ಸುಹಾಸ್ ಶೆಟ್ಟಿ ಕೊಲೆ ಪ್ರಕರಣ: NIA ತನಿಖೆಗೆ ವಹಿಸಿ: ಸರ್ಕಾರಕ್ಕೆ BJP ಆಗ್ರಹ

ಮಂಗಳೂರು:

   ಹಿಂದೂ ಸಂಘಟನೆ ಕಾರ್ಯಕರ್ತ ಹಾಗೂ ರೌಡಿಶೀಟರ್ ಸುಹಾಸ್‌ ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಶುಕ್ರವಾರ ಒತ್ತಾಯಿಸಿದೆ.

   ಸುಹಾಸ್ ಶೆಟ್ಟಿಯವರ ಅಂತ್ಯಕ್ರಿಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಘಟನೆಯನ್ನು ಪಕ್ಷವು ಗಂಭೀರವಾಗಿ ಪರಿಗಣಿಸಿದ್ದು, ಪೊಲೀಸರ ವೈಫಲ್ಯ ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ಯಾರೂ, ವಿಶೇಷವಾಗಿ ಹಿಂದುತ್ವ ಕಾರ್ಯಕರ್ತರು ಸುರಕ್ಷಿತವಾಗಿಲ್ಲ ಎಂಬುದನ್ನು ತೋರಿಸುತ್ತಿದೆ. ಪ್ರಕರಣದ ತನಿಖೆಯಲ್ಲಿ ರಾಜ್ಯ ಪೊಲೀಸರನ್ನು ನಂಬಲು ಸಾಧ್ಯವಿಲ್ಲ. ಎನ್ಐಎ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು. ಇದೇ ವೇಳೆ ಸುಹಾಸ್ ಶೆಟ್ಟಿ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿದರು.

   ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಮೊಹಮ್ಮದ್ ಫಾಜಿಲ್ ಅವರ ಹತ್ಯೆ ಪ್ರಕರಣದಲ್ಲಿ ಸುಹಾಸ್ ಶೆಟ್ಟಿಯನ್ನು ಸುಖಾಸುಮ್ಮನೆ ಸೇರಿಸಲಾಗಿದೆ. ಕೊಲೆ ಪ್ರಕರಣದ ಬಗ್ಗೆ ಎನ್ಐಎ ತನಿಖೆಗೆ ಆದೇಶಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡುತ್ತೇನೆಂದು ತಿಳಿಸಿದರು.

   ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡಿ, ‘ಹಿಂದೂ ಧರ್ಮವನ್ನು ಉಳಿಸಲು ಹೋರಾಡುವವರನ್ನು ಮುಸ್ಲಿಂ ಭಯೋತ್ಪಾದಕರು ಕೊಂದು ಹಾಕುತ್ತಿದ್ದಾರೆ. ಆರೋಪಿಗಳು ಎಲ್ಲಿ ಸಿಗುತ್ತಾರೋ ಅಲ್ಲೇ ಗುಂಡಿಕ್ಕಿ ಸಾಯಿಸಬೇಕು. ಇಲ್ಲದಿದ್ದರೆ ದೇಶಕ್ಕಾಗಿ ದುಡಿಯುವವರಿಗೆ ಭಯಪಡುವ ವಾತಾವರಣ ನಿರ್ಮಾಣವಾಗುತ್ತದೆ ಎಂದು ಹೇಳಿದರು. ಕೆಲವರು ಹಿಂದೂ ಹೆಸರಿನಲ್ಲಿ ಮಜಾ ಮಾಡಿದ್ದಾರೆ. ಕಾರ್ಯಕರ್ತರ ಹೆಸರಲ್ಲಿ ಅಧಿಕಾರಕ್ಕೆ ಬಂದಿದ್ದಾರೆ. ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ’ ಎಂದು ಹೇಳಿ ಸುಮ್ಮನೆ ಕುಳಿತರು. ಈಗ ಬಂದು ಸಾಂತ್ವನ ಹೇಳುತ್ತಾರೆ‌, ಹಿಂದೂ ಯುವಕರು ರಾತ್ರಿ ಹೊತ್ತು ಒಬ್ಬಂಟಿಯಾಗಿ ಓಡಾಡಬೇಡಿ. ನಮ್ಮ ಸರ್ಕಾರದ ಇದ್ದಾಗಲೂ ಕಾರ್ಯಕರ್ತರಿಗೆ ರಕ್ಷಣೆ‌ ‌ಇರಲಿಲ್ಲ. ಕರಾವಳಿಯಲ್ಲಿ ಆತ್ಮರಕ್ಷಣೆಗೆ ಆಯುಧ ಇಟ್ಟುಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

   ಈ ನಡುವೆ ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸುವಂತೆ ಅಮಿತ್ ಶಾ ಅವರಿಗೆ ಸಂಸದ ಚೌಟ ಅವರು ಪತ್ರ ಬರೆದಿದ್ದಾರೆ.

   ಆಘಾತಕಾರಿ ಮತ್ತು ಕ್ರೂರ ಹತ್ಯೆಯ ಬಗ್ಗೆ ತೀವ್ರ ದುಃಖ ಮತ್ತು ತೀವ್ರ ಕಳವಳದಿಂದ ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ. ಈ ಕ್ರೂರ ಕೃತ್ಯವು ಇಡೀ ಕರಾವಳಿ ಕರ್ನಾಟಕ ಪ್ರದೇಶದ ಜನರನ್ನು ಬೆಚ್ಚಿಬೀಳಿಸಿದೆ. ಈ ಘಟನೆಯು ಪ್ರತ್ಯೇಕ ಘಟನೆಯಲ್ಲ. ಇದು ಕರಾವಳಿ ಕರ್ನಾಟಕ ಪ್ರದೇಶದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಕಾನೂನುಬಾಹಿರತೆ, ಇಸ್ಲಾಮಿಕ್ ಮೂಲಭೂತವಾದ ಮತ್ತು ರಾಷ್ಟ್ರವಿರೋಧಿ ಅಂಶಗಳ ಒಂದು ದೊಡ್ಡ ಮಾದರಿಯ ಭಾಗವಾಗಿದೆ.

   ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಪಿಎಫ್‌ಐ ಕಾರ್ಯಕರ್ತರು ಗುರಿಯಾಗಿಸಿಕೊಂಡು ಹತ್ಯೆ ಮಾಡಿದ್ದನ್ನು ನಾವು ನೋಡಿದ್ದೇವೆ. ನಂತರ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಈ ಸಂಘಟನೆಯನ್ನು ನಿಷೇಧಿಸಿತು. ಈಗ ಮತ್ತೊಂದು ಯುವ ಹಿಂದೂ ಜೀವನವು ಇದೇ ರೀತಿಯಲ್ಲಿ ನಾಶವಾಗಿದೆ,

   ಸುಹಾಸ್ ಶೆಟ್ಟಿ ಅವರ ಕುಟುಂಬವು ನೊಂದಿದೆ ಮತ್ತು ನ್ಯಾಯಕ್ಕಾಗಿ ನಮ್ಮ ಕಡೆಗೆ ನೋಡುತ್ತಿದೆ. ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿರುವ ಸಾಧ್ಯತೆ ಇರುವುದರಿಂದ, ಈ ಪ್ರಕರಣವನ್ನು ಸಮಗ್ರ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಹಸ್ತಾಂತರಿಸಬೇಕು ಎಂದು ಮನವಿ ಮಾಡಿದ್ದಾರೆ.

Recent Articles

spot_img

Related Stories

Share via
Copy link