ನವದೆಹಲಿ:
ತಮಿಳುನಾಡು, ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿನ ರಾಜ್ಯಪಾಲರು ಮತ್ತು ರಾಜ್ಯಸರ್ಕಾರದ ನಡುವೆ ಕೆಲವು ವಿಚಾರದಲ್ಲಿ ಆಗಾಗ್ಗೆ ಸಂಘರ್ಷವಾಗುತ್ತಿರುವಂತೆಯೇ ರಾಜ್ಯ ಶಾಸಕಾಂಗದಿಂದ ಮಂಡಿಸಲಾದ ಮಸೂದೆಗಳಿಗೆ ಸಂಬಂಧಿಸಿದಂತೆ ಸಂವಿಧಾನದ 200ನೇ ವಿಧಿಯಡಿ ಭಾರತದಲ್ಲಿ ರಾಜ್ಯಪಾಲರ ಅಧಿಕಾರ ಮತ್ತು ಜವಾಬ್ದಾರಿಗಳನ್ನು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಮತ್ತು ಆರ್.ಮಹಾದೇವನ್ ಅವರನ್ನೊಳಗೊಂಡ ನ್ಯಾಯಪೀಠ, ರಾಜ್ಯಪಾಲರು ಜನರ ಪ್ರಜಾಸತ್ತಾತ್ಮಕ ಇಚ್ಛೆಯನ್ನು ಹಾಳು ಮಾಡದಿರುವ ಪ್ರಾಮುಖ್ಯತೆಯನ್ನು ಪ್ರಮುಖವಾಗಿ ಹೇಳಿದೆ. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅನಗತ್ಯ ವಿಳಂಬವನ್ನು ತಡೆಯಲು ಕ್ರಮಗಳನ್ನು ತಿಳಿಸಿದೆ. ರಾಜ್ಯಪಾಲರಿಗೆ ಕಳುಹಿಸಿದ ಮಸೂದೆಗಳಿಗೆ ನಿರ್ಧಾರ ಕೈಗೊಳ್ಳಲು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿದೆ.
ಸಂವಿಧಾನದ 200ನೇ ವಿಧಿಯಡಿ ರಾಜ್ಯಪಾಲರ ಪಾತ್ರ: ಮಸೂದೆಯೊಂದು ರಾಜ್ಯ ಶಾಸಕಾಂಗದಿಂದ ಅಂಗೀಕರಿಸಿದಾಗ ರಾಜ್ಯಪಾಲರು ಅನುಸರಿಸಬೇಕಾದ ಕಾರ್ಯವಿಧಾನವನ್ನು ಭಾರತೀಯ ಸಂವಿಧಾನದ 200 ನೇ ವಿಧಿಯು ವಿವರಿಸುತ್ತದೆ. ರಾಜ್ಯಪಾಲರಿಗೆ ಮೂರು ಆಯ್ಕೆಗಳಿವೆ: ಮಸೂದೆಗೆ ಒಪ್ಪಿಗೆ ನೀಡಬಹುದು ಅಥವಾ ಮಸೂದೆಗೆ ಒಪ್ಪಿಗೆಯನ್ನು ತಡೆಹಿಡಿಯಬಹುದು, ಇಲ್ಲವೇ ಭಾರತದ ರಾಷ್ಟ್ರಪತಿಗಳ ಪರಿಗಣನೆಗೆ ಮಸೂದೆಯನ್ನು ಕಾಯ್ದಿರಿಸುವ ಅಧಿಕಾರ ಹೊಂದಿದ್ದಾರೆ.
ರಾಜ್ಯಪಾಲರು ಅಂಗೀಕಾರ ನೀಡದೆ ತಡೆಹಿಡಿದು ಶಾಸಕಾಂಗಕ್ಕೆ ಹಿಂದಿರುಗಿಸಿದಾಗ, ರಾಜ್ಯಪಾಲರ ಸಲಹೆಗಳ ಆಧಾರದ ಮೇಲೆ ಶಾಸಕಾಂಗವು ಅದನ್ನು ಮರುಪರಿಶೀಲಿಸಿ, ಮರು ಅಂಗೀಕರಿಸದ ಹೊರತು ಮಸೂದೆಯು ರದ್ದಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ರಾಜ್ಯಪಾಲರ ಅಂಕಿತ ಹಾಕದಿರುವಾಗ ಸ್ಪಷ್ಟವಾದ ಕಾರ್ಯವಿಧಾನವನ್ನು ಅನುಸರಿಸಬೇಕಾಗುತ್ತದೆ. ಅನಗತ್ಯ ವಿಳಂಬ ಮಾಡಬಾರದು ಎಂದು ಸಂವಿಧಾನ ಹೇಳುತ್ತದೆ. ಯಾವುದೇ ಕ್ರಮ ಕೈಗೊಳ್ಳದೆ ಇರೋದು ಒಂದು ಮಾರ್ಗವಲ್ಲ. ಮೂರು ನಿಗದಿತ ಕ್ರಮಗಳಲ್ಲಿ ಒಂದನ್ನು ರಾಜ್ಯಪಾಲರು ತಕ್ಷಣವೇ ನಿರ್ಧರಿಸಬೇಕು ಎಂದು ನ್ಯಾಯಾಲಯ ಪ್ರತಿಪಾದಿಸಿತು.
ರಾಜ್ಯಪಾಲರಿಗೆ ‘ವೀಟೋ’ ಅಧಿಕಾರ ಇಲ್ಲ: ರಾಜ್ಯಪಾಲರು ವೀಟೋ ಅಧಿಕಾರವನ್ನು ಹೊಂದಿಲ್ಲ ಎಂದು ಸುಪ್ರೀಂಕೋರ್ಟ್ ಒತ್ತಿ ಹೇಳಿದೆ. ಅಂದರೆ ಮಸೂದೆ ಕುರಿತು ಬಹಳ ದಿನದವರೆಗೂ ಏನನ್ನೂ ಮಾಡದೆ ನಿರಾಕರಿಸುವಂತಿಲ್ಲ. 200ನೇ ವಿಧಿಯ ಮೊದಲ ನಿಬಂಧನೆಯಲ್ಲಿ “ಸಾಧ್ಯವಾದಷ್ಟು ಬೇಗ” ಎಂಬ ಪದ ಸೇರಿಸಿದ್ದು, ಇದು ತುರ್ತಾಗಿ ಆಗಬೇಕಾದ ನಿರೀಕ್ಷೆಯಾಗಿದೆ. ರಾಜ್ಯಪಾಲರು ಸಾಂವಿಧಾನಿಕ ಕಾರಣಗಳಿಲ್ಲದೆ ಅಂಕಿತ ಹಾಕಲು ವಿಳಂಬ ಮಾಡುವ ಅಥವಾ ತಡೆಹಿಡಿಯುವ ವೀಟೋ ಅಧಿಕಾರ ಹೊಂದಿಲ್ಲ. ರಾಜ್ಯಪಾಲರು ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಮತ್ತು ಬಿಲ್‌ಗಳ ಪ್ರಕ್ರಿಯೆಯಲ್ಲಿ ಯಾವುದೇ ಅನಗತ್ಯ ವಿಳಂಬವನ್ನು ತಪ್ಪಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಶಾಸಕಾಂಗವು ಈಗಾಗಲೇ ಮರುಪರಿಶೀಲಿಸಿದ ನಂತರ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಮಸೂದೆಯನ್ನು ಕಾಯ್ದಿರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಶಾಸಕಾಂಗಕ್ಕೆ ವಾಪಸ್ ಕಳುಹಿಸಿದ ಮಸೂದೆಯನ್ನು ಪರಿಶೀಲಿಸಿ ಮತ್ತೆ ರಾಜ್ಯಪಾಲರಿಗೆ ಕಳುಹಿಸಿದಾಗ ರಾಜ್ಯಪಾಲರು ಅದಕ್ಕೆ ಒಪ್ಪಿಗೆ ನೀಡಬೇಕು ಅಥವಾ ಆರ್ಟಿಕಲ್ 200 ರ ಅಡಿಯಲ್ಲಿ ಇನ್ನೆರಡು ಕ್ರಮಗಳಲ್ಲಿ ಒಂದನ್ನು ತೆಗೆದುಕೊಳ್ಳಬೇಕು. ಬಿಲ್ ಆರಂಭದಲ್ಲಿ ಮಂಡಿಸಿದ ಮಸೂದೆಯಂತೆಯೇ ಇದ್ದರೆ, ರಾಜ್ಯಪಾಲರು ಅದನ್ನು ಮತ್ತೆ ರಾಷ್ಟ್ರಪತಿಗಳ ಪರಿಗಣನೆಗೆ ಕಳುಹಿಸಲು ಸಾಧ್ಯವಿಲ್ಲ.
ಈ ರೀತಿಯ ಪ್ರಕರಣದಲ್ಲಿ ತಮಿಳುನಾಡು ರಾಜ್ಯಪಾಲರ ಕ್ರಮ ಕಾನೂನುಬಾಹಿರ ಎಂಬುದನ್ನು ಸುಪ್ರೀಂಕೋರ್ಟ್ ಹೇಳಿದೆ. ರಾಜ್ಯ ಶಾಸಕಾಂಗದಿಂದ ಮರು ಪರಿಶೀಲಿಸಿ ರಾಜ್ಯಪಾಲರಿಗೆ ಮತ್ತೆ ಕಳುಹಿಸಿದ್ದರೂ ತಮಿಳುನಾಡು ರಾಜ್ಯಪಾಲರು 10 ಬಿಲ್ ಗಳನ್ನು ರಾಷ್ಟ್ರಪತಿಗಳ ಪರಿಗಣನೆಗಾಗಿ ಕಾಯ್ದಿರಿಸಿದ್ದರು. ಇದು ಸರಿಯಾದಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಆ ಮಸೂದೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿ ತೆಗೆದುಕೊಳ್ಳುವ ಕ್ರಮಕ್ಕೆ ಮಾನ್ಯತೆ ಇರುವುದಿಲ್ಲ.
ವಿಧೇಯಕಗಳನ್ನು ಶಾಸಕಾಂಗ ಮರುಪರಿಶೀಲಿಸಿದ ದಿನಾಂಕದಂದು ರಾಜ್ಯಪಾಲರಿಂದ ಅಂಗೀಕರಿಸಲ್ಪಟ್ಟಿದೆ ಎಂದು ಪರಿಗಣಿಸಲಾಗುತ್ತದೆ. ಪ್ರಕರಣದಲ್ಲಿ ಸಂಪೂರ್ಣ ನ್ಯಾಯ ಖಾತ್ರಿಗೆ ಸಂವಿಧಾನದ 142 ನೇ ವಿಧಿಯಡಿ ನ್ಯಾಯಾಲಯಕ್ಕೆ ಈ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್ ಹೇಳಿತು.
200 ನೇ ವಿಧಿಯು ರಾಜ್ಯಪಾಲರ ಕಾರ್ಯಕ್ಕೆ ಸಂಬಂಧಿಸಿದಂತೆ ಸಮಯವನ್ನು ನಿರ್ದಿಷ್ಟಪಡಿಸದಿದ್ದರೂ, ಮಸೂದೆ ಕುರಿತು ಸಮ್ಮತಿ ನೀಡದೆ ಬಹಳ ದಿನಗಳವರೆಗೆ ಕಾಯಿಸುವುದು ಅಸಮಂಜಸವಾಗಿದೆ ಎಂದು ನ್ಯಾಯಾಲಯ ಪರಿಗಣಿಸಿದೆ. ಸಂವಿಧಾನದಲ್ಲಿ ಸೇರಿಸಲಾಗಿರುವ “ಸಾಧ್ಯವಾದಷ್ಟು ಬೇಗ” ಎಂಬ ಪದವು ತುರ್ತು ನಿರೀಕ್ಷೆಯಾಗಿದೆ. ರಾಜ್ಯಪಾಲರು ಸೂಕ್ತ ಸಮಯದೊಳಗೆ ಕಾರ್ಯನಿರ್ವಹಿಸಬೇಕು.
ರಾಜ್ಯಪಾಲರು ಅಂಗೀಕಾರ ತಡೆಹಿಡಿದರೆ ಅಥವಾ ರಾಷ್ಟ್ರಪತಿಗಳಿಗೆ ಮಸೂದೆಯನ್ನು ಕಾಯ್ದಿರಿಸಿದರೆ, ಅವರು ರಾಜ್ಯ ಸಚಿವ ಸಂಪುಟದ ಸಲಹೆಯ ಆಧಾರದ ಮೇಲೆ ಗರಿಷ್ಠ ಒಂದು ತಿಂಗಳೊಳಗೆ ಕಾರ್ಯನಿರ್ವಹಿಸಬೇಕು.ರಾಜ್ಯ ಸಚಿವ ಸಂಪುಟದ ಸಲಹೆಗೆ ವಿರುದ್ಧವಾಗಿ ರಾಜ್ಯಪಾಲರು ಒಪ್ಪಿಗೆಯನ್ನು ತಡೆಹಿಡಿದರೆ, ಸಲಹೆ ಸಂದೇಶದೊಂದಿಗೆ ಮೂರು ತಿಂಗಳೊಳಗೆ ಮಸೂದೆಯನ್ನು ಹಿಂತಿರುಗಿಸಬೇಕು.ರಾಜ್ಯ ಸಚಿವ ಸಂಪುಟ ಸಲಹೆಗೆ ವಿರುದ್ಧವಾಗಿ ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಮಸೂದೆಯನ್ನು ಕಾಯ್ದಿರಿಸಿದರೆ, ಅವರು ಅದನ್ನು ಮೂರು ತಿಂಗಳೊಳಗೆ ಮಾಡಬೇಕು.
ಮರುಪರಿಶೀಲನೆಯ ನಂತರದ ಸಮೂದೆಯನ್ನು ರಾಜ್ಯಪಾಲರಿಗೆ ಕಳುಹಿಸಿದ ನಂತರ ಅವರು ಗರಿಷ್ಠ ಒಂದು ತಿಂಗಳೊಳಗೆ ಒಪ್ಪಿಗೆ ನೀಡಬೇಕು. ಈ ಸಮಯಾವಧಿಯಲ್ಲಿ ರಾಜ್ಯಪಾಲರೂ ಏನನ್ನೂ ಮಾಡದಿದ್ದರೆ ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಆ ಮೂಲಕ ಅನಗತ್ಯ ವಿಳಂಬಗಳಿಂದ ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಅಡ್ಡಿಯಾಗುವುದಿಲ್ಲ ಎಂಬುದು ಖಾತ್ರಿಯಾಗುತ್ತದೆ.
ಸಂವಿಧಾನದಲ್ಲಿ ವಿವರಿಸಿರುವ ಕೆಲವು ವಿನಾಯಿತಿಗಳೊಂದಿಗೆ ರಾಜ್ಯಪಾಲರು ಸಾಮಾನ್ಯವಾಗಿ ರಾಜ್ಯ ಸಚಿವ ಸಂಪುಟದ ಸಲಹೆಯ ಮೇರೆಗೆ ಕಾರ್ಯನಿರ್ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ರಾಷ್ಟ್ರಪತಿಗಳ ಪರಿಗಣನೆಗೆ ಮೀಸಲಾತಿ ಮಸೂದೆಯಂತಹ ಸಂವಿಧಾನದಿಂದ ಅಗತ್ಯವಿರುವ ನಿದರ್ಶನಗಳಲ್ಲಿ ಮಾತ್ರ ರಾಜ್ಯಪಾಲರು ವಿವೇಚನೆ ಅಧಿಕಾರ ಚಲಾಯಿಸಬಹುದು. ಈ ವಿಧಾನವು ರಾಜ್ಯಪಾಲರು ರಾಜ್ಯದ ಮುಖ್ಯಸ್ಥರಾಗಿ ಮಂತ್ರಿ ಪರಿಷತ್ ಸಲಹೆಯ ಮೇರೆಗೆ ಕಾರ್ಯನಿರ್ವಹಿಸುತ್ತಾರೆ ಎಂಬ ವಿಶಾಲವಾದ ತತ್ವಕ್ಕೆ ಸ್ಥಿರವಾಗಿದೆ.
ಈ ಹಿನ್ನೆಲೆಯಲ್ಲಿ ಬಿ.ಕೆ.ಪವಿತ್ರಾ ಪ್ರಕರಣದ ಹಿಂದಿನ ತೀರ್ಪನ್ನು ತಳ್ಳಿಹಾಕಿದ ಕೋರ್ಟ್, ಮೀಸಲಾತಿ ಮಸೂದೆ ಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರು ವಿವೇಚನೆ ಅಧಿಕಾರ ಚಲಾಯಿಸಬಹುದು ಎಂದು ಸೂಚಿಸಿತ್ತು. ನಿರ್ದಿಷ್ಟವಾಗಿ ಶಂಶೇರ್ ಸಿಂಗ್ ಪ್ರಕರಣದಲ್ಲಿ, ರಾಜ್ಯಪಾಲರ ಅಧಿಕಾರಗಳು ಸಾಮಾನ್ಯವಾಗಿ ರಾಜ್ಯ ಸಚಿವ ಸಂಪುಟದ ಸಲಹೆಯೊಂದಿಗೆ ಹೊಂದಿಕೆಯಾಗಬೇಕು ಎಂದು ಸ್ಪಷ್ಟಪಡಿಸಿತು.
ನ್ಯಾಯಾಂಗ ಮೇಲ್ಮನವಿ ಲಿಖಿತ ಸಂವಿಧಾನದ ಮೂಲಭೂತ ಲಕ್ಷಣವಾಗಿದೆ ಎಂಬ ತತ್ವವನ್ನು ಸುಪ್ರೀಂ ಕೋರ್ಟ್ ಬಲವಾಗಿ ಹೇಳಿತು. ಮಸೂದೆಗಳಿಗೆ ಅಂಗೀಕಾರವನ್ನು ತಡೆಹಿಡಿಯುವುದು ಅಥವಾ ರಾಷ್ಟ್ರಪತಿಗಳಿಗೆ ಮಸೂದೆಗಳನ್ನು ಕಾಯ್ದಿರಿಸುವುದು ಸೇರಿದಂತೆ ಸಂವಿಧಾನದ 200 ನೇ ವಿಧಿಯಡಿ ರಾಜ್ಯಪಾಲರ ಕ್ರಮಗಳು ಸಾಂವಿಧಾನಿಕ ಮಿತಿಯೊಳಗೆ ಬರುವವರೆಗೆ ನ್ಯಾಯಾಂಗ ಪರಿಶೀಲನೆಗೆ ಒಳಪಟ್ಟಿರುತ್ತವೆ. ಅಂತಹ ನಿರ್ಧಾರಗಳನ್ನು ಸರಿಯಾದ ಸಾಂವಿಧಾನಿಕ ಸಮರ್ಥನೆ ಇಲ್ಲದೆ ಮಾಡಿದ್ದರೆ ಅವುಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದು ಸುಪ್ರೀಂಕೋರ್ಟ್ ದೃಢಪಡಿಸಿತು.
