ಮುಂಬೈ:
ಮನೆಯಲ್ಲೇ ನನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಬಾಲಿವುಡ್ ನಟಿ ತನುಶ್ರೀ ದತ್ತಾ ಅಳುತ್ತಾ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿ ಅನೇಕರು ನಟಿಗೆ ಬೆಂಬಲ ವ್ಯಕ್ತಪಡಿಸಿ ಸಾಂತ್ವನ ಹೇಳಿದ್ದಾರೆ. ಹಾರ್ನ್ ಓಕೆ ಪ್ಲೀಸ್ ಚಿತ್ರೀಕರಣದ ಸೆಟ್‌ನಲ್ಲಿ ನಾನಾ ಪಾಟೇಕರ್ ವಿರುದ್ಧ ಅನೈತಿಕ ವರ್ತನೆಯ ಆರೋಪ ಹೊರಿಸಿದ್ದ ನಟಿ #MeToo ಆಂದೋಲನಕ್ಕೆ ನಾಂದಿ ಹಾಡಿದ್ದರು. ಈಗ ಅವರು ಮತ್ತೊಮ್ಮೆ ತಮ್ಮ ಮನೆಯವರ ವಿರುದ್ಧವೇ ಕಿರುಕುಳದ ಆರೋಪ ಹೊರಿಸಿದ್ದಾರೆ.
ಆಶಿಕ್ ಬನಾಯಾ ಆಪ್ನೆ ಚಿತ್ರ ನಟಿ ತನುಶ್ರೀ ದತ್ತಾ ಕಣ್ಣೀರು ಹಾಕುತ್ತ ಮಾಡಿರುವ ವಿಡಿಯೊ ಇನ್‌ಸ್ಟಾಗ್ರಾಮ್ ನಲ್ಲಿ ವೈರಲ್ ಆಗಿದೆ. ಇದಕ್ಕೆ ಅವರು “ಕಿರುಕುಳದಿಂದ ಬೇಸತ್ತಿದ್ದೇನೆ !!” ಎಂದು ಶೀರ್ಷಿಕೆ ನೀಡಿದ್ದಾರೆ. ಇದು 2018 ರಿಂದ ನಡೆಯುತ್ತಿದೆ. ಪೊಲೀಸರಿಗೆ ನಾನು ಕರೆ ಮಾಡಿದೆ. ದಯವಿಟ್ಟು ಯಾರಾದರೂ ನನಗೆ ಸಹಾಯ ಮಾಡಿ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.
ದುಃಖಿತಳಾಗಿರುವ ತನುಶ್ರೀ, ನನ್ನ ಮನೆಯಲ್ಲೇ ನನಗೆ ಕಿರುಕುಳ ನೀಡಲಾಗುತ್ತಿದೆ. ನಾನು ಪೊಲೀಸರಿಗೆ ಕರೆ ಮಾಡಿದೆ. ಅವರು ಸರಿಯಾಗಿ ದೂರು ನೀಡಲು ಪೊಲೀಸ್ ಠಾಣೆಗೆ ಬರುವಂತೆ ಕೇಳಿಕೊಂಡರು. ನಾನು ಬಹುಶಃ ನಾಳೆ ಅಥವಾ ಮರುದಿನ ಹೋಗುತ್ತೇನೆ. ನನಗೆ ಆರೋಗ್ಯ ಸರಿಯಿಲ್ಲ. ಕಳೆದ 4- 5 ವರ್ಷಗಳಿಂದ ನನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ನಿರಂತರ ಒತ್ತಡದಿಂದಾಗಿ ತನ್ನ ಆರೋಗ್ಯ ಗಮನಾರ್ಹವಾಗಿ ಹದಗೆಟ್ಟಿದೆ ಎಂದಿರುವ ನಟಿ, ಯಾವ ಕೆಲಸವನ್ನೂ ಮಾಡಲಾಗುತ್ತಿಲ್ಲ. ನನಗೆ ಕೆಲಸದವರನ್ನೂ ನೇಮಿಸಿಕೊಳ್ಳಲು ಆಗುತ್ತಿಲ್ಲ. ಯಾಕೆಂದರೆ ನನಗೆ ಕೆಲಸದವರಿಂದ ಕೆಟ್ಟ ಅನುಭವವಾಗಿದೆ. ಅವರು ಬಂದು ನನ್ನ ಮನೆಯಿಂದ ವಸ್ತುಗಳನ್ನು ಕದಿಯುತ್ತಿದ್ದಾರೆ. ನನ್ನ ಎಲ್ಲಾ ಕೆಲಸಗಳನ್ನು ನಾನೇ ಮಾಡಬೇಕು. ನನ್ನ ಮನೆಯಲ್ಲೇ ನನಗೆ ತೊಂದರೆಯಾಗುತ್ತಿದೆ. ದಯವಿಟ್ಟು ಯಾರಾದರೂ ನನಗೆ ಸಹಾಯ ಮಾಡಿ ಎಂದು ನಟಿ ಹೇಳಿದ್ದಾರೆ.
ಅವರ ಈ ಭಾವನಾತ್ಮಕ ಮನವಿಗೆ ಸಾಕಷ್ಟು ಮಂದಿ ಸ್ಪಂದಿಸಿದ್ದಾರೆ. ಅನೇಕ ಅವರಿಗೆ ಬೆಂಬಲ ನೀಡಿ, ಎಲ್ಲವೂ ಸರಿಯಾಗುತ್ತದೆ. ನಿಮ್ಮ ಮೇಲೆ ನಂಬಿಕೆ ಇಡಿ ಎಂದು ಹೇಳಿದ್ದರು. ಒಬ್ಬರು ಕಾಮೆಂಟ್ ನಲ್ಲಿ ಚಿಂತಿಸಬೇಡಿ, ಎಲ್ಲವೂ ಸರಿಯಾಗುತ್ತದೆ ಎಂದು ತಿಳಿಸಿದ್ದಾರೆ.
ಇದರೊಂದಿಗೆ ಇನ್ನೊಂದು ವೀಡಿಯೊವನ್ನು ಹಂಚಿಕೊಂಡಿರುವ ನಟಿ, 2020 ರಿಂದ ಪ್ರತಿದಿನವೂ ನಾನು ಭಾರಿ ಶಬ್ದಗಳನ್ನು ಕೇಳುತ್ತಿದ್ದೇನೆ. ಇದು ನನ್ನ ಛಾವಣಿಯ ಮೇಲೆ ಮತ್ತು ನನ್ನ ಬಾಗಿಲಿನ ಹೊರಗಿನಿಂದ ಬರುತ್ತಿದೆ. ಹೆಡ್‌ಫೋನ್‌ನಲ್ಲಿ ದೇವರ ಮಂತ್ರಗಳನ್ನು ಕೇಳುತ್ತಾ ಇದನ್ನು ನಿಭಾಯಿಸುತ್ತಿದ್ದೇನೆ. ದೀರ್ಘಕಾಲದಿಂದ ಒತ್ತಡ ಮತ್ತು ಆತಂಕದಿಂದ ತಾವು ಬಳಲುತ್ತಿರುವುದಾಗಿ ತನುಶ್ರೀ ಹೇಳಿದ್ದಾರೆ.
