ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್‌ಗೆ 10 ದಿನ ರಿಲೀಫ್‌, ತೀರ್ಪು ಕಾಯ್ದಿರಿಸಿದ ನ್ಯಾಯಪೀಠ

ಬೆಂಗಳೂರು:

     ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ  ನೀಡಿರುವ ಜಾಮೀನು ರದ್ದು ಕೋರಿ ಬೆಂಗಳೂರು ಪೊಲೀಸರು ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಇಂದು ನಡೆಸಿದ್ದು, ತೀರ್ಪನ್ನು ಕಾಯ್ದಿರಿಸಿದೆ. ಹೀಗಾಗಿ 10 ದಿನಗಳ ಮಟ್ಟಿಗೆ ದರ್ಶನ್‌ಗೆ ತಾತ್ಕಾಲಿಕ ರಿಲೀಫ್‌ ದೊರೆತಿದೆ. ಲಿಖಿತ ವಾದಾಂಶಗಳನ್ನು ಒಂದು ವಾರದೊಳಗೆ 3 ಪುಟಗಳಲ್ಲಿ ಸಲ್ಲಿಸಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ.

    ದರ್ಶನ್‌ & ಗ್ಯಾಂಗ್‌ನಿಂದ ನಡೆದಿದ್ದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದಲ್ಲಿ ದರ್ಶನ್ ಹಾಗೂ ಮತ್ತಿತರರ ಪರ ವಾದ ಮಂಡನೆ ಮುಕ್ತಾಯವಾಗಿದೆ. ವಾದ, ಪ್ರತಿವಾದ ಆಲಿಸಿ ಸುಪ್ರೀಂ ಕೋರ್ಟ್‌ ಆದೇಶ ಕಾಯ್ದಿರಿಸಿದೆ. ಹೀಗಾಗಿ ದರ್ಶನ್ ಮತ್ತು ಗ್ಯಾಂಗ್​ಗೆ 10 ದಿನಗಳ ಕಾಲ ತಾತ್ಕಾಲಿಕ ರಿಲೀಫ್ ದೊರೆತಿದೆ. ಕನಿಷ್ಟ 10 ದಿನಗಳ ಬಳಿಕವಷ್ಟೇ ದರ್ಶನ್ ಜಾಮೀನಿಗೆ ಸಂಬಂಧಿಸಿ ತೀರ್ಪು ಬರಲಿದೆ.

   ಸುಪ್ರೀಂಕೋರ್ಟ್​ನಲ್ಲಿ ಕಳೆದ ವಾರ ನಡೆದ ವಿಚಾರಣೆ ವೇಳೆ, ನಮಗೆ ಪೊಲೀಸರು ನೀಡಿರುವ ಸಾಕ್ಷ್ಯಗಳು ತೃಪ್ತಿ ತಂದಿವೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಜತೆಗೆ ಹೈಕೋರ್ಟ್ ಜಾಮೀನು ನೀಡಲು ನೀಡಿರುವ ಕಾರಣಗಳು ಸಮಂಜಸವಾಗಿಲ್ಲ. ಹೈಕೋರ್ಟ್ ತನ್ನ ವಿವೇಚನೆ ಸೂಕ್ತವಾಗಿ ಬಳಸಿಲ್ಲ ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಹೈಕೋರ್ಟ್ ನೀಡಿರುವ ಜಾಮೀನಿನ ವಿಷಯದಲ್ಲಿ ನಾವೇಕೆ ಮಧ್ಯಪ್ರವೇಶ ಮಾಡಬಾರದೆಂದು ಹೇಳಿ ಎಂದು ದರ್ಶನ್ ಪರ ವಕೀಲ ಕಪಿಲ್ ಸಿಬಲ್​ಗೆ ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು.

   ಜಾಮೀನು ನೀಡುವಾಗ ಹೈಕೋರ್ಟ್‌ ತನ್ನ ವಿವೇಚನೆಯನ್ನು ಸೂಕ್ತವಾಗಿ ಬಳಸಿಲ್ಲ ಎಂದು ನ್ಯಾ. ಪರ್ದಿವಾಲಾ ಆಕ್ಷೇಪಿಸಿದ್ದರು. ಈ ಬಗ್ಗೆ ಏನು ಹೇಳಬಯಸುತ್ತೀರಿ ಎಂದು ದರ್ಶನ್‌ ಪರ ಹಿರಿಯ ವಕೀಲ ಕಪಿಲ್‌ ಸಿಬಲ್‌ಗೆ ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ಈ ಮೂಲಕ ನಟ ದರ್ಶನ್ ಹಾಗೂ ಉಳಿದವರಿಗೆ ಜಾಮೀನು ನೀಡಿರುವುದಕ್ಕೆ ಸುಪ್ರೀಂ ಕೋರ್ಟ್ ಅತೃಪ್ತಿ, ಅಸಮಾಧಾನ ವ್ಯಕ್ತಪಡಿಸಿತ್ತು.

    ಸರ್ಕಾರಿ ವಕೀಲ ಅನಿಲ್ ನಿಶಾನಿ ಅವರು, ನಾವು ಸುಪ್ರೀಂ ಕೋರ್ಟ್​ಗೆ ಕೊಟ್ಟಿರುವ ದಾಖಲೆಯನ್ನು ಕೋರ್ಟ್ ಪರಿಶೀಲನೆ ಮಾಡಿದೆ. ದರ್ಶನ್ ಅವರ ಇತರೆ ಕ್ರೈಮ್​ಗಳ ಬಗ್ಗೆಯೂ ದಾಖಲೆ ನೀಡಿದ್ದೇವೆ. ಜತೆಗೆ ಜೈಲಿನಲ್ಲಿ ಮಾಡಿರುವ ಬೇರೆ ಚಟುವಟಿಕೆಗಳ ಬಗ್ಗೆಯೂ ದಾಖಲೆ ಕೊಟ್ಟಿದ್ದೇವೆ. ಹೈಕೋರ್ಟ್ ಬೇಲ್ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಹೇಳಿದ್ದರು.

Recent Articles

spot_img

Related Stories

Share via
Copy link