ಉಡುಪಿ:
ಧರ್ಮಸ್ಥಳದಲ್ಲಿ ಅನನ್ಯ ಭಟ್ ಎಂಬ ವಿದ್ಯಾರ್ಥಿನಿಯ ನಾಪತ್ತೆಯಾಗಿದೆ ಎಂದು ದೂರು ನೀಡಿದ್ದ, ಆಕೆಯ ತಾಯಿ ತಾನು ಎಂದು ಹೇಳಿಕೊಂಡಿದ್ದ ಸುಜಾತ ಭಟ್ ಅವರು ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಇಂದು ಬೆಳ್ಳಂಬೆಳಿಗ್ಗೆ ಆಗಮಿಸಿದ್ದಾರೆ. ಪ್ರಕರಣದ ಬಗ್ಗೆ ಕ್ಷಣಕ್ಕೊಂದು ಮಾತನಾಡುತ್ತಾ ಹಾಸ್ಯಾಸ್ಪದ ವ್ಯಕ್ತಿಯಾಗಿರುವ ಸುಜಾತ ಭಟ್, ಇದೀಗ ಎಸ್‌ಐಟಿ ಮುಂದೆ ಏನು ಹೇಳುತ್ತಾರೆ ಎಂಬ ಕುತೂಹಲ ಮೂಡಿದೆ.
ಧರ್ಮಸ್ಥಳದಲ್ಲಿ ತನ್ನ ಮಗಳು ಅನನ್ಯ ಭಟ್ ನಾಪತ್ತೆಯಾಗಿದ್ದಾಳೆ ಎಂದು ಸುಜಾತ ಭಟ್ ಆರೋಪಿಸಿದ್ದರು. ತಮ್ಮ ಮಗಳ ಅಸ್ಥಿಪಂಜರ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಅನನ್ಯ ಭಟ್ ನಾಪತ್ತೆ ಪ್ರಕರಣವನ್ನು ಎಸ್ಐಟಿಗೆ ಹಸ್ತಾಂತರಿಸಿತ್ತು. ನಂತರ ಪ್ರಕರಣದ ವಿವರ ನೀಡುವಂತೆ ಸುಜಾತ ಭಟ್‌ಗೆ ಎಸ್‌ಐಟಿ ನೋಟಿಸ್ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 5 ಗಂಟೆಗೆ ಬೆಂಗಳೂರಿನಿಂದ ಬೆಳ್ತಂಗಡಿಯ ಎಸ್‌ಐಟಿ ವಿಚಾರಣೆಗೆ ಆಗಮಿಸಿದ್ದಾರೆ.
ಮೊದಲು ಅನನ್ಯ ಭಟ್ ತನ್ನ ಮಗಳು ಎಂದು ಹೇಳಿದ್ದ ಸುಜಾತ ಭಟ್, ಆ ಬಳಿಕ, ಅನನ್ಯ ಭಟ್ ಎಂಬ ಮಗಳು ನನಗೆ ಇದ್ದದ್ದೇ ಸುಳ್ಳು. ಸತ್ತದ್ದೂ ಸುಳ್ಳು. ಗಿರೀಶ್ ಮಟ್ಟೆಣ್ಣವರ್ ಹಾಗೂ ಜಯಂತ್ ಟಿ. ನನ್ನನ್ನು ಈ ಸುಳ್ಳು ಹೇಳುವಂತೆ ಪ್ರಚೋದಿಸಿದ್ದಾರೆ ಎಂದು ಇನ್‌ಸೈಟ್‌ರಶ್ ಎಂಬ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.








