ನವದೆಹಲಿ:
ಡೀಪ್‌ಫೇಕ್ ವಿಡಿಯೋಗಳು ಪ್ರಜಾಪ್ರಭುತ್ವಕ್ಕೆ ಹೊಸ ಅಪಾಯ ಎಂದ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು, ಡೀಪ್‌ಫೇಕ್‌ಗಳಿಗೆ ಕಡಿವಾಣ ಹಾಕಲು ಸರ್ಕಾರ ಶೀಘ್ರದಲ್ಲೇ ಹೊಸ ನಿಯಮಾವಳಿಗಳನ್ನು ರೂಪಿಸಲಿದೆ ಎಂದು ಗುರುವಾರ ಹೇಳಿದ್ದಾರೆ.
ಸದ್ಯದಲ್ಲಿ ತೀರ ಪ್ರಚಲಿತದಲ್ಲಿ ಇರುವ ಡೀಪ್‌ಫೇಕ್ ವಿಡಿಯೋ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು ಪತ್ತೆ ಹಚ್ಚುವಿಕೆ , ತಡೆಗಟ್ಟುವಿಕೆ, ವರದಿ ಮಾಡುವ ಕಾರ್ಯವಿಧಾನವನ್ನು ಬಲಪಡಿಸುವುದು ಮತ್ತು ಬಳಕೆದಾರರಿಗೆ ಜಾಗೃತಿ ಮೂಡಿಸುವಂತಹ ಕೆಲಸದ ಅಗತ್ಯವನ್ನು ಕಂಪನಿಗಳು ಒಪ್ಪಿಕೊಂಡಿವೆ ಎಂದರು.
“ನಾವು ಇಂದೇ ಕರಡು ನಿಯಮಾವಳಿಯನ್ನು ಸಿದ್ಧಪಡಿಸಲು ಪ್ರಾರಂಭಿಸುತ್ತೇವೆ ಮತ್ತು ಕಡಿಮೆ ಸಮಯದಲ್ಲಿ ಡೀಪ್‌ಫೇಕ್‌ಗಳಿಗಾಗಿ ಹೊಸ ನಿಯಮಾವಳಿಗಳನ್ನು ರೂಪಿಸುತ್ತೇವೆ; ಇದು ಅಸ್ತಿತ್ವದಲ್ಲಿರುವ ಚೌಕಟ್ಟನ್ನು ತಿದ್ದುಪಡಿ ಮಾಡುವ ಅಥವಾ ಹೊಸ ನಿಯಮಗಳು ಅಥವಾ ಹೊಸ ಕಾನೂನನ್ನು ತರುವ ರೂಪದಲ್ಲಿರಬಹುದು” ಎಂದು ವೈಷ್ಣವ್ ಹೇಳಿದ್ದಾರೆ.
ಡೀಪ್‌ಫೇಕ್‌ಗಳು ಪ್ರಜಾಪ್ರಭುತ್ವಕ್ಕೆ ಹೊಸ ಬೆದರಿಕೆಯಾಗಿ ಹೊರಹೊಮ್ಮಿದೆ. ಇದನ್ನು ಎದುರಿಸಲು ನಾವು ನಮ್ಮ ಮುಂದಿನ ಸಭೆಯನ್ನು ಡಿಸೆಂಬರ್ ಮೊದಲ ವಾರದಲ್ಲಿ ನಡೆಸುತ್ತೇವೆ. ಅದು ಇಂದಿನ ನಿರ್ಧಾರಗಳ ಮೇಲೆ ಮುಂದಿನ ಕ್ರಮ ಮತ್ತು ಕರಡು ನಿಯಮಾವಳಿಯಲ್ಲಿ ಏನನ್ನು ಸೇರಿಸಬೇಕು ಎಂಬುದರ ಬಗ್ಗೆಯೂ ಚರ್ಚಿಸುತ್ತೇವೆ” ಎಂದು ವೈಷ್ಣವ್ ತಿಳಿಸಿದ್ದಾರೆ.