ನವದೆಹಲಿ:
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಕೋಲ್ಕತ್ತಾದಲ್ಲಿ ಯುವ ವೈದ್ಯೆಯ ಆಘಾತಕಾರಿ ಅತ್ಯಾಚಾರ-ಕೊಲೆ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದೆ.
ಸರ್ಜನ್ ವೈಸ್ ಅಡ್ಮಿರಲ್ ಆರ್ತಿ ಸರಿನ್, ಡಾ ನಾಗೇಶ್ವರ ರೆಡ್ಡಿ– ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ನ್ಯಾಷನಲ್ ಗ್ಯಾಸ್ಟ್ರೋಲಜಿಯ ವ್ಯವಸ್ಥಾಪಕ ನಿರ್ದೇಶಕರನ್ನು ಒಳಗೊಂಡ ರಾಷ್ಟ್ರೀಯ ಕಾರ್ಯಪಡೆಯನ್ನು ಸುಪ್ರೀಂ ಕೋರ್ಟ್ ರಚಿಸಿದೆ. ರಾಷ್ಟ್ರೀಯ ಕಾರ್ಯಪಡೆಯು ದೇಶದಲ್ಲಿ ವೈದ್ಯೆಯರ ಸುರಕ್ಷತೆ ಮತ್ತು ಇತರ ಸಮಸ್ಯೆಗಳನ್ನು ಪರಿಶೀಲಿಸುತ್ತದೆ. ಲಿಂಗ ಆಧಾರಿತ ಹಿಂಸಾಚಾರ, ಇಂಟರ್ನಿಗಳು, ನಿವಾಸಿ, ಅನಿವಾಸಿ ವೈದ್ಯರಿಗೆ ಕೆಲಸದ ಸ್ಥಳದಲ್ಲಿ ಗೌರವ ಮತ್ತು ಸುರಕ್ಷತೆ ಒದಗಿಸಲು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಪರಿಗಣಿಸುತ್ತದೆ.
ಅತ್ಯಾಚಾರ ಪ್ರಕರಣದ ತನಿಖೆಯ ಸ್ಥಿತಿಗತಿ ಕುರಿತು ವರದಿ ಸಲ್ಲಿಸುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದು, ಆಸ್ಪತ್ರೆಗಳಲ್ಲಿ ಗುಂಪು ದಾಳಿಯ ಘಟನೆಗಳ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರವನ್ನು ಸುಪ್ರೀಂ ಕೋರ್ಟ್ ಕೇಳಿದೆ. ಕಾರ್ಯಪಡೆಯು ವೈದ್ಯಕೀಯ ವೃತ್ತಿಪರರ ಸುರಕ್ಷತೆ, ಯೋಗಕ್ಷೇಮ ಮತ್ತು ಆರೋಗ್ಯ ರಕ್ಷಣೆ ಸಮಸ್ಯೆಗಳಿಗೆ ಸಂಬಂಧಿಸಿದ ಇತರ ವಿಷಯಗಳನ್ನು ಪರಿಶೀಲಿಸಬೇಕು ಎಂದು ಅದು ಹೇಳಿದೆ.