“ಸಿಂಥೆಟಿಕ್ ಡ್ರಗ್ಸ್” ಪತ್ತೆ ಹಚ್ಚಲು ಶ್ವಾನಗಳಿಗೆ ತರಬೇತಿ….!

ಬೆಂಗಳೂರು:

   ಮಾದಕವಸ್ತು ಕಳ್ಳಸಾಗಣೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ನಗರ ಪೊಲೀಸರು ಮುಂದಾಗಿದ್ದು, ತಮ್ಮ ಶ್ವಾನದಳಕ್ಕೆ ರೇವ್ ಪಾರ್ಟಿಗಳಲ್ಲಿ ಸಾಮಾನ್ಯವಾಗಿ ಬಳಸುವ ಎಂಡಿಎಂಎ, ಎಲ್‌ಎಸ್‌ಡಿ ಮತ್ತು ಎಕ್ಸ್‌ಟಾಸಿ ಮಾತ್ರೆಗಳಂತಹ “ಸಿಂಥೆಟಿಕ್ ಡ್ರಗ್ಸ್” ಪತ್ತೆ ಹಚ್ಚಲು ತರಬೇತಿ ನೀಡಿದ್ದಾರೆ.

   ಈ ಹಿಂದೆ, ನಾಯಿಗಳಿಗೆ ಗಾಂಜಾ ಮತ್ತು ಚರಸ್‌ನಂತಹ ಸಾಮಾನ್ಯ ಮಾದಕ ದ್ರವ್ಯಗಳನ್ನು ಮಾತ್ರ ಪತ್ತೆ ಮಾಡಲು ತರಬೇತಿ ನೀಡಲಾಗುತ್ತಿತ್ತು. ಇದೀಗ ಸಿಂಥೆಟಿಕ್ ಡ್ರಗ್ಸ್ ಪತ್ತೆ ಮಾಡಲು ತರಬೇತಿ ನೀಡಿದ್ದಾರೆ.

   “ಸಿಂಥೆಟಿಕ್ ಡ್ರಗ್ಸ್” ಪತ್ತೆ ಮಾಡಲು ಶ್ವಾನಗಳಿಗೆ ವಿಶೇಷ ತರಬೇತಿ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಅವರು ಹೇಳಿದ್ದಾರೆ.

    ರೇವ್ ಪಾರ್ಟಿಗಳಲ್ಲಿ ಮತ್ತು ಡ್ರಗ್ ಪೆಡ್ಲರ್‌ಗಳ ಅಡಗುತಾಣಗಳಲ್ಲಿ ಹುಡುಕಾಟ ಮತ್ತು ಕಾರ್ಯಾಚರಣೆಗಳಲ್ಲಿ ಇದು ಪೊಲೀಸರಿಗೆ ಸಹಾಯ ಮಾಡುತ್ತವೆ. ಕೊರಿಯರ್ ಕಂಪನಿಗಳ ಗೋದಾಮುಗಳಲ್ಲಿ, ಬಸ್ ಮತ್ತು ರೈಲುಗಳಲ್ಲಿ ಶೋಧ ಕಾರ್ಯಾಚರಣೆಯ ಸಮಯದಲ್ಲಿ ಈ ಶ್ವಾನಗಳನ್ನು ಬಳಸಲಾಗುವುದು ಎಂದು ತಿಳಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ದಾಳಿಯ ವೇಳೆ ಹೀಗೆ ತರಬೇತಿ ಪಡೆದ ಶ್ವಾನಗಳನ್ನು ಬಳಕೆ ಮಾಡಿಕೊಂಡು ಅಲ್ಲಿ ಮಾದಕವಸ್ತುಗಳನ್ನು ಬಳಕೆ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.

   ಇದರ ಬೆನ್ನಲ್ಲೇ ಹೊಸದಾಗಿ ಶ್ವಾನದಳಕ್ಕೆ ಸೇರುವ ಎಲ್ಲಾ ನಾಯಿಗಳಿಗೆ ಆಧುನಿಕ ಮಾದಕವಸ್ತುಗಳನ್ನು ಪತ್ತೆ ಮಾಡುವ ತರಬೇತಿ ನೀಡಲು ಮುಂದಾಗಿದ್ದಾರೆ.

    ಈಗ ವಿಶೇಷ ತರಬೇತಿ ಪಡೆದ 5 ಶ್ವಾನಗಳ ಪೈಕಿ 4 ಜರ್ಮನ್ ಶಫರ್ಡ್ ಮತ್ತೊಂದು ಬೀಗಲ್ ತಳಿಯವು. ಬೇರೆ ಬೇರೆ ಮಾದರಿಗಳ ಮೂಲಕ ತರಬೇತುದಾರರು ಈ ನಾಯಿಗಳಿಗೆ ಅಗತ್ಯ ತರಬೇತಿಯನ್ನು ನೀಡಿದ್ದು, 10 ಬಗೆಯ ಮಾದಕ ವಸ್ತುಗಳನ್ನು ಇವು ವಾಸನೆ ಮೂಲಕ ಪತ್ತೆ ಹಚ್ಚಲಿವೆ ಎದು ತಿಳಿದುಬಂದಿದೆ.

   ಶ್ವಾನದಳದ ಇನ್ಸ್‌ಪೆಕ್ಟರ್ ಲಕ್ಷ್ಮೀಕಾಂತ್ ಮಾತನಾಡಿ, ನಾಯಿಗಳಿಗೆ 50 ಮೀಟರ್ ದೂರದಿಂದ ಡ್ರಗ್ಸ್ ಪತ್ತೆ ಮಾಡುವ ತರಬೇತಿ ನೀಡಲಾಗಿದೆ. ಇದರಿಂದ ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಮೊದಲೇ ಅವರನ್ನು ಬಂಧಿಸಲು ಇದು ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

    ಈ ನಾಯಿಗಳಿಗೆ ಮೊದಲ ಹಂತದಲ್ಲಿ ಮಾದಕ ವಸ್ತು ಪತ್ತೆ ಹಚ್ಚುವ ತರಬೇತಿ ನೀಡಲಾಯಿತು. ಬಳಿಕ ಲಗೇಜ್, ಬ್ಯಾಗ್, ಮನುಷ್ಯರು, ವಾಹನ, ಕಟ್ಟಡ ಹೀಗೆ ವಿವಿಧ ಕಡೆ ಸಂಗ್ರಹವಾಗಿರುವ ಮಾದಕ ವಸ್ತುಗಳನ್ನು ಪತ್ತೆ ಹಚ್ಚುವ ತರಬೇತಿ ನೀಡಲಾಗಿದೆ. ವಿವಿಧ ಪ್ರದೇಶಗಳಲ್ಲಿ ಮಾದಕ ವಸ್ತುಗಳನ್ನು ಇಟ್ಟು ಅವುಗಳನ್ನು ಪತ್ತೆ ಹಚ್ಚಲು ನಾಯಿಗಳಿಗೆ ಸೂಚನೆ ನೀಡಲಾಗುತ್ತದೆ. ವಸ್ತು ಪತ್ತೆಯಾದರೆ ಕೆಲವು ನಾಯಿಗಳು ಬಾಲ ಅಲ್ಲಾಡಿಸುವ ಮೂಲಕ ಸೂಚನೆ ನೀಡುತ್ತವೆ. ಕೆಲವು ಬೊಗಳುತ್ತವೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap