ಬೆಂಗಳೂರು:
ಬಹುಕೋಟಿ ತೆರಿಗೆ ವಂಚನೆ ಆರೋಪ ಪ್ರಕರಣದಲ್ಲಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಉದ್ಯಮಿ ಸುಕೇಶ್ ಚಂದ್ರಶೇಖರ್ಗೆ ಸೇರಿದ ದುಬಾರಿ ಬೆಲೆಯ ಕಾರುಗಳನ್ನು ನವೆಂಬರ್ 28ರಂದು ಆದಾಯ ತೆರಿಗೆ ಇಲಾಖೆಯು(ಐಟಿ) ಹರಾಜು ಹಾಕಲು ಮುಂದಾಗಿದೆ. ನೂರಾರು ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ಸುಕೇಶ್ ಚಂದ್ರಶೇಖರ್ ಇದೀಗ ದೆಹಲಿ ಕಾರಾಗೃಹದಲ್ಲಿದ್ದಾರೆ.
ಹಲವು ಸಂಸ್ಥೆಗಳಿಗೆ ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಕೇಶ್ ಅವರನ್ನು ಐಟಿ ಅಧಿಕಾರಿಗಳು ಈ ಹಿಂದೆ ಬಂಧಿಸಿದ್ದರು. ಸುಮಾರು 308 ಕೋಟಿ ರೂಪಾಯಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಗಂಭೀರ ಆರೋಪ ಸುಕೇಶ್ ಮೇಲಿದೆ. ಹೀಗಾಗಿ ತೆರಿಗೆ ಅಧಿಕಾರಿಗಳು ಜಪ್ತಿ ಮಾಡಿಕೊಂಡಿರುವ ಸ್ವತ್ತುಗಳ ಹರಾಜಿಗೆ ಮುಂದಾಗಿದ್ದಾರೆ.
ವಶಕ್ಕೆ ಪಡೆದ ವಾಹನಗಳ ಪೈಕಿ 12 ಐಷಾರಾಮಿ ಕಾರುಗಳಿವೆ. ಈ ಪೈಕಿ ಬಿಎಂಡ್ಲ್ಯೂ, ರೇಂಜ್ ರೋವರ್, ಜಾಗ್ವಾರ್, ಪೋರ್ಷೆ, ಬೆಂಟ್ಲಿ, ರೋಲ್ಸ್ ರಾಯ್ಸ್, ಲ್ಯಾಂಬೋರ್ಗಿನಿ, ಡುಕಾಟಿ ಡಿಯಾವೆಲ್ ಸೇರಿದಂತೆ ಹಲವು ಕಾರುಗಳಿವೆ. ಇವುಗಳನ್ನು ಇಲಾಖೆ ಹರಾಜು ಮಾಡಲಿದೆ.
ಕೇಂದ್ರ ಕಾನೂನು ಸಚಿವಾಲಯದ ಅಧಿಕಾರಿಯ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿ ವಂಚಿಸಿರುವ ಆರೋಪವನ್ನು ಸುಕೇಶ್ ಎದುರಿಸುತ್ತಿದ್ದಾರೆ. ಔಷಧ ಕಂಪನಿ ಪ್ರವರ್ತಕರಿಗೆ ಜಾಮೀನು ಕೊಡಿಸುವುದಾಗಿ ನಂಬಿಸಿ ಅವರ ಪತ್ನಿಯರಿಂದ 200 ಕೋಟಿ ರೂಪಾಯಿ ಪಡೆದು ವಂಚಿಸಿರುವ ಅಕ್ರಮ ಹಣ ವರ್ಗಾವಣೆ ಕುರಿತಂತೆ ಜಾರಿ ನಿರ್ದೇಶಾನಾಲಯ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.
2012ರಿಂದ 2018ರವರೆಗಿನ ಅವಧಿಗೆ ಸಂಬಂಧಿಸಿದಂತೆ 308.48 ಕೋಟಿ ರೂ.ಯನ್ನು ಸುಕೇಶ್ ಬಾಕಿ ಇರಿಸಿಕೊಂಡಿದ್ದರು. ಈ ಹಣ ವಸೂಲಿಗಾಗಿ ಅವರ ಕಾರುಗಳನ್ನು ಹರಾಜು ಮಾಡಲಾಗುತ್ತಿದೆ. ತಮಿಳುನಾಡು, ಕೇರಳ ಸೇರಿದಂತೆ ವಿವಿಧೆಡೆ ವಶಪಡಿಸಿಕೊಂಡ ವಾಹನಗಳನ್ನು ಬೆಂಗಳೂರಿಗೆ ತಂದು, ಆದಾಯ ತೆರಿಗೆ ಕಚೇರಿಯಲ್ಲಿ ಇರಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
