ಸೆ 21 ರಂದು ಈ ವರ್ಷದ ಕೊನೆಯ ಸೂರ್ಯಗ್ರಹಣ…..!

ಬೆಂಗಳೂರು

    ಈ ವರ್ಷದ ಕೊನೆಯ ಸೂರ್ಯಗ್ರಹಣ ಸೆ. 21 ರಂದು ಮಹಾಲಯ ಅಮವಾಸೆ  ದಿನದಂದು ಸಂಭವಿಸಲಿದೆ. ಆ ಮೂಲಕ ಖಗೋಳದಲ್ಲಿ ನಡೆಯಲಿರುವ ಮತ್ತೊಂದು ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಇಡೀ ವಿಜ್ಞಾನ ಲೋಕವೆ ಸಜ್ಜಾಗಿದೆ. ಕೇವಲ ಹದಿನೈದು ದಿನಗಳ ಅಂತರದಲ್ಲಿ ಸೂರ್ಯ-ಚಂದ್ರ ಗ್ರಹಣಕ್ಕೆ ಖಗೋಳ ಸಾಕ್ಷಿಯಾಗುತ್ತಿದ್ದು, ವಿಜ್ಞಾನದ ಆಸಕ್ತರಿಗೆ ಇದು ಸಾಕಷ್ಟು ಮಹತ್ವಕ್ಕೆ ಕಾರಣವಾಗಿದೆ.

   ಕಳೆದ ಒಂದು ವಾರದ ಹಿಂದೆಯಷ್ಟೇ ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸಿತ್ತು. ಇದಾದ ಹದಿನೈದು ದಿನಗಳ ಅಂತರದಲ್ಲಿ ಇದೀಗ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಇದು 2025 ರ ಅಂತಿಮ ಸೂರ್ಯ ಗ್ರಹಣವೂ ಹೌದು.

   ಸೂರ್ಯನನ್ನು ಸಂಪೂರ್ಣವಾಗಿ ನಿರ್ಬಂಧಿಸುವ ಒಟ್ಟು ಗ್ರಹಣಕ್ಕಿಂತ ಭಿನ್ನವಾಗಿದೆ ಅಂತಿದ್ದಾರೆ ವಿಜ್ಞಾನಿಗಳು. ಇದು ಭಾಗಶಃ ಸೂರ್ಯ ಗ್ರಹಣವಾಗಿದ್ದು, ವಿಜ್ಞಾನಿಗಳಿಗೆ ಹಾಗೂ ಆಸಕ್ತರಿಗೆ ವಿಶೇಷವಾಗಿದೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ ಬಂದಾಗ, ಈ ಅಪರೂಪದ ಸೂರ್ಯ ಗ್ರಹಣ ಸಂಭವಿಸುತ್ತದೆ. ಭೂಮಿಯ ಮೇಲೆ ತನ್ನ ನೆರಳನ್ನು ಬೀಳಿಸಿ ಸೂರ್ಯನ ಬೆಳಕನ್ನು ಭಾಗಶಃ ಅಥವಾ ಸಂಪೂರ್ಣವಾಗಿ ನಿರ್ಬಂಧಿಸುತ್ತದೆ. ಈ ಅಪರೂಪದ ಘಟನೆಯನ್ನು ಚಂದ್ರನ ನೆರಳು ಮಾರ್ಗದಲ್ಲಿ ನಿರ್ದಿಷ್ಟ ಪ್ರದೇಶಗಳಿಂದ ಮತ್ತು ಅಮಾವಾಸ್ಯೆಯ ಸಮಯದಲ್ಲಿ ಮಾತ್ರ ಕಾಣಬಹುದಾಗಿದೆ.

   ಸೆಪ್ಟೆಂಬರ್‌ ತಿಂಗಳಲ್ಲಿ ಚಂದ್ರ ಗ್ರಹಣ ಮುಗಿದ ಬೆನ್ನಲ್ಲೇ ಸೂರ್ಯ ಗ್ರಹಣವೂ ಬಂದಿದೆ. ಸೆ. 7ರಂದು ಚಂದ್ರಗ್ರಹಣ ನಡೆದಿತ್ತು. ಗ್ರಹಣ ಹಿಡಿದ ಚಂದ್ರನನ್ನ ನೋಡಲೂ ಸಾಧ್ಯವಾಗಿತ್ತು. ಇದೀಗ ಸೆ.21ರಂದು ಸೂರ್ಯ ಗ್ರಹಣ ಸಂಭವಿಸಲಿದೆ. ಪಿತೃಪಕ್ಷದ ಅಮಾವಾಸ್ಯೆಯ ದಿನವಾದ ಸೆ. 21ರಂದು ಸಂಭವಿಸಲಿರುವ ಸೂರ್ಯ ಗ್ರಹಣವು 2025ರ ಎರಡನೇ ಮತ್ತು ಕೊನೆಯ ಗ್ರಹಣವಾಗಿರಲಿದೆ. ಈ ವರ್ಷದ ಮೊದಲ ಸೂರ್ಯ ಗ್ರಹಣ ಮಾರ್ಚ್‌ 29ರಂದು ಸಂಭವಿಸಿತ್ತು. ಸೆ. 21 ರಂದು ಕೊನೆಯ ಸೂರ್ಯ ಗ್ರಹಣ ಸಂಭವಿಸಲಿದೆ. 

   ಭೂಮಿ ಮತ್ತು ಸೂರ್ಯನ ನಡುವೆ ಸಮಾನಾಂತರ ರೇಖೆಯಲ್ಲಿ ಚಂದ್ರ ಬಂದಾಗ ಸೂರ್ಯಗ್ರಹಣ ಸಂಭವಿಸುತ್ತದೆ. ಸೆ.21ರಂದು ರಾತ್ರಿ 11 ಗಂಟೆಯಿಂದ ಮರುದಿನ ಮುಂಜಾನೆ 3.23ರವರೆಗೆ ಸೂರ್ಯಗ್ರಹಣ ಇರಲಿದೆ. ಈ ಸಲ ಆಗುತ್ತಿರುವುದು ಭಾಗಶಃ ಅಥವಾ ಖಂಡಗ್ರಾಸ ಸೂರ್ಯಗ್ರಹಣ ಅಂದರೆ ಚಂದ್ರನ ನೆರಳು ಸೂರ್ಯನ ಒಂದು ಭಾಗಕ್ಕೆ ಮಾತ್ರ ಆವರಿಸುತ್ತದೆ. ಸೆ.7ರ ಚಂದ್ರ ಗ್ರಹಣವು ಭಾರತದಾದ್ಯಂತ ಕಾಣಿಸಿತ್ತು. ಆದರೆ ಸೆ.21ರ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.

   ಸೆ.21ರ ಖಂಡಗ್ರಾಸ ಸೂರ್ಯಗ್ರಹಣ ಅಮೆರಿಕಾದ ಸಮೋವಾ, ನ್ಯೂಜಿಲ್ಯಾಂಡ್‌, ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ, ಕುಕ್‌ ಐಸ್‌ಲ್ಯಾಂಡ್‌, ಫಿಜಿ, ಫ್ರೆಂಚ್‌ ಪೋಲಿನೇಷ್ಯಾ, ಪೆಸಿಫಿಕ್ ದ್ವೀಪಗಳು ಮತ್ತು ಓಷಿಯಾನಿಯಾ ಮತ್ತಿತರ ದೇಶಗಳಲ್ಲಿ ಕಾಣಿಸಿಕೊಳ್ಳಲಿದೆ. 

   ಈ ಸಲ ಸೂರ್ಯನಿಗೆ ಗ್ರಹಣ ಸಂಭವಿಸುವ ಸಮಯ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ, ಅಂದರೆ ಭಾರತದಲ್ಲಿ ಸೂರ್ಯ ಅದಾಗಲೇ ಅಸ್ತಂಗತನಾಗಿರುತ್ತಾನೆ. ಹೀಗಾಗಿ ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುವುದಿಲ್ಲ ಎಂದು ನೆಹರು ತಾರಾಲಯ ನಿರ್ದೇಶಕ ಗುರು ಪ್ರಸಾದ್​ ಅವರು ಹೇಳಿದ್ದಾರೆ. 

  ಗ್ರಹಣಕ್ಕೆ ಧಾರ್ಮಿಕವಾಗಿ ವಿಶೇಷ ಸ್ಥಾನವಿದೆ. ಗ್ರಹಣವೆಂದರೆ ದೋಷ ಎಂದೂ ನಂಬಿಕೆಯಿದೆ. ಗ್ರಹಣವು ವಿವಿಧ ರಾಶಿಗಳ ಮೇಲೆ ಕೆಟ್ಟ ಪ್ರಭಾವವನ್ನೂ ಬೀರುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಗ್ರಹಣ ಕಾಲದಲ್ಲಿ ಅನೇಕರು ಕಟ್ಟುನಿಟ್ಟಾಗಿ ಕೆಲವು ನಿಯಮಗಳನ್ನ ಪಾಲನೆ ಮಾಡುತ್ತಾರೆ. ವೈಜ್ಞಾನಿಕ ಮತ್ತು ಧಾರ್ಮಿಕ ಕಾರಣಗಳಿಂದಾಗಿ ಭಾರತದಲ್ಲಿ ಈ ಸೂರ್ಯ ಗ್ರಹಣ ತುಂಬ ವಿಶೇಷ ಸ್ಥಾನ ಪಡೆದಿದೆ.

Recent Articles

spot_img

Related Stories

Share via
Copy link