ಬೆಂಗಳೂರು:
ಭಾರತದ ಮಾಜಿ ಸ್ಪಿನ್ನರ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸಹಾಯಕ ಸಿಬ್ಬಂದಿಯ ಭಾಗವಾಗಿರುವ ಸುನಿಲ್ ಜೋಶಿ, ಮುಂಬರುವ ಐಪಿಎಲ್ ಋತುವಿಗೆ ಮುಂಚಿತವಾಗಿ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ. 55 ವರ್ಷದ ಜೋಶಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ಹೊಸ ಪಾತ್ರವನ್ನು ವಹಿಸಿಕೊಳ್ಳುವ ಸಾಧ್ಯತೆ ಇದು ವೃತ್ತಿಪರ ಬದ್ಧತೆಗಳ ಕಾರಣದಿಂದಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್-ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದ ಜೋಶಿ, ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ನಲ್ಲಿ ಹುದ್ದೆಗೆ ಆಯ್ಕಕೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರ ಹೊಸ ಹುದ್ದೆಯ ಕುರಿತು ಅಧಿಕೃತ ಘೋಷಣೆ ಇನ್ನೂ ಬರದಿದ್ದರೂ, ಈ ನಡೆಯನ್ನು ಅವರ ಕೋಚಿಂಗ್ ವೃತ್ತಿಜೀವನದಲ್ಲಿ ಒಂದು ಹೆಜ್ಜೆಯಾಗಿ ನೋಡಲಾಗಿದೆ. ಪಂಜಾಬ್ ಕಿಂಗ್ಸ್ ಅಧಿಕಾರಿಯೊಬ್ಬರು ಜೋಶಿ ಅವರ ನಿರ್ಗಮನವನ್ನು ದೃಢಪಡಿಸಿದ್ದು, ಮಾಜಿ ಕ್ರಿಕೆಟಿಗನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
“ಮುಂಬರುವ ಐಪಿಎಲ್‌ಗೆ ಜೋಶಿ ಲಭ್ಯವಿಲ್ಲ ಎಂದು ಅವರು ನಮಗೆ ಪತ್ರ ಬರೆದಿದ್ದಾರೆ. ಅವರು ಒಳ್ಳೆಯ ವ್ಯಕ್ತಿ ಮತ್ತು ಫ್ರಾಂಚೈಸಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದೆ. ಆದರೆ ನಾವು ಯಾರೊಬ್ಬರ ವೃತ್ತಿಜೀವನದ ಬೆಳವಣಿಗೆಗೆ ಅಡ್ಡಿಯಾಗಲು ಬಯಸುವುದಿಲ್ಲ” ಎಂದು ಪಂಜಾಬ್ ಫ್ರಾಂಚೈಸಿಯ ಅಧಿಕಾರಿಯೊಬ್ಬರು ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ.
ಜೋಶಿ ತಮ್ಮ ನಿರ್ಧಾರವನ್ನು ಇತ್ತೀಚೆಗೆ ಫ್ರಾಂಚೈಸಿಯ ಉಸ್ತುವಾರಿ ವಹಿಸಿಕೊಂಡ ಮುಖ್ಯ ಕೋಚ್ ರಿಕಿ ಪಾಂಟಿಂಗ್ ಅವರಿಗೆ ತಿಳಿಸಿರುವುದಾಗಿ ವರದಿಯಾಗಿದೆ. ಜೋಶಿ ಪಂಜಾಬ್ ಕಿಂಗ್ಸ್‌ನೊಂದಿಗೆ 2020 ಮತ್ತು 2022 ರ ನಡುವೆ ಆಗಿನ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರ ಅಡಿಯಲ್ಲಿಯೂ ಕೆಲಸ ಮಾಡಿದ್ದರು. ನಂತರ ಭಾರತೀಯ ರಾಷ್ಟ್ರೀಯ ತಂಡಕ್ಕೆ ಮುಖ್ಯ ಆಯ್ಕೆದಾರರಾಗಿ ಸೇವೆ ಸಲ್ಲಿಸಿದ್ದರು.








