ಲ.ನನಗೆ ಕೆಪ್ಯಾಸಿಟಿ ಇದೆ.ಬೇರೆ ಕಡೆ ಹಣ ಮಾಡಬಲ್ಲೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

    ನಾನು ಮಾಡಿದ ಸಿನಿಮಾಗಳ ಬಾಬ್ತಿನಲ್ಲೇ ನನಗೆ ಅಪಾರ ಪ್ರಮಾಣದ ಹಣ ಬರಬೇಕು.ನೀವೇ ಯಾರಿಗಾದರೂ ಹೇಳಿ ಕೊಡಿಸಿ ಎಂದು ಸುದ್ದಿಗಾರರನ್ನು ಕಿಚಾಯಿಸಿದರು. ನಾನು ಬಿಜೆಪಿ ಸೇರಿಲ್ಲ,ರಾಜಕೀಯ ಪ್ರವೇಶ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು,ಈ ವಿಷಯವನ್ನು ನನ್ನ ಅಭಿಮಾನಿಗಳಿಗೆ ಸ್ಪಷ್ಟಪಡಿಸುತ್ತೇನೆ ಎಂದು ವಿವರಿಸಿದರು. ಇಪ್ಪತ್ತೇಳು ವರ್ಷಗಳಿಂದ ನನ್ನ ಅಭಿಮಾನಿ ಸಮೂಹ ಬೆಳೆದು ನಿಂತಿದೆ.ಆ ಅಭಿಮಾನಿಗಳಿಗೆ ನಾನು ಉತ್ತರ ಕೊಡಬೇಕಾಗುತ್ತದೆ ಎಂದ ಅವರು,ನನ್ನ ಈಗಿನ ತೀರ್ಮಾನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪರ ಇರುತ್ತದೆ.ಅವರು ಹೇಳಿದವರ ಪರ ಇರುತ್ತದೆ ಎಂದರು.

    ನಾನು ರಾಜ್ಯಾದ್ಯಂತ ತಿರುಗಿ ಪ್ರಚಾರ ಮಾಡಲು ಸಾಧ್ಯವಿಲ್ಲ.ಯಾಕೆಂದರೆ ನನಗೆ ಸಿನಿಮಾ ರಂಗದಲ್ಲಿ ಬೇಕಾದಷ್ಟು ಕೆಲಸವಿದೆ.ಒಪ್ಪಿಕೊಂಡ ಚಿತ್ರಗಳನ್ನು ಮಾಡಿ ಮುಗಿಸಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು. ಸುದೀಪ್ ಯಾವತ್ತೂ ದಾರಿ ತಪ್ಪಿದವರಲ್ಲ,ಬಿಜೆಪಿ ಅವರ ಹಾದಿ ತಪ್ಪಿಸುತ್ತದೆ ಎಂದು ನಟ ಪ್ರಕಾಶ್ ರಾಜ್ ಅವರು ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಅವರು,ಪ್ರಕಾಶ್ ರಾಜ್ ಅವರು ಅತ್ಯುತ್ತಮ ಕಲಾವಿದರು.ಅವರ ಜತೆ ನಾನು ಚಿತ್ರಗಳನ್ನು ಮಾಡಿದ್ದೇನೆ.ಹೊಸ ಚಿತ್ರಗಳನ್ನು ಮಾಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು. ಕಷ್ಟ ಕಾಲದಲ್ಲಿ ಬಸವರಾಜ ಬೊಮ್ಮಾಯಿ ಅವರ ಹಾಗೆ ನಿಮ್ಮ ಕೈ ಹಿಡಿದ ಬೇರೆ ರಾಜಕಾರಣಿಗಳಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ಹಾಗೆ ಯಾರೂ ನಿಂತಿಲ್ಲ ಎಂದು ನುಡಿದರು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ವಿರುದ್ದ ನಲವತ್ತು ಪರ್ಸೆಂಟ್ ಕಮೀಷನ್ನಿನ ಆರೋಪವಿದೆ.ಈಗ ನೀವು ಅವರ ಪರವಾಗಿ ನಿಂತರೆ ಅಂತಹ ಆರೋಪಗಳನ್ನು ಸಮರ್ಥಿಸಿಕೊಂಡಂತಲ್ಲವೇ?ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ನನಗೆ ಗೊತ್ತಿರುವ ಸಂಗತಿಗಳ ಬಗ್ಗೆ ಮಾತನಾಡುತ್ತೇನೆ.ನನಗೆ ಗೊತ್ತಿಲ್ಲದ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ ಎಂದರು. ನಾನು ಚಿತ್ರರಂಗದಲ್ಲಿ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾಗ ಬಸವರಾಜ ಬೊಮ್ಮಾಯಿಯವರು ಆಗಷ್ಟೇ ರಾಜಕೀಯ ಪ್ರವೇಶಿಸಿದ್ದರು.

    ನನಗೆ ಆಗ ಗಾಡ್ ಫಾದರ್ ಗಳು ಇರಲಿಲ್ಲ.ಗಾಡ್ ಮತ್ತು ಫಾದರ್ ಬೇರೆ ಬೇರೆ ಆಗಿದ್ದರು.ಅಂತಹ ಸಂದರ್ಭದಲ್ಲಿ ಬೊಮ್ಮಾಯಿ ನನ್ನ ಜತೆ ನಿಂತಿದ್ದರು. ಇದೇ ಕಾರಣಕ್ಕಾಗಿ ನಾನು ಅವರ ಬೆಂಬಲಕ್ಕೆ ನಿಲ್ಲಲು ತೀರ್ಮಾನಿಸಿದ್ದೇನೆ.ಎಲ್ಲೇ ಇರಲಿ,ಅವರು ನನಗೆ ಬಸವರಾಜ ಬೊಮ್ಮಾಯಿ ಮಾಮಾ ಎಂದರು.

     ಅನಿವಾರ್ಯವಾದರೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ಚುನಾವಣೆಯಲ್ಲಿ ನಿಲ್ಲಬೇಕು ಎಂದು ತೀರ್ಮಾನಿಸಿದರೆ ಘೋಷಣೆ ಮಾಡಿಯೇ ಸ್ಪರ್ಧಿಸುತ್ತೇನೆ ಎಂದು ನುಡಿದರು. ಚಿತ್ರರಂಗದವರು,ಸೆಲಬ್ರಿಟಿಗಳು ಚುನಾವಣಾ ಪ್ರಚಾರಕ್ಕೆ ಇಳಿಯುವುದು ಹೊಸತೇನಲ್ಲ.ನಾನೂ ಹಾಗೇ ಇಳಿದಿದ್ದೇನೆ ಎಂದು ನುಡಿದರು.

     ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ,ಸುದೀಪ್ ಅವರು ನನ್ನ ಮೇಲಿನ ವಿಶ್ವಾಸದಿಂದ ಪ್ರಚಾರ ಮಾಡಲು ಒಪ್ಪಿಕೊಂಡಿದ್ದಾರೆ.ಅವರು ನನ್ನ ಬೆಂಬಕ್ಕೆ ನಿಲ್ಲುತ್ತಾರೆ ಎಂದರೆ ನಮ್ಮ ಪಕ್ಷದ ಪರವಾಗಿ ನಿಲ್ಲುತ್ತಾರೆಂದೇ ಅರ್ಥ ಎಂದರು. ಎಲ್ಲಕ್ಕಿಂತ ಮುಖ್ಯವಾಗಿ ಅವರು ಮನುಷ್ಯ ಸಂಬAಧಗಳಿಗೆ ಗೌರವ ಕೊಟ್ಟು ಇಲ್ಲಿಗೆ ಬಂದಿದ್ದಾರೆ.ನನ್ನ ಜತೆ ನಿಲ್ಲುವುದಾಗಿ ಹೇಳಿದ್ದಾರೆ.ಅವರ ಭಾವನೆಗಳಿಗೆ ಎಲ್ಲರೂ ಗೌರವ ಕೊಡಬೇಕು ಎಂದು ಮನವಿ ಮಾಡಿಕೊಂಡರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap