ನವದೆಹಲಿ:
ಹಲವಾರು ವಂಚನೆ ಪ್ರಕರಣಗಳಲ್ಲಿ ಪ್ರಸ್ತುತ ಜೈಲು ಶಿಕ್ಷೆ ಅನುಭವಿಸುತ್ತಿರುವ ಸುಕೇಶ್ ಚಂದ್ರಶೇಖರ್ , ಎಲಾನ್ ಮಸ್ಕ್ ಗೆ ಪತ್ರ ಬರೆದು, ಸಾಮಾಜಿಕ ಜಾಲತಾಣ ‘X’ ನಲ್ಲಿ 2 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಬಗ್ಗೆ ಆಶಯ ವ್ಯಕ್ತಪಡಿಸಿದ್ದಾರೆ. ಚಂದ್ರಶೇಖರ್ ಜೈಲಿನಿಂದ ಪತ್ರ ಬರೆದಿರುವುದು ಇದೇ ಮೊದಲಲ್ಲ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರಿಗೂ ಪತ್ರ ಬರೆದಿದ್ದರು.
ಹೇ ಎಲಾನ್, ನಾನು ನಿಮ್ಮ ಎಕ್ಸ್ ಕಂಪನಿಯಲ್ಲಿ ಈಗಲೇ 1 ಬಿಲಿಯನ್ ಅಮೆರಿಕ ಡಾಲರ್ ಮತ್ತು ಮುಂದಿನ ವರ್ಷ ಮತ್ತೊಂದು 1 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಬಯಸುತ್ತೇನೆ. ಒಟ್ಟು 2 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಸಿದ್ದನಿದ್ದೇನೆ ಎಂದಿದ್ದಾರೆ. ಮಸ್ಕ್ ಅವರನ್ನು “ನನ್ನ ಮನುಷ್ಯ” ಎಂದು ಉಲ್ಲೇಖಿಸಿರುವ ಸುಖೇಶ್, ಟ್ರಂಪ್ ಆಡಳಿತದಲ್ಲಿ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್‌ಮೆಂಟ್ ಆಫ್ ಗವರ್ನಮೆಂಟ್ ಎಫಿಷಿಯನ್ಸಿ (DOGE) ಅನ್ನು ಮುನ್ನಡೆಸುವ ಜವಾಬ್ದಾರಿಯುತ ಹುದ್ದೆ ಸ್ವೀಕರಿಸಿರುವ ಅವರನ್ನು ಅಭಿನಂದಿಸಿದರು. ಅಲ್ಲದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ದೊಡ್ಡಣ್ಣ ಎಂದೂ ಕರೆದಿದ್ದಾರೆ.
ಎಲಾನ್, ನೀವು ನನಗೆ ತುಂಬಾ ಇಷ್ಟವಾಗುವ ವ್ಯಕ್ತಿ, ನೀವು ಘನವಂತರು,ನಿಮ್ಮ ಸಂಸ್ಥೆಯ ಬಗ್ಗೆ ಅತೀವ ಗೌರವವಿದೆ. ಹೀಗಾಗಿ ಅದರ ಭಾಗವಾಗುವುದು ನನ್ನ ಹುಚ್ಚು ಹಂಬಲ. ಮೇಲೆ ತಿಳಿಸಿದ ಮೊತ್ತದ ಹೂಡಿಕೆಯು X ನ ಯಾವುದೇ ಮೌಲ್ಯಮಾಪನದ ಅಡಿಯಲ್ಲಿಲ್ಲ, ಆದರೆ ಇದು ನಿಮ್ಮ ನಾಯಕತ್ವದಲ್ಲಿ ಕಂಪನಿಯು ಸಾಧಿಸಲಿರುವ ಗಮನಾರ್ಹ ಅದೃಷ್ಟದ ಮೇಲೆ ಹೂಡಿಕೆಯಾಗಿದೆ. X ಮೌಲ್ಯವು ಅನಿರೀಕ್ಷಿತ ಎತ್ತರಕ್ಕೆ ಏರಲಿದೆ ಎಂದು ಖಂಡಿತವಾಗಿಯೂ ತಿಳಿದಿದೆ ಎಂದು ಚಂದ್ರಶೇಖರ್ ಹೇಳಿದರು.
ಬಾಲಿವುಡ್ ನಟಿ ಜಾಕ್ಲಿನ್ ಫರ್ನಾಂಡಿಸ್ಗೆ ಪದೇ ಪದೇ ಪತ್ರ ಬರೆಯುತ್ತಲೇ ಸುದ್ದಿಯಲ್ಲಿರುವ ಸುಕೇಶ್ ಚಂದ್ರಶೇಖರ್ ಕಳೆದ ತಿಂಗಳು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದರು. ಆ ಪತ್ರ ವೈರಲ್ ಆಗಿದ್ದು, ಈ ಪತ್ರದ ಮೂಲಕ ಅವರು 7000 ಕೋಟಿಗು ಹೆಚ್ಚು ಟ್ಯಾಕ್ಸ್ ಕಟ್ಟುವುದಾಗಿ ಹೇಳಿದ್ದ.ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದು 2024-2025 ಆರ್ಥಿಕ ವರ್ಷದಲ್ಲಿ ತನಗೆ 22,410 ಕೋಟಿ ಆದಾಯವಿದೆ ಎಂದಿದ್ದ.
ಸುಕೇಶ್ ಶ್ರೀಮಂತ ವ್ಯಕ್ತಿಗಳಿಂದ ನೂರಾರು ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎನ್ನುವ ಆರೋಪವಿದೆ. ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿರುವ ₹ 200 ಕೋಟಿ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಪ್ರಧಾನ ಆರೋಪಿಯಾಗಿದ್ದಾರೆ. ಇಷ್ಟೆ ಅಲ್ಲದೆ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ ಮತ್ತು ವಿವಿಧ ಏಜೆನ್ಸಿಗಳಿಂದ ಸುಕೇಶ್ ಮೇಲೆ ಹೆಚ್ಚುವರಿ ಆರೋಪಗಳಿವೆ.








