‘ಯಾವುದೇ ಧರ್ಮ ಮಾಲಿನ್ಯವನ್ನು ಉತ್ತೇಜಿಸಲ್ಲ…’ : ಸುಪ್ರೀಂಕೋರ್ಟ್

ನವದೆಹಲಿ: 

    ದೇಶದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಹವಾಮಾನ ವೈಪರೀತ್ಯದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆದಿದ್ದು ವಿಚಾರಣೆ ವೇಳೆ ಯಾವುದೇ ಧರ್ಮ ಮಾಲಿನ್ಯವನ್ನು ಉತ್ತೇಜಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಪಟಾಕಿ ಸಿಡಿಸಿದರೆ ಅದು ಜನರ ಆರೋಗ್ಯದ ಮೂಲಭೂತ ಹಕ್ಕಿನ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿರುವ ಸುಪ್ರೀಂ ಕೋರ್ಟ್ ದೆಹಲಿ ಪೊಲೀಸರಿಗೆ ಮತ್ತೊಮ್ಮೆ ಛೀಮಾರಿ ಹಾಕಿದೆ.

   ಪಟಾಕಿಗಳ ಮೇಲೆ ಹೇರಿರುವ ನಿಷೇಧ ಕೇವಲ ಪ್ರದರ್ಶನವಾಗಿದೆ. ನಿಷೇಧವನ್ನು ಗಂಭೀರವಾಗಿ ಜಾರಿಗೊಳಿಸಲಾಗಿಲ್ಲ. ನವೆಂಬರ್ 25ರೊಳಗೆ ಅಫಿಡವಿಟ್ ಸಲ್ಲಿಸುವಂತೆ ಪೊಲೀಸ್ ಆಯುಕ್ತರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಪಟಾಕಿ ತಯಾರಿಕೆ, ಮಾರಾಟ ಮತ್ತು ಸಿಡಿಸುವಿಕೆಯ ನಿಷೇಧವು ಅಕ್ಟೋಬರ್‌ನಿಂದ ಜನವರಿವರೆಗೆ ಮಾತ್ರ ಅನ್ವಯಿಸುತ್ತದೆ. ಇಡೀ ವರ್ಷಕ್ಕೆ ಏಕೆ ಅನ್ವಯಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ಅಧಿಕಾರಿಗಳನ್ನು ‘ನಿಷೇಧ ಕೆಲವೇ ತಿಂಗಳುಗಳ ಕಾಲ ಏಕೆ? ವರ್ಷವಿಡೀ ವಾಯು ಮಾಲಿನ್ಯ ಹೆಚ್ಚುತ್ತಲೇ ಇರುತ್ತದೆ ಎಂದು ಪ್ರಶ್ನಿಸಿದೆ.

   ಪಟಾಕಿ ನಿಷೇಧಿಸಲು ಏನು ಮಾಡಲಾಗಿದೆ ಎಂಬುದನ್ನು ವಿವರಿಸಿ ದೆಹಲಿ ಪೊಲೀಸ್ ಆಯುಕ್ತರು ಅಫಿಡವಿಟ್ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಪಟಾಕಿ ನಿಷೇಧಿಸಲು ವಿಶೇಷ ಸೆಲ್ ರಚಿಸುವಂತೆ ದೆಹಲಿ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಎಲ್ಲಾ ಎನ್‌ಸಿಆರ್ ರಾಜ್ಯಗಳು ಮಾಲಿನ್ಯವನ್ನು ಕಡಿಮೆ ಮಾಡಲು ತೆಗೆದುಕೊಂಡ ಕ್ರಮಗಳ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲು ಸೂಚಿಸಲಾಗಿದೆ. 

   ದೆಹಲಿ ಸರ್ಕಾರದ ವಕೀಲರು ಪಟಾಕಿ ನಿಷೇಧಿಸಿದ ಆದೇಶವನ್ನು ನ್ಯಾಯಾಲಯದಲ್ಲಿ ತೋರಿಸಿದರು. ನ್ಯಾಯಮೂರ್ತಿ ಓಕಾ ಅವರು, ನಿಮ್ಮ ಅಫಿಡವಿಟ್ ದೀಪಾವಳಿ ಸಂದರ್ಭದಲ್ಲಿ ಮಾತ್ರ ಪಟಾಕಿಯನ್ನು ನಿಷೇಧಿಸುವುದಾಗಿ ಹೇಳುತ್ತದೆ. ಮದುವೆ ಮತ್ತು ಚುನಾವಣೆಯ ಸಮಯದಲ್ಲಿ ನೀವು ನಿರ್ಬಂಧಗಳನ್ನು ಹೇರುವುದಿಲ್ಲ. ಇದಾದ ಬಳಿಕ ದೆಹಲಿ ಸರ್ಕಾರದ ವಕೀಲರು ವಾದ ಮಂಡಿಸಿ, ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರ ಶಾಶ್ವತ ನಿಷೇಧಕ್ಕೆ ನಿಮ್ಮ ಸೂಚನೆಗಳನ್ನು ಪರಿಗಣಿಸಲಾಗುವುದು ಎಂದು ವಾದಿಸಿದರು.

  ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದರೂ, ದೆಹಲಿಯು ವಿಶ್ವದ ಅತ್ಯಂತ ಕಲುಷಿತ ನಗರ ಎಂಬ ಬಿರುದನ್ನು ಪಡೆದುಕೊಂಡಿದೆ. ಅಂದಿನಿಂದ, ರಾಜಧಾನಿಯಲ್ಲಿನ ಗಾಳಿಯ ಗುಣಮಟ್ಟವು ‘ಅತ್ಯಂತ ಕಳಪೆ’ ವಿಭಾಗದಲ್ಲಿ ಉಳಿದಿದೆ.

Recent Articles

spot_img

Related Stories

Share via
Copy link
Powered by Social Snap