ನವದೆಹಲಿ :
ಕೊರೊನಾ ಸೋಂಕಿನಿಂದ ನಿಧನರಾದ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ನಡೆಯಲಿದೆ.
ಅಂಗಡಿಯವರ ಮೃತದೇಹವನ್ನು ಬೆಳಗಾವಿಗೆ ಕೊಂಡೊಯ್ಯಲು ಕುಟುಂಬ ವರ್ಗ ಮನವಿ ಮಾಡಿತ್ತು. ರಾಜ್ಯ ಸರ್ಕಾರ ಮತ್ತು ಏರ್ ಇಂಡಿಯಾ ಸಮ್ಮತಿ ಸೂಚಿಸಿದ್ದರೂ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿತ್ತು. ಕೊರೊನಾ ಸೊಂಕಿತರಾಗಿರುವುದರಿಂದ ನಾವೇ ನಿಯಮಗಳನ್ನು ಉಲ್ಲಂಘನೆ ಮಾಡುವುದು ಬೇಡ. ನಿಯಮಗಳನ್ನು ಪಾಲಿಸಿ ಮಾದರಿಯಾಗುವಂತೆ ಕೇಂದ್ರ ನಾಯಕರು ಅಂಗಡಿ ಕುಟುಂಬಸ್ಥರಿಗೆ ಸಲಹೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ಇಂದು ಸಂಜೆ ದೆಹಲಿಯ ದ್ವಾರಕಾ ಸೆಕ್ಟರ್ 24 ರಲ್ಲಿರುವ ಲಿಂಗಾಯತ ರುದ್ರ ಭೂಮಿಯಲ್ಲಿ ನಡೆಯಲಿದೆ.
ಪಾರ್ಥಿವ ಶರೀರವನ್ನು ಸಚಿವರ ಹುಟ್ಟೂರಾದ ಬೆಳಗಾವಿಗೆ ತಂದು ಇಲ್ಲಿಯೇ ಅಂತ್ಯಕ್ರಿಯೆ ನಡೆಸಬೇಕು ಎಂಬುದು ಕುಟುಂಬಸ್ಥರು ಹಾಗೂ ಅಭಿಮಾನಿಗಳ ಬಯಕೆಯಾಗಿತ್ತು. ಕೊರೊನಾ ಸೋಂಕಿತರು ಎಲ್ಲಿ ಸಾವನ್ನಪ್ಪುತ್ತಾರೋ ಅಲ್ಲಿಯೇ ಅಂತ್ಯ ಸಂಸ್ಕಾರ ಮಾಡಬೇಕು ಎಂಬ ನಿಯಮವಿರುವ ಹಿನ್ನಲೆ ಅವರ ಶರೀರವನ್ನು ಹುಟ್ಟೂರಿಗೆ ಸಾಗಿಸಲು ಅಡ್ಡಿಯಾಗಿದೆ.
ಸುರೇಶ ಅಂಗಡಿ ಅವರ ಹಿರಿಯ ಪುತ್ರಿ ಡಾಕ್ಟರ್ ಸ್ಮೃತಿ ದೆಹಲಿ ಪ್ರಯಾಣ ಮಾಡಬೇಕಾದ ಹಿನ್ನಲೆಯಲ್ಲಿ ಸಂಜೆ 4-5 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಕುಟುಂಬ ಸದಸ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/09/Suresh-angdi.jpg)