ನವದೆಹಲಿ:
ಅರವಿಂದ್ ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ತಿರಸ್ಕರಿಸಿದೆ.
ದೆಹಲಿ ಮದ್ಯನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ರನ್ನು ಬಂಧಿಸಿರುವ ಕಾರಣ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಲು ಅರ್ಹರಲ್ಲ ಅವರನ್ನು ಸಿಎಂ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ, ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ಕೇಜ್ರಿವಾಲ್ ಅವರನ್ನು ಕೇಳುವ ಯಾವುದೇ ಕಾನೂನು ಹಕ್ಕಿಲ್ಲ. ಕೇಜ್ರಿವಾಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು, ಮುಂದುವರೆಸುವುದು ದೆಹಲಿ ಲೆಫ್ಟಿನೆಂಟ್ ಗವರ್ನರ್’ಗೆ ಬಿಟ್ಟ ವಿಚಾರ. ಇದರಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿದೆ.
ಈ ಹಿಂದೆ ಅರ್ಜಿದಾರರಾದ ಎಎಪಿ ಮಾಜಿ ಶಾಸಕ ಸಂದೀಪ್ ಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ ಛೀಮಾಪಿ ಹಾಕಿ ಅರ್ಜಿಯನ್ನು ತಿರಸ್ಕರಿಸಿತ್ತು. ಅಲ್ಲದೆ, ನ್ಯಾಯಾಲಯವು ಅರ್ಜಿದಾರರಿಗೆ 50 ಸಾವಿರ ರೂಪಾಯಿ ದಂಡವನ್ನೂ ವಿಧಿಸಿತ್ತು. ನ್ಯಾಯಾಂಗ ವ್ಯವಸ್ಥೆಯನ್ನು ಗೇಲಿ ಮಾಡಬೇಡಿ ಎಂದು ಕಟ್ಟುನಿಟ್ಟಿನ ಧ್ವನಿಯಲ್ಲಿ ನ್ಯಾಯಾಲಯ ಎಚ್ಚರಿಕೆ ನೀಡಿತ್ತು.
ಯಾವುದೇ ಮುಖ್ಯಮಂತ್ರಿಯನ್ನು ಪದಚ್ಯುತಗೊಳಿಸಲು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಯಾವುದೇ ಅವಕಾಶವಿದೆಯೇ ಎಂದು ದೆಹಲಿ ಹೈಕೋರ್ಟ್ ಅರ್ಜಿದಾರರನ್ನು ಕೇಳಿತ್ತು.
ಅರ್ಜಿ ಸಲ್ಲಿಸುವ ಮೂಲಕ ನ್ಯಾಯಾಲಯದ ಸಮಯವನ್ನು ಹಾಳು ಮಾಡುತ್ತಿದ್ದೀರಿ ಎಂದು ಪೀಠ ಹೇಳಿತ್ತು. ನಾವು ನಿಮಗೆ ಭಾರೀ ದಂಡವನ್ನು ವಿಧಿಸುತ್ತಿದ್ದೇವೆ. ನ್ಯಾಯಾಲಯದ ಒಳಗೆ ರಾಜಕೀಯ ಭಾಷಣ ಮಾಡಬೇಡಿ, ಭಾಷಣ ಮಾಡಲು ಬೀದಿಯ ಯಾವುದೋ ಮೂಲೆಗೆ ಹೋಗಿ ಎಂದು ಖಾರವಾಗಿ ನುಡಿದಿತ್ತು.
ನಿಮ್ಮ ಅರ್ಜಿದಾರರು ರಾಜಕೀಯ ವ್ಯಕ್ತಿಗಳಾಗಿರುತ್ತಾರೆ, ಆದರೆ, ನ್ಯಾಯಾಲಯವು ರಾಜಕೀಯ ಮಹತ್ವಾಕಾಂಕ್ಷೆಗಳ ಆಧಾರದ ಮೇಲೆ ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಿತ್ತು.