42 ಮಂದಿ ಶಾಸಕರೊಂದಿಗೆ ಸುರ್ಜೇವಾಲಾ ಮುಖಾಮುಖಿ ಚರ್ಚೆ….!

ಬೆಂಗಳೂರು:

   ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಸಚಿವರು, ಅಧಿಕಾರಿಗಳ ಧೋರಣೆ ವಿರುದ್ಧ ಸ್ವಪಕ್ಷೀಯ ಶಾಸಕರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಅಹವಾಲು ಆಲಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರು ಇಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, 45 ಮಂದಿ ಕಾಂಗ್ರೆಸ್ ಶಾಸಕರೊಂದಿಗೆ ಮುಖಾಮುಖಿ ಚರ್ಚೆ ನಡೆಸಿ, ಅಹವಾಲು ಆಲಿಸಲಿದ್ದಾರೆಂದು ತಿಳಿದುಬಂದಿದೆ.

   ಶಾಸಕರಾದ ಬಿ.ಆರ್. ಪಾಟೀಲ್ ಹಾಗೂ ರಾಜು ಕಾಗೆ ಅವರು ಆಡಳಿತ ವೈಫಲ್ಯದ ಬಗ್ಗೆ ಮಾಡಿರುವ ಬಹಿರಂಗ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ಜೊತೆಗೆ ಹಲವು ಶಾಸಕರು ಅನುದಾನ ಕೊರತೆ, ಸಚಿವರ ಅಸಹಕಾರ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನಗೊಂಡಿದ್ದಾರೆ.

   ಈ ಹಿನ್ನೆಲೆಯಲ್ಲಿ ಸುರ್ಜೇವಾಲಾ ಅವರು ಬೆಂಗಳೂರಿಗೆ ಆಗಮಿಸಿ ಜೂ.30ರಿಂದ ಜು.2ರವರೆಗೆ 3 ದಿನಗಳ ಕಾಲ ಬೆಂಗಳೂರು ವಿಭಾಗದ 27 ಮಂದಿ, ಮೈಸೂರು ವಿಭಾಗದ 13 ಶಾಸಕರೊಂದಿಗೆ ಮೊದಲ ಹಂತದಲ್ಲಿ ‘ಒನ್ ಟು ಒನ್’ ಸಭೆ ನಡೆಸಲಿದ್ದಾರೆ.

   ಇದಕ್ಕೂ ಮೊದಲು ಆಡಳಿತ ವೈಫಲ್ಯದ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರ ಹಾಕಿರುವ ಶಾಸಕ ರಾಜು ಕಾಗೆ ಹಾಗೂ ಬಿ.ಆರ್. ಪಾಟೀಲ್ ಜತೆ ಪ್ರತ್ಯೇಕವಾಗಿ ತಲಾ ಅರ್ಧಗಂಟೆ ಚರ್ಚೆ ನಡೆಸಿ ಮನವೊಲಿಕೆ ಯತ್ನ ಮಾಡಲಿದ್ದಾರೆ ಎನ್ನಲಾಗಿದೆ. ಸುರ್ಜೇವಾಲಾ ಭೇಟಿ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ಸುರ್ಜೇವಾಲಾ ಅವರು ಬೆಂಗಳೂರು ಭೇಟಿಯ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಲಿದ್ದಾರೆ ಎಂದು ಹೇಳಿದ್ದಾರೆ.

    ಸುರ್ಜೇವಾಲ ಈಗಾಗಲೇ ಶಾಸಕರಿಗೆ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ. ನಾನು ಕೂಡ ಶಾಸಕರಿಗೂ ಸಂದೇಶಗಳನ್ನು ರವಾನಿಸುತ್ತೇನೆಂದು ತಿಳಿಸಿದರು.ಇದೇ ವೇಳೆ ಕಾವೇರಿ ಆರತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪೂಜೆಗೆ ಯಾರೂ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ. ಹೈಕೋರ್ಟ್ ಹೊರಡಿಸಿರುವ ನೋಟಿಸ್‌ಗೆ ರಾಜ್ಯ ಸರ್ಕಾರ ಉತ್ತರಿಸಲಿದೆ ಎಂದರು.

   ಪರಿಸರ ಕಾಳಜಿಯನ್ನು ಉಲ್ಲೇಖಿಸಿ ಕೃಷ್ಣರಾಜ ಸಾಗರ (ಕೆಆರ್‌ಎಸ್) ಜಲಾಶಯದ ಬಳಿ ಕಾವೇರಿ ಆರತಿ ನಡೆಸುವ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಮೇರೆಗೆ ಹೈಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.ಕೆಲವು ಸಂಘಟನೆಗಳು ಕೆಲವು ಕಳವಳಗಳನ್ನು ಹೊಂದಿವೆ. ಸರ್ಕಾರ ಅವುಗಳನ್ನು ಪರಿಹರಿಸುತ್ತದೆ. ಪೂಜೆ ಪ್ರತಿದಿನವೂ ನಡೆಯುತ್ತಿದೆ ಎಂದರು.

   ಆಗಸ್ಟ್‌ನಲ್ಲಿ ರಾಜ್ಯದಲ್ಲಿ ಬದಲಾವಣೆಯಾಗಲಿದೆ ಎಂಬ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, “ಅಶೋಕ ಯಾವಾಗ ಜ್ಯೋತಿಷಿಯಾದರು? ಅವರು ಜ್ಯೋತಿಷಿಯಾಗಿದ್ದರೆ, ನನಗೆ ಅಪಾಯಿಂಟ್‌ಮೆಂಟ್ ಕೊಡಿ, ಏಕೆಂದರೆ ನಾನು ಅವರನ್ನು ಸಂಪರ್ಕಿಸಲು ಬಯಸುತ್ತೇನೆ ಎಂದು ವ್ಯಂಗ್ಯವಾಡಿದರು

Recent Articles

spot_img

Related Stories

Share via
Copy link