ನವದೆಹಲಿ:
ತಮಿಳುನಾಡು ಓಟಗಾರ್ತಿ ಧನಲಕ್ಷ್ಮಿ ಶೇಖರ್ ಎರಡನೇ ಬಾರಿ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾದ ನಂತರ ಅವರನ್ನು ತಾತ್ಕಾಲಿಕ ಅಮಾನತು ಮಾಡಲಾಗಿದೆ. ಅವರು ತಪ್ಪಿತಸ್ಥರೆಂದು ಸಾಬೀತಾದರೆ ಎಂಟು ವರ್ಷಗಳ ನಿಷೇಧ ಶಿಕ್ಷೆಗೆ ಗುರಿಯಾಗಲಿದ್ದಾರೆ. ಅವರು ಡ್ರೋಸ್ಟನೊಲೋನ್ ಸ್ಟೀರಾಯ್ಡ್ ಸೇವಿಸಿರುವುದು 2ನೇ ಬಾರಿ ಪತ್ತೆಯಾಗಿದೆ.
ಡೋಪಿಂಗ್ ಪ್ರಕರಣದಲ್ಲಿ ಮೂರು ವರ್ಷಗಳ ನಿಷೇಧದ ನಂತರ ಇತ್ತೀಚೆಗಷ್ಟೇ ಅವರು ಸ್ಪರ್ಧೆಗೆ ಮರಳಿದ್ದರು. 27 ವರ್ಷದ ಧನಲಕ್ಷ್ಮಿ, ಕಳೆದ ತಿಂಗಳು ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಅಂತರ-ರಾಜ್ಯ ಕ್ರೀಡಾಕೂಟದಲ್ಲಿ ಮಹಿಳೆಯರ 100 ಮೀ ಓಟದಲ್ಲಿ 11.36 ಸೆಕೆಂಡುಗಳ ವೈಯಕ್ತಿಕ ಅತ್ಯುತ್ತಮ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದಿದ್ದರು. ಮೊದಲ ಬಾರಿಗೆ ಅವರು ಮೆಟಾಂಡಿಯೆನೋನ್ (ಅನಾಬೊಲಿಕ್ ಆಂಡ್ರೊಜೆನಿಕ್ ಸ್ಟೀರಾಯ್ಡ್) ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದ ಕಾರಣ ಮೂರು ವರ್ಷಗಳ ನಿಷೇಧ ಶಿಕ್ಷೆ ಅನುಭವಿಸಿದ್ದರು.
ಅವರ ಈ ಹಿಂದಿನ ನಿಷೇಧ ಅವಧಿಯು ಈ ವರ್ಷದ ಜುಲೈ 17ರಂದು ಕೊನೆಗೊಂಡಿತ್ತು. ಇದೀಗ ಅವರು ಮತ್ತೆ ರಾಷ್ಟ್ರೀಯ ಮಾದಕ ದ್ರವ್ಯ ನಿಗ್ರಹ ಸಂಸ್ಥೆ (ನಾಡ)ಯ ಬಲೆಗೆ ಬಿದ್ದಿದ್ದಾರೆ. ಪಂಜಾಬ್‌ನ ಸಂಗ್ರೂರ್‌ನಲ್ಲಿ ನಡೆದ ಭಾರತೀಯ ಮುಕ್ತ ಅತ್ಲೆಟಿಕ್ಸ್ ಕೂಟದ ವೇಳೆ ಅವರ ವಿವಾದಾತ್ಮಕ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಸದ್ಯ ಧನಲಕ್ಷ್ಮಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದೆ.








