ಬೆಂಗಳೂರು:
ಜನವರಿ ಮೇಕೆದಾಟು 11ಯೋಜನೆ ಕರ್ನಾಟಕ ರಾಜಕೀಯದಲ್ಲಿ ಪ್ರತಿಷ್ಠೆಗೆ ಕಾರಣವಾಗಿದೆ. ರಾಜ್ಯದ ಪ್ರಸ್ತಾವಿತ ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತು ಸುಪ್ರೀಂಕೋರ್ಟ್‌ಗೆ ಸಹ ಅರ್ಜಿ ಸಲ್ಲಿಕೆ ಮಾಡಿದೆ.
ಮೇಕೆದಾಟು ಯೋಜನೆ ಜಾರಿಗೊಳಿಸಬೇಕು ಎಂದು ಕರ್ನಾಟಕದ ಬಿಜೆಪಿ ಸರ್ಕಾರವನ್ನು ಒತ್ತಾಯಿಸಲು ಪ್ರತಿಪಕ್ಷ ಕಾಂಗ್ರೆಸ್ ಮೇಕೆದಾಟುವಿನಿಂದ ಬೆಂಗಳೂರು ತನಕ ಪಾದಯಾತ್ರೆ ಆರಂಭಿಸಿದೆ. ಮಂಗಳವಾರ ಪಾದಯಾತ್ರೆ 3ನೇ ದಿನಕ್ಕೆ ಕಾಲಿಟ್ಟಿದೆ.
ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡು ಸರ್ಕಾರ ಯೋಜನೆಗೆ ಅವಕಾಶ ನೀಡಬಾರದು ಎಂದು ಸುಪ್ರೀಂಕೋರ್ಟ್‌ಗೆ ಎರಡು ಅರ್ಜಿ ಸಲ್ಲಿಕೆ ಮಾಡಿದೆ. ಮಂಗಳವಾರ ಈ ಕುರಿತು ಅರ್ಜಿಯ ವಿಚಾರಣೆ ನಡೆಯಿತು. ಜನವರಿ 25ಕ್ಕೆ ಅರ್ಜಿ ವಿಚಾರಣೆ ನಡೆಸುವುದಾಗಿ ಕೋರ್ಟ್ ಹೇಳಿದೆ.
ತಮಿಳುನಾಡು ಮತ್ತು ಕೇರಳಕ್ಕೆ ಸಂಬಂಧಿಸಿದಂತೆ ಮುಲ್ಲಪೆರಿಯಾರ್ ಪ್ರಕರಣದ ಇಂದಿನ ವಿಚಾರಣೆ ವೇಳೆ ಹಿರಿಯ ವಕೀಲ ವಿ. ಕೃಷ್ಣಮೂರ್ತಿ ಮುಲ್ಲಪೆರಿಯಾರ್ ಪ್ರಕರಣದೊಂದಿಗೆ ಮೇಕೆದಾಟು ಪ್ರಕರಣವನ್ನು ತಪ್ಪಾಗಿ ಪಟ್ಟಿ ಮಾಡಲಾಗಿದೆ ಎಂದು ವಾದ ಮಂಡಿಸಿದರು.
ಎರಡೂ ಪ್ರಕರಣಗಳಿಗೆ ಸಂಬಂಧವಿಲ್ಲ ಎನ್ನುವುದುನ್ನು ಒಪ್ಪಿದ ನ್ಯಾಯಮೂರ್ತಿ ಎ. ಎಂ. ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗೂ ಸಿ. ಟಿ. ರವಿಕುಮಾರ್ ಅವರಿದ್ದ ಪೀಠ ಮುಲ್ಲಪೆರಿಯಾರ್ ಪ್ರಕರಣದಿಂದ ಮೇಕೆದಾಟು ಪ್ರಕರಣವನ್ನು ಬೇರ್ಪಡಿಸಿತು.
ವಕೀಲರಾದ ಶ್ಯಾಮ್ ದಿವಾನ್ ಮತ್ತು ಮುಕುಲ್ ರೋಹಟಗಿ ಮನವಿಯಂತೆ ಮೇಕೆದಾಟು ಅಣೆಕಟ್ಟಿಗೆ ಸಂಬಂಧಿಸಿದ ವಿಚಾರಣೆಯನ್ನು ಜನವರಿ 25ರಂದು ಕೈಗೊಳ್ಳಲಾಗುತ್ತದೆ ಎಂದು ನ್ಯಾಯಪೀಠ ಹೇಳಿತು. ತಮಿಳುನಾಡು ಯೋಜನೆ ವಿರೋಧಿಸಿ ಎರಡು ಅರ್ಜಿ ಸಲ್ಲಿಕೆ ಮಾಡಿದೆ.
ತಮಿಳುನಾಡು ವಾದವೇನು?
ಮೇಕೆದಾಟು ಯೋಜನೆ ಕುರಿತು ರಾಜ್ಯದ ಸಮಗ್ರ ಯೋಜನಾ ವರದಿಗೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿತ್ತು. ಇದನ್ನು ವಿರೋಧಿಸಿ ತಮಿಳುನಾಡು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದೆ.
ಯೋಜನೆಗೆ ಅನುಮತಿ ನೀಡದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ತಮಿಳುನಾಡು ಮನವಿ ಮಾಡಿದೆ. ಈ ಅರ್ಜಿ ವಿಚಾರಣೆ ಬಾಕಿ ಇರುವಾಗಲೇ ಎನ್‌ಜಿಟಿ ಯೋಜನೆ ಕುರಿತು ಆದೇಶವೊಂದನ್ನು ನೀಡಿದೆ. ಈ ಆದೇಶವನ್ನು ಸಹ ತಮಿಳುನಾಡು ಸರ್ಕಾರ ಪ್ರಶ್ನೆ ಮಾಡಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಸಹ ತಮಿಳುನಾಡು ಮೇಕೆದಾಟು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದೆ. ಕಳೆದೆರಡು ವರ್ಷಗಳಲ್ಲಿ 5 ಸಭೆಗಳನ್ನು ಪ್ರಾಧಿಕಾರ ನಡೆಸಿದರೂ ಮೇಕೆದಾಟು ಯೋಜನೆ ಕುರಿತು ಚರ್ಚೆ ಮಾಡದೇ ಅದನ್ನು ಮುಂದೂಡುತ್ತಿದೆ.
ಯೋಜನೆ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, “ಮೇಕೆದಾಟು ಯೋಜನೆಗೆ ಅನುಮತಿ ಕೋರಿ ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರಧಾನಿ ನರೇಂದ್ರಮೋದಿಯವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆ.
ಅದರ ನಂತರ ಡಿ.ಕೆ.ಶಿವಕುಮಾರ್ ನೀರಾವರಿ ಸಚಿವರಾಗಿದ್ದಾಗ ಮತ್ತೆ ಪ್ರಧಾನಿಯವರನ್ನು ಭೇಟಿ ಮಾಡಿ ಮನವಿಮಾಡಿದ್ದಾರೆ. ಆಡಳಿತದಲ್ಲಿದ್ದಾಗ ನಾವು ಇನ್ನೇನು ಮಾಡಲು ಸಾಧ್ಯವಿತ್ತು?” ಎಂದು ಬಿಜೆಪಿಗೆ ಪ್ರಶ್ನೆ ಮಾಡಿದ್ದಾರೆ.
“2019ರ ಜುಲೈ 26ರಂದು ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಈಗ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿರುವ ನೀರಾವರಿ ಸಚಿವರಾದ ಗೋವಿಂದ ಕಾರಜೋಳ ಈ ಎರಡೂವರೆ ವರ್ಷಗಳ ಅಧಿಕಾರವಧಿಯಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ನೀಡಲು ರಾಜ್ಯದ ಬಿಜೆಪಿ ಸರ್ಕಾರ ಏನು ಮಾಡಿದೆ? ಎನ್ನುವುದನ್ನು ನಾಡಿನ ಜನತೆಗೆ ತಿಳಿಸಬೇಕು” ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.
“ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಈ ಯೋಜನೆಯಿಂದ ತಮಿಳುನಾಡಿಗೆ ಯಾವುದೇ ತೊಂದರೆಯಾಗಲ್ಲ, ರಾಜಿ ಸಂಧಾನದ ಮಾತುಕತೆ ನಡೆಸೋಣ ಎಂದು ಎಂ. ಕೆ. ಸ್ಟಾಲಿನ್‌ಗೆ ಒಂದು ಪತ್ರ ಬರೆದಿರುವುದು ಬಿಟ್ಟರೆ,
ಈಗಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ, ನೀರಾವರಿ ಸಚಿವರು, ಕೇಂದ್ರ ಸಚಿವರು, ಬಿಜೆಪಿ ಸಂಸದರು ಯಾರೊಬ್ಬರೂ ಮೇಕೆದಾಟು ವಿಚಾರದಲ್ಲಿ ಏನೂ ಪ್ರಯತ್ನ ಮಾಡಿಲ್ಲ” ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ