ಬೆಂಗಳೂರು:
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ, ರಾಜ್ಯಸಭಾ ಸದಸ್ಯೆ ಖ್ಯಾತ ಬರಹಗಾರ್ತಿ ಸುಧಾ ಮೂರ್ತಿ ಅವರು ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜಯನಗರದ ರಾಗಿಗುಡ್ಡ ರಾಯರ ಮಠದಲ್ಲಿ ಪ್ರಧಾನಿ ಮೋದಿ ಹೆಸರಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ.
ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಯೆಲ್ಲೋ ಲೈನ್ ಮೆಟ್ರೋ ಉದ್ಘಾಟನೆಗಾಗಿ ರಾಗಿಗುಡ್ಡಕ್ಕೆ ಬಂದಿದ್ದರು. ಇದಕ್ಕೂ ಮುನ್ನವೇ ರಾಯರ ಮಠಕ್ಕೆ ತಮ್ಮ ಸಹೋದರಿ ಜೊತೆ ಬಂದಿದ್ದ ಸುಧಾ ಮೂರ್ತಿ, ವಿಶೇಷ ಪೂಜೆ ಸಲ್ಲಿಸಿ, ದೇಶಕ್ಕೆ ಒಳಿತಾಗಲಿ ಎಂದು ರಾಘವೇಂದ್ರ ಸ್ವಾಮಿಗಳ ಮುಂದೆ ಪ್ರಾರ್ಥನೆ ಸಲ್ಲಿಸಿದರು. ನಿನ್ನೆ ರಾಗಿಗುಡ್ಡ ದೇವಸ್ಥಾನದ ಮುಂಭಾಗದಲ್ಲೇ ಪ್ರಧಾನಿ ಮೋದಿ ಮೆಟ್ರೋದಲ್ಲಿ ಪ್ರಯಾಣಿಸಿದ್ದರು. ಮೋದಿ ಬರುವ ಹಿನ್ನಲೆಯಲ್ಲಿ ಮೋದಿ ಹೆಸರಲ್ಲಿ ಹಾಗೂ ಲೋಕಕಲ್ಯಾಣಕ್ಕಾಗಿ ಸುಧಾಮೂರ್ತಿ ಪೂಜೆ ಸಲ್ಲಿಸಿದ್ದರು.
ರಾಯರ ಆರಾಧನೆ ವೇಳೆ ಪ್ರಧಾನಿ ಹೆಸರಲ್ಲಿ ಸುಧಾಮೂರ್ತಿ ಅವರು ಪೂಜೆ ಮಾಡಿಸಿದ್ದಾರೆ ಅಂತ ರಾಘವೇಂದ್ರ ಮಠದ ಅರ್ಚಕರು ಮಾಹಿತಿ ನೀಡಿದ್ದಾರೆ. ಸುಧಾ ಮೂರ್ತಿ ಅವರು ಪ್ರಧಾನಿ ಮೋದಿಯವರಿಗಾಗಿ, ದೇಶಕ್ಕಾಗಿ ಸಂಕಲ್ಪ ಮಾಡಿದರು. ನಮ್ಮ ದೇಶ ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಬೇಡಿಕೊಂಡರು ಎಂದು ರಾಘವೇಂದ್ರ ಮಠದ ವ್ಯವಸ್ಥಾಪಕ ರಾಜಾ ಕೆ. ವಾದೀಂದ್ರಚಾರ್ಯ ಹೇಳಿಕೆ ನೀಡಿದ್ದಾರೆ.
ಇತ್ತೀಚಿಗಷ್ಟೇ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ಸುಧಾಮೂರ್ತಿ ಅಲ್ಲಿ ಮಠದ ಕೆಲಸ ಮಾಡುತ್ತಾ, ಸರಳತೆ ಮೆರೆದಿದ್ದರು. ಮಠದ ಗೋಶಾಲೆಯಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿ, ಗೋವುಗಳಿಗೆ ಗೋಗ್ರಾಸ ನೀಡಿ, ನಮಸ್ಕರಿಸಿದ್ದರು. ಮಠದ ಭೋಜನ ಶಾಲೆಯಲ್ಲಿ ಸುಧಾಮೂರ್ತಿ ಪಾತ್ರೆ ತೊಳೆದಿದ್ದರು.








