ಬೆಂಗಳೂರು :
ಇತ್ತೀಚಿಗಷ್ಟೇ ಬೆಂಗಳೂರಿಗೆ ಬಂದು ಕಾಂಗ್ರೆಸ್ ಶಾಸಕರ ಮತ್ತು ಸಚಿವರ ಜೊತೆ ಒನ್ ಟು ಒನ್ ಸಭೆ ನಡೆಸಿದ್ದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೆಲವು ಮಂದಿ ಸರ್ಕಾರಿ ಅಧಿಕಾರಿಗಳಿಗೂ ಕೂಡ ಬುಲಾವ್ ನೀಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ವಿಚಾರವಾಗಿ ಇದೀಗ ಸಹಕಾರ ಸಚಿವ ಕೆಎನ್ ರಾಜಣ್ಣ ಮತ್ತು ಜೆಡಿಎಸ್ ತೀವ್ರ ವಾಗ್ದಾಳಿ ನಡೆಸಿವೆ. ಸುರ್ಜೇವಾಲ ಸರ್ಕಾರಿ ಅಧಿಕಾರಿಗಳನ್ನು ಕರೆಸಿ ಮಾತುಕತೆ ನಡೆಸಿದ್ದೇ ಆದರೆ ಅದು ಸಂವಿಧಾನ ಬಾಹಿರ ಕೃತ್ಯ ಎಂದು ರಾಜಣ್ಣ ಹೇಳಿದ್ದಾರೆ. ಜೆಡಿಎಸ್ ಕೂಡ ಇದೇ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸುರ್ಜೇವಾಲರದ್ದು ಸಂವಿಧಾನ ವಿರೋಧಿ ಕೃತ್ಯ ಎಂದು ಟೀಕಿಸಿದೆ.
ಕಳೆದ ಎರಡು ವಾರ ರಾಜ್ಯದಲ್ಲಿ ಠಿಕಾಣಿ ಹೂಡಿದ್ದ ಸುರ್ಜೇವಾಲ, ಶಾಸಕರ ಸಭೆ ನಡೆಸಿ ಚರ್ಚೆಗೆ ನಾಂದಿ ಹಾಡಿದ್ದರು. ಇದರ ಮಧ್ಯೆ, ಕೆಲವು ಪ್ರಮುಖ ಇಲಾಖೆಗಳ ಅಧಿಕಾರಿಗಳಿಗೆ ಸುರ್ಜೆವಾಲಾ ಬುಲಾವ್ ಹೊರಡಿಸಿದ್ದರು ಎಂಬ ಆರೋಪವಿದೆ. ಖಾಸಗಿ ಹೊಟೇಲ್ನಲ್ಲಿ ಕೆಲ ಪ್ರಮುಖ ಹಿರಿಯ ಅಧಿಕಾರಿಗಳ ಜೊತೆ ಸುರ್ಜೇವಾಲಾ ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಸುರ್ಜೇವಾಲಾ ಅಧಿಕಾರಿಗಳಿಗೆ ಕರೆ ಮಾಡಿದ್ದ ಬಗ್ಗೆ ಕೆಲ ಸಚಿವರಿಗೆ ಮಾಹಿತಿ ದೊರೆತಿದೆ. ಮಾಹಿತಿ ಸಿಕ್ಕ ತಕ್ಷಣ ಕೆಲ ಸಚಿವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸುರ್ಜೇವಾಲಾಗೆ ಸಚಿವರ, ಶಾಸಕರ ಸಭೆ ಮಾಡುವ ಅವಕಾಶ ಇದೆ. ಆದರೆ, ಸರ್ಕಾರದ ಅಧಿಕಾರಿಗಳನ್ನು ಭೇಟಿ ಮಾಡಿ ಯಾವುದೇ ಸೂಚನೆ ನೀಡುವುದು ಸರಿಯಲ್ಲ. ನಿಯಮಗಳ ಪ್ರಕಾರ ಕೂಡ ಸುರ್ಜೇವಾಲಾ ಅಧಿಕಾರಿಗಳ ಸಭೆ ನಡೆಸುವುದು ತಪ್ಪು. ನಿಯಮಬದ್ಧವಾಗಿ ಸುರ್ಜೇವಾಲಾಗೆ ಅಧಿಕಾರಿಗಳ ಸಭೆ ನಡೆಸಲು ಅವಕಾಶವೇ ಇಲ್ಲ. ಕಾನೂನು ಕೂಡ ಹೀಗೆ ಸಭೆ ನಡೆಸಲು ಅವಕಾಶ ನೀಡುವುದಿಲ್ಲ ಎಂದು ಕೆಲ ಸಚಿವರು ಖಡಕ್ ಆಗಿಯೇ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಶಾಸಕರನ್ನು ಕರೆದು ಸುರ್ಜೇವಾಲಾ ಮೀಟಿಂಗ್ ಮಾಡಬಹುದು. ಆದರೆ ಸರ್ಕಾರಿ ಅಧಿಕಾರಿಗಳನ್ನು ಕರೆದು ಮಾತನಾಡುತ್ತಾರೆ ಎಂದರೆ ಅದು ಸಂವಿಧಾನಬಾಹಿರ ಕೃತ್ಯ ಆಗುತ್ತದೆ. ಅಧಿಕಾರಿಗಳನ್ನು ಕರೆದು ಅವರ ಜೊತೆಗೆ ಚರ್ಚೆ ಮಾಡುವುದು ಸಂವಿಧಾನ ವಿರೋಧಿ ಕೆಲಸ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ ಹೇಳಿದ್ದಾರೆ.
ಹಿಂದೆ ಒಮ್ಮೆ ಅದೇ ತರಹ ಸಭೆ ಮಾಡಿದ್ದರು. ಆದರೆ, ಆಗ ಅಲ್ಲಿ ಸುರ್ಜೇವಾಲಾ ಆಹ್ವಾನ ನೀಡಿದ್ದಾಗಿರಲಿಲ್ಲ. ಶಾಂಗ್ರಿಲಾ ಹೊಟೇಲ್ನಲ್ಲಿಯೇ ಸುರ್ಜೆವಾಲಾ ವಾಸ್ತವ್ಯ ಇದ್ದರು. ಡಿಸಿಎಂ ಬೆಂಗಳೂರು ಅಧಿಕಾರಿಗಳ ಸಭೆ ನಡೆಸುವಾಗ ಸುರ್ಜೆವಾಲಾ ಬಂದಿದ್ದರು. ಆದರೆ, ಈಗ ಅಧಿಕಾರಿಗಳನ್ನು ತಾವೇ ಸ್ವತಃ ಕರೆದಿದ್ದಾರೆ ಎಂದರೆ ಅದು ಸಂವಿಧಾನದ ಬಾಹಿರ. ನಮ್ಮ ಶಾಸಕರನ್ನು, ಸಚಿವರನ್ನು ಕರೆದು ಬೇಕಾದರೆ ಏನಾದರೂ ಮಾಹಿತಿ ಪಡೆದುಕೊಳ್ಳಬಹುದು. ಆದರೆ ಅಧಿಕಾರಿಗಳನ್ನು ಕರೆದು ಮಾಹಿತಿ ಪಡೆಯಲು ಕಾನೂನುಬದ್ಧ ಅವಕಾಶ ಇಲ್ಲ ಎಂದು ರಾಜಣ್ಣ ಹೇಳಿದರು.
ವಸೂಲಿವಾಲಾ ಸುರ್ಜೇವಾಲ ಕೇವಲ ರಾಜ್ಯ ಉಸ್ತುವಾರಿಯೋ ? ಕರ್ನಾಟಕದ ಮುಖ್ಯಮಂತ್ರಿಯೋ? ಕಾಂಗ್ರೆಸ್ ಸ್ಪಷ್ಟಪಡಿಸಬೇಕು. ಇಷ್ಟು ದಿನ ಕಾಂಗ್ರೆಸ್ ಶಾಸಕರು ಹಾಗೂ ಸಚಿವರೊಂದಿಗೆ ಸಭೆ ನಡೆಸುತ್ತಿದ್ದ ರಣದೀಪ್ ಸುರ್ಜೇವಾಲಾ, ಈಗ ಸೂಪರ್ ಸಿಎಂ ರೀತಿ ಸರ್ಕಾರದ ಕಾರ್ಯದರ್ಶಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸುರ್ಜೇವಾಲಾಗೆ ಆ ಅಧಿಕಾರ ಕೊಟ್ಟವರು ಯಾರು? ಸರ್ಕಾರಿ ಅಧಿಕಾರಿಗಳ ಜೊತೆ ಸಭೆ ನಡೆಸುವುದು ಸಂವಿಧಾನ ವಿರೋಧಿ ಕೃತ್ಯ ಎಂದು ಜೆಡಿಎಸ್ ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಕಿಡಿ ಕಾರಿದೆ
