ಬೆಳಗಾವಿ
ಡಿ. 10 ರಂದು ಶಕ್ತಿಸೌಧಕ್ಕೆ ಟ್ರ್ಯಾಕ್ಟರ್ ಮೂಲಕ ಮುತ್ತಿಗೆ ಹಾಕಲು ಪಂಚಮಸಾಲಿ ಸಮುದಾಯ ಸಿದ್ಧವಾಗಿದ್ದಾಗಲೇ ಸರ್ಕಾರ ಹೋರಾಟದ ವಾಹನಗಳು ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಿತ್ತು. ಈ ವಿಚಾರ ಅಧಿವೇಶನದ ಒಳಗೂ ಮತ್ತು ಹೊರಗೂ ಸದ್ದು ಮಾಡಿದೆ. ಬಿಜೆಪಿ ನಾಯಕರು ಸದನದ ಬಾವಿಗೆ ಇಳಿದು ಗುಡುಗಿದರೆ, ಇತ್ತ ಬಸವಜಯ ಮೃತ್ಯುಂಜಯ ಸ್ವಾಮೀಜಿ ಡಿಸಿ, ಪೊಲೀಸ್ ಕಮಿಷನರ್ ಜೊತೆಗೆ ಸಭೆ ಮಾಡಿ ತರಾಟೆ ತೆಗೆದುಕೊಂಡಿದ್ದಾರೆ. ಬಳಿಕ ನಾಳೆಯ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು, ಶಾಂತಿಯುತ ಹೋರಾಟಕ್ಕೆ ಅವಕಾಶ ನೀಡಲಾಗಿದೆ.
ಜಿಲ್ಲಾಡಳಿತಕ್ಕೆ ಎಷ್ಟು ಜನ ಬರುತ್ತಾರೆ, ಎಲ್ಲಿ ಅವರನ್ನ ಕೂಡಿಸಬೇಕು ಎನ್ನುವುದು ಕ್ಲಿಯರ್ ಇರಲಿಲ್ಲ. ಜನಸಾಗರ ಸೇರುವಾಗ ಯಾವುದೇ ತೊಂದರೆ ಆಗಬಾರದೆಂದು ಇಂದು ಶಾಂತ ರೀತಿ ಸಭೆ ನಡೆಸಿದ್ದೇವೆ. ಸಭೆಯಲ್ಲಿ ಟ್ರ್ಯಾಕ್ಟರ್ ಬೇಡ ಅಂದಿದ್ದಕ್ಕೆ ಸ್ವಾಮೀಜಿ ಅವರು ಒಪ್ಪಿಕೊಂಡಿದ್ದಾರೆ. ಇನ್ನೂಳಿದಂತೆ ಕ್ರೂಸರ್ ಸೇರಿ ಬೇರೆ ವಾಹನದಲ್ಲಿ ಬರಬಹುದು. ನಾವು ಅನುಮತಿ ಕೊಟ್ಟಿದ್ದೇವೆ ಜಾಗ ಫೈನಲ್ ಆಗಿದೆ ಎಂದಿದ್ದಾರೆ.
ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾತನಾಡಿ, ಈಗಾಗಲೇ ಅಧಿವೇಶನ ಸಲುವಾಗಿ ಹೆಚ್ಚಿನ ಸಿಬ್ಬಂದಿ ಕರೆಸಿದ್ದೇವೆ. ಕೊಂಡಸಕೊಪ್ಪದಲ್ಲಿ ಹೋರಾಟಕ್ಕೆ ಅನುಮತಿ ಕೊಟ್ಟಿದ್ದೇವೆ. ಪ್ರತಿಭಟನೆ ಶಾಂತ ರೀತಿಯಿಂದ ಮಾಡುತ್ತೇವೆ ಅಂತಾ ಭರವಸೆ ಕೊಟ್ಟಿದ್ದಾರೆ. ಅದೇ ರೀತಿ ಆಗುತ್ತೆ ಅನ್ನೋ ನಂಬಿಕೆ ಇದೆ ಎಂದರು. ಓರ್ವ ಎಸ್‌ಪಿ ಈಗಿನ ಹೋರಾಟಕ್ಕೆ ನೇಮಕ ಮಾಡಿತ್ತು. ನಾಳೆಯ ಹೋರಾಟಕ್ಕೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡುತ್ತೇವೆ. ಮುತ್ತಿಗೆ ಹಾಕಲು ನಾವು ಅವಕಾಶ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ.
ಡಿಸಿ, ಪೊಲೀಸ್ ಕಮಿಷನರ್ ಜೊತೆಗೆ ಸಭೆ ಬಳಿಕ ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯಿಸಿದ್ದು, ನಿನ್ನೆ ಜಿಲ್ಲಾಧಿಕಾರಿ ಆದೇಶ ಸಮಾಜಕ್ಕೆ ಅಸಮಾಧಾನ ಉಂಟು ಮಾಡಿತ್ತು. ಸರ್ಕಾರಕ್ಕೆ ಗಮನ ಸೆಳೆಯುವ ನಿಟ್ಟಿನಲ್ಲಿ ಪ್ಲ್ಯಾನ್ ಮಾಡಿದ್ದೇವೆ. ಈ ಹೋರಾಟಕ್ಕೆ ಮಣಿದ ಡಿಸಿ, ಕಮಿಷನರ್, ಎಸ್ಪಿ ಮೂವರು ಬಂದು ಚರ್ಚೆ ಮಾಡಿದ್ದಾರೆ. ನಾಳೆಯ ಹೋರಾಟಕ್ಕೆ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಶಾಂತ ರೀತಿಯಿಂದ ಹೋರಾಟ ಮಾಡಲು ಅವಕಾಶ ಕೊಟ್ಟಿದ್ದಾರೆ.ಭಾವೋದ್ರೇಕಕ್ಕೆ ಒಳಗಾಗದೆ ಪ್ರತಿಭಟನೆ ಮಾಡಬೇಕು ಎಂದು ಹೇಳಿದ್ದಾರೆ.
ಸಮಾವೇಶದ ಬಳಿಕ ನಾವು ಸುವರ್ಣಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಮುಖ್ಯಮಂತ್ರಿಗಳ ಆದೇಶಕ್ಕೆ ಕಾಯುತ್ತೇವೆ. ಅವರು ಆದೇಶ ನೀಡಿದರೆ ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಮುತ್ತಿಗೆ ಹಾಕುವುದು ಅಷ್ಟೇ ಸತ್ಯ. ಈಗಿನ ಸರ್ಕಾರದ ಸ್ಥಿತಿ ಹೀಗಿದೆ. ಇದರ ನಡುವೆ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತೇವೆ. ನಾಳೆ ಸಮಾಜದ ನಾಯಕರು ಎಲ್ಲರೂ ಬರುತ್ತಾರೆ. ಎಷ್ಟು ಜನ ಶಾಸಕರು, ಸಚಿವರು ಬರುತ್ತಾರೆ ಮುಖ್ಯವಲ್ಲ ಸಮಾಜದ ಜನರು ಬರುವುದು ಮುಖ್ಯ. ಅವರ ಮನಸ್ಸು ಪರಿವರ್ತನೆ ಆಗಲಿ. ಆತ್ಮಾಲೋಕನ ಮಾಡಿಕೊಂಡು ಎಲ್ಲರೂ ಹೋರಾಟಕ್ಕೆ ಬನ್ನಿ ಎಂದಿದ್ದಾರೆ.
ಇನ್ನು ನಾಳಿನ ಹೋರಾಟಕ್ಕೆ ಪಂಚಮಸಾಲಿ ಸಮುದಾಯದ ಶಾಸಕ ವಿಜಯನಂದ ಕಾಶಪ್ಪನವರಿಂದ ಅಸಮಾಧಾನ ವ್ಯಕ್ತವಾಗಿದೆ. ಇದು ಯತ್ನಾಳ್ ಬಚಾವೋ ಹೋರಾಟವಾಗಿದೆ. ಇಂತಹ ಹೋರಾಟಕ್ಕೆ ನಾವು ಯಾರು ಹೋಗಲ್ಲ. ಅವರು ನಮ್ಮನ್ನೆಲ್ಲಾ ಕರೆದು ಮಾತನಾಡಬೇಕಿತ್ತು. ಒಂದು ಪಕ್ಷಕ್ಕೆ ಸೀಮಿತವಾಗಿ ಹೋರಾಟ ನಡೆಯುತ್ತಿದೆ. ಇದು ಕೇವಲ ಬಿಜೆಪಿಗಾಗಿ ಅಲ್ಲ, ಪಕ್ಷಾತೀತವಾಗಿ ಇರಬೇಕು. ಯತ್ನಾಳ್ ಬಚಾವ್ ಮಾಡಲು ಈ ಹೋರಾಟ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸ್ವಾಮೀಜಿಗಳು ಯತ್ನಾಳ್ ಕೈಗೊಂಬೆಯಾಗಿ ವರ್ತನೆ ಮಾಡುತ್ತಿದ್ದಾರೆ. ಪಕ್ಷಾತೀತ ಹೋರಾಟವಾದರೆ ನಾವು ಕೈಜೋಡಿಸಲು ಈಗಲೂ ಸಿದ್ಧ. ಈಗಾಗಲೇ ಸಿಎಂ ನಾಲ್ಕು ಬಾರಿ ಹೇಳಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ವರದಿ ಬರಲಿ ಅಂತ. ಬಂದ ನಂತರ ನಾವು ಇದರ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.