ನವದೆಹಲಿ:
2024ರ ನೀಟ್ -ಯುಜಿ ಪರೀಕ್ಷೆ ಫಲಿತಾಂಶ ಬಗ್ಗೆ ಹಲವು ಹೈಕೋರ್ಟ್ ಗಳಲ್ಲಿ ಸಲ್ಲಿಕೆಯಾಗಿ ಬಾಕಿ ಉಳಿದಿರುವ ಅರ್ಜಿಗಳನ್ನು ವರ್ಗಾಯಿಸುವಂತೆ ಕೋರಿ ಮತ್ತು ಸಿಬಿಐ ತನಿಖೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ಕುರಿತು ಪ್ರತಿಕ್ರಿಯೆ ಕೇಳಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ಹಲವರಿಗೆ ಶುಕ್ರವಾರ ನೊಟೀಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ರಜಾಕಾಲದ ಪೀಠವು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (NTA) ವಕೀಲರ ಸಲ್ಲಿಕೆಯನ್ನು ಗಮನಿಸಿ ಬಹುಸಂಖ್ಯೆಯ ದಾವೆಗಳನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಂಡಿತು. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಅವ್ಯವಹಾರಗಳ ಆರೋಪಗಳ ಮೇಲೆ 2024 ರ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯನ್ನು ರದ್ದುಗೊಳಿಸುವಂತೆ ಕೋರಿ ಹಲವು ಅರ್ಜಿಗಳು ಹೈಕೋರ್ಟ್ ಗಳಲ್ಲಿ ಸಲ್ಲಿಕೆಯಾಗಿದ್ದು, ಇತ್ಯರ್ಥವಾಗದೆ ಉಳಿದಿವೆ.
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನೀಟ್ ಪರೀಕ್ಷೆಯಲ್ಲಿನ (NEET-UG 2024) ಇತರ ಅಕ್ರಮಗಳ ಆರೋಪಗಳ ಕುರಿತು ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ ಮನವಿಯ ಕುರಿತು ಸುಪ್ರೀಂಕೋರ್ಟ್ ಇಂದು ಕೇಂದ್ರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ನೋಟಿಸ್ ಜಾರಿ ಮಾಡಿ ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಳಿದೆ.
ಮುಂದಿನ ವಿಚಾರಣೆಯನ್ನು ಜುಲೈ 8 ರಂದು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಮಧ್ಯೆ, ಹೈಕೋರ್ಟ್‌ಗಳಿಂದ ಉಚ್ಛ ನ್ಯಾಯಾಲಯಕ್ಕೆ ಪ್ರಕರಣಗಳನ್ನು ವರ್ಗಾಯಿಸಲು ಕೋರಿರುವ ಇತರ ಮೂರು ಅರ್ಜಿಗಳನ್ನು ಹಿಂಪಡೆಯಲು ಎನ್‌ಟಿಎ ಬಯಸಿದೆ. ಮೇ 5 ರಂದು ನಡೆದ ಪರೀಕ್ಷೆಯಲ್ಲಿ ಕೃಪಾಂಕಗಳನ್ನು ನೀಡಿದ್ದ(Grace marks)1,563 ಅಭ್ಯರ್ಥಿಗಳಿಗೆ ಜೂನ್ 23ರಂದು ಮರು ಪರೀಕ್ಷೆ ನಡೆಸಲು ನಿರ್ಧರಿಸಿದೆ.
ಎನ್‌ಟಿಎ ಗ್ರೇಸ್ ಮಾರ್ಕ್ ನಿರ್ಧಾರವನ್ನು ಹಿಂಪಡೆದಿದ್ದು, ಜೂನ್ 23 ರಂದು ಮರು ಪರೀಕ್ಷೆಯನ್ನು ನಡೆಸಲಿದೆ. ಮರು ಪರೀಕ್ಷೆಯ ಫಲಿತಾಂಶವನ್ನು ಜೂನ್ 30 ರಂದು ಪ್ರಕಟಿಸಲಾಗುವುದು, ಜುಲೈ 6 ರಂದು ಪ್ರಾರಂಭವಾಗುವ ಕೌನ್ಸೆಲಿಂಗ್ ಪ್ರಕ್ರಿಯೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಎನ್ ಟಿಎ ಹೇಳಿದೆ.