ನವದೆಹಲಿ:
ಕೊಲೆ ಪ್ರಕರಣದಲ್ಲಿ ಕುಸ್ತಿಪಟು ಸುಶೀಲ್ ಕುಮಾರ್ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ವಾರದೊಳಗೆ ಶರಣಾಗುವಂತೆ ಆದೇಶಿಸಿದೆ. ಈ ವರ್ಷದ ಮಾರ್ಚ್ನಲ್ಲಿ ದೆಹಲಿ ಹೈಕೋರ್ಟ್ ಸುಶೀಲ್ ಕುಮಾರ್ ಅವರಿಗೆ ಜಾಮೀನು ನೀಡಿತ್ತು.
ನ್ಯಾಯಮೂರ್ತಿ ಸಂಜೀವ್ ನರುಲಾ ಅವರು ಸುಶೀಲ್ ಕುಮಾರ್ ಅವರಿಗೆ 50,000 ರೂ.ಗಳ ಜಾಮೀನು ಬಾಂಡ್ ಮತ್ತು ಅದೇ ಮೊತ್ತದ ಇಬ್ಬರು ಶ್ಯೂರಿಟಿಗಳನ್ನು ಸಲ್ಲಿಸುವ ಮೂಲಕ ಇದೇ ವರ್ಷದ ಮಾರ್ಚ್ನಲ್ಲಿ ಸುಶೀಲ್ಗೆ ಜಾಮೀನು ನೀಡಿದ್ದರು. ಈ ಹಿಂದೆ 2023ರಲ್ಲಿ ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ ಅವರಿಗೆ 7 ದಿನಗಳ ಕಾಲ ಮಧ್ಯಂತರ ಜಾಮೀನು ನೀಡಲಾಗಿತ್ತು. ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಸಾಗರ್ ಧಂಕರ್ ಅವರನ್ನು ಥಳಿಸಿ ಕೊಂದ ಆರೋಪದ ಮೇಲೆ 2021ರ ಮೇ ತಿಂಗಳಿನಲ್ಲಿ ಸುಶೀಲ್ ಕುಮಾರ್ ಅವರನ್ನು ಬಂಧಿಸಲಾಗಿತ್ತು.
2021 ರ ಮೇ 4 ರಂದು ಛತ್ರಸಾಲ್ ಕ್ರೀಡಾಂಗಣದ ಪಾರ್ಕಿಂಗ್ ಸ್ಥಳದಲ್ಲಿ ಸಾಗರ್ ಧಂಕರ್ ಮತ್ತು ಅವರ ಸ್ನೇಹಿತರಾದ ಜೈ ಭಗವಾನ್ ಹಾಗೂ ಭಹತ್ ಮೇಲೆ ಕೆಲವು ಆಸ್ತಿ ವಿವಾದದ ಮೇಲೆ ಶುಶೀಲ್ ಕುಮಾರ್ ಹಲ್ಲೆ ನಡೆಸಿ ತಕೆ ಮರೆಸಿಕೊಂಡಿದ್ದರು. ಕೆಲ ದಿನಗಳ ಬಳಿಕ ಅವರನ್ನು ಬಂಧಿಸಿ ಹತ್ಯೆಯ ಪ್ರಮುಖ ಆರೋಪಿಯನ್ನಾಗಿ ಮಾಡಿ ದೆಹಲಿ ಪೊಲೀಸರು 170 ಪುಟಗಳ ಚಾರ್ಜ್ ಶೀಟ್ ನ್ಯಾಯಾಲಕ್ಕೆ ಸಲ್ಲಿಸಿದ್ದರು.
ಸಾಗರ್ ರಾಣಾ ಕೊಲೆಗೆ ಸಂಬಂಧಿಸಿ ಮೂರು ವಾರ ಪೊಲೀಸರಿಗೆ ಸುಶೀಲ್ ಕುಮಾರ್ ಚಳ್ಳೆಹಣ್ಣು ತಿನ್ನಿಸಿದ್ದರು. ಪ್ರತಿನಿತ್ಯ ವಾಸದ ಸ್ಥಳ ಬದಲಿಸುತ್ತಿದ್ದ ಅವರು ಸಿಮ್ ಕಾರ್ಡ್ಗಳನ್ನೂ ಪದೇ ಪದೇ ಬದಲಿಸುತ್ತಿದ್ದರು. ಹೀಗಾಗಿ ಲುಕ್ ಔಟ್ ನೋಟಿಸ್ ಹೊರಡಿಸಬೇಕಾಯಿತು. ಮಾಹಿತಿ ನೀಡುವವರಿಗೆ ಬಹುಮಾನ ಘೋಷಿಸಬೇಕಾಯಿತು. ಅಂತಿಮ ಅಸ್ತ್ರವಾಗಿ ನಿರೀಕ್ಷಣಾ ಜಾಮೀನಿಗೂ ಅರ್ಜಿ ಹಾಕಿದ್ದರು. ಆದರೆ ನ್ಯಾಯಾಲಯ ಅದನ್ನು ತಿರಸ್ಕರಿಸಿ ಅವರಿಗೆ ಬಲವಾದ ಪೆಟ್ಟು ನೀಡಿತ್ತು.
ಸುಶೀಲ್ ಕುಮಾರ್ ದೇಶದ ಖ್ಯಾತ ಕುಸ್ತಿಪಟುಗಳಲ್ಲಿ ಒಬ್ಬರಾಗಿದ್ದರು. 2008ರಲ್ಲಿ ನಡೆದಿದ್ದ ಬೀಜಿಂಗ್ ಒಲಿಂಪಿಕ್ಸ್ ಕಂಚಿನ ಪದಕ ಮತ್ತು 2012 ರಲ್ಲಿ ಲಂಡನ್ನಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಆದರೆ ಆ ಬಳಿಕ ಕೊಲೆ ಆರೋಪದಲ್ಲಿ ಜೈಲು ಸೇರಿ ತಮ್ಮ ಕುಸ್ತಿ ವೃತ್ತಿ ಬದುಕನ್ನು ಹಾಳು ಮಾಡಿಕೊಂಡರು. ಅನೇಕ ಕುಸ್ತಿ ಟೂರ್ನಿಗಳಲ್ಲಿ ಚಾಂಪಿಯನ್ ಪಟ್ಟಗಳನ್ನು ಅಲಂಕರಿಸಿದ್ದ ಸುಶೀಲ್ ಆಗಾಗ ತೋರಿದ ದುರ್ವರ್ತನೆಗಳಿಂದಲೂ ಸುದ್ದಿಯಾಗಿದ್ದರು.








