ತರಕಾರಿಗಳ ಬೆಲೆಯಲ್ಲಿ ಭಾರೀ ಏರಿಕೆ…..!

ಬೆಂಗಳೂರು :

   ಏಕಾಏಕಿ ಹಲವು ತರಕಾರಿಗಳ ಬೆಲೆ ಏರಿಕೆಯಾಗಿದೆ. ಕಳೆದ ಒಂದು ವಾರದಿಂದ ನಗರದಲ್ಲಿ ಬಿಟ್ಟು ಬಿಡದೆ ಮಳೆಯಾಗುತ್ತಿದೆ. ಇದರ ಪರಿಣಾಮವಾಗಿ ಸಗಟು ಮಾರುಕಟ್ಟೆಗೆ ಶೇ.25ರಷ್ಟು ತರಕಾರಿ ಪೂರೈಕೆ ಕೊರತೆಯಾಗಿದೆ. ಹೀಗಾಗಿ ಹಲವು ತರಕಾರಿಗಳ ಬೆಲೆ 100 ರು. ಗಡಿ ದಾಟಿವೆ.

   ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಅಕ್ಟೋಬರ್ ಕೊನೆಯವರೆಗೂ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ತರಕಾರಿ ಬೆಲೆ ಇನ್ನಷ್ಟು ಹೆಚ್ಚಳವಾಗುವ ಆತಂಕವೂ ಎದುರಾಗಿದೆ.

   ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತರಕಾರಿ ಪೂರೈಕೆ ವ್ಯತ್ಯಾಸವಾಗಿದೆ, ಅಲ್ಲದೇ ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ. ಇದರಿಂದ ಬೇಡಿಕೆ ಹೆಚ್ಚಿದ್ದರೂ, ಪೂರೈಕೆ ಕಡಿಮೆಯಾಗಿದೆ. ತರಕಾರಿ ಪೂರೈಕೆ ಹಾಗೂ ಬೇಡಿಕೆ ನಡುವಿನ ವ್ಯತ್ಯಾಸದಿಂದಾಗಿ ಸಹಜವಾಗಿಯೇ ಸಗಟು ಬೆಲೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ತರಕಾರಿಯ ಚಿಲ್ಲರೆ ದರ ಏರಿಕೆಯಾಗಿದ್ದು, ಈರುಳ್ಳಿ, ಆಲೂಗಡ್ಡೆ ಸೇರಿದಂತೆ ಅಗತ್ಯ ತರಕಾರಿ ವಸ್ತುಗಳಾದ ತರಕಾರಿಗಳ ಬೆಲೆ ಹೆಚ್ಚಳವಾಗಿದೆ. ಬೆಳ್ಳುಳ್ಳಿ ಹಾಗೂ ಶುಂಠಿ ಬೆಲೆಯೂ ಹೆಚ್ಚಳವಾಗಿದೆ. ಬೆಳ್ಳುಳ್ಳಿ ಬೆಲೆ ಕೆ.ಜಿಗೆ ೧೨೦ ರು.ಯಿಂದ ೧೪೦ ರು.ಗೆ ಹೆಚ್ಚಳವಾಗಿದೆ. 

   ಶುಂಠಿ ಬೆಲೆಯು ೫೦ರಿಂದ ೮೦ ರು.ಆಗಿದೆ. ಅಲ್ಲದೇ, ಈರುಳ್ಳಿ ಬೆಲೆ ಪ್ರತಿ ಕೆ.ಜಿಗೆ ೨೫ ರು.ನಿಂದ ೩೫ ರು.ಗೆ ಏಕಾಏಕಿ ಹೆಚ್ಚಳವಾಗಿದೆ. ಆಲೂಗಡ್ಡೆ ಬೆಲೆ ೩೦ ರೂಪಾಯಿಯಿ ೪೦ ರು. ಆಗಿದ್ದರೆ, ಟೊಮೆಟೊ ಬೆಲೆ ಪ್ರತಿ ಕೆ.ಜಿಗೆ ೨೦ರಿಂದ ೩೦ ರು. ಆಗಿದೆ.

  ದಸರಾ ಮತ್ತು ದೀಪಾವಳಿ ಹಬ್ಬದ ನಂತರ ತರಕಾರಿಗಳ ಬೆಲೆ ಏರಿಕೆ ಸಾಮಾನ್ಯ. ಕಾರ್ತಿಕ ಮಾಸ ಆರಂಭವಾಗಿದ್ದು, ಮದುವೆ, ಗೃಹಪ್ರವೇಶ ಸೇರಿದಂತೆ ಶುಭ ಕಾರ್ಯಗಳು ಆರಂಭ ವಾಗಿದ್ದು, ಎಲ್ಲೆಡೆ ತರಕಾರಿಗಳಿಗೆ ಬೇಡಿಕೆ ಹೆಚ್ಚಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಲ್ಲಿ ವಿಪರೀತ ಮಳೆಯಿಂದಾಗಿ ತರಕಾರಿ ಬೆಳೆಗಳು ಹಾನಿಗೀಡಾಗಿವೆ.

   ಮಳೆ ಮತ್ತು ಮೋಡ ಮುಸುಕಿದ ವಾತಾವರಣದ ಕಾರಣಕ್ಕೆ ರೋಗಬಾಧೆ ಕಾಣಿಸಿಕೊಂಡಿದ್ದು, ತರಕಾರಿ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ನಾಶವಾಗಿವೆ. ಹೊರ ರಾಜ್ಯಗಳಲ್ಲಿ ತರಕಾರಿಗಳಿಗೆ ಬೇಡಿಕೆ ದಿಢೀರ್ ಹೆಚ್ಚಳವಾಗಿದೆ. ಬೇಡಿಕೆ ತಕ್ಕಂತೆ ಬೆಲೆ ಏರಿಕೆಯಾಗಿದೆ ಎಂದು ಹೇಳುತ್ತಾರೆ ಚಿಲ್ಲರೆ ತರಕಾರಿ ವ್ಯಾಪಾರಿ ವಿಜಯಕುಮಾರ್.

  ಅಕ್ಟೋಬರ್‌ನಿಂದ ಜನವರಿಯವರೆಗೆ ನುಗ್ಗೆ ಮರಗಳಿಗೆ ಕಂಬಳಿ ಹುಳು ಬಾಧೆ ಸಾಮಾನ್ಯ. ಇದರಿಂದ ಇಳುವರಿ ಕಡಿಮೆಯಾಗುತ್ತದೆ. ಜಿಲ್ಲೆಯಲ್ಲಿ ನುಗ್ಗೆ ಮರಗಳಲ್ಲಿ ಕಂಬಳಿ ಹುಳು ಕಾಣಿಸಿಕೊಂಡಿದ್ದು ಫಸಲು ಕುಸಿದಿದೆ. ಹೊರ ಜಿಲ್ಲೆಗಳಿಂದ ಸ್ಥಳೀಯ ಮಾರುಕಟ್ಟೆಗೆ ನುಗ್ಗೆಕಾಯಿ ಬರುತ್ತಿದ್ದು, ಬೆಲೆ ನಿರೀಕ್ಷೆಗೂ ಮೀರಿ ಏರಿಕೆಯಾಗಿದೆ ಚಿಲ್ಲರೆ ದರ ಕೆಜಿಗೆ ೧೦೦ನಿಂದ ೧೫೦ ರು. ಆಗಿದೆ.

  ಕೆಲ ತಿಂಗಳ ಹಿಂದೆ ಸೊಪ್ಪಿನ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದ್ದರಿಂದ ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದರು. ಆದರೆ ರೈತರು ಬೆಲೆ ಕುಸಿತದಿಂದ ನಷ್ಟ ಅನುಭವಿಸಿದ್ದರು. ಇದೀಗ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಜಮೀನುಗಳಲ್ಲಿ ಮಳೆನೀರು ನಿಂತು ಸೊಪ್ಪಿನ ಗಿಡಗಳು ಕೊಳೆತಿವೆ. ಇದರಿಂದ ಮಾರುಕಟ್ಟೆಯಲ್ಲಿ ಸೊಪ್ಪುಗಳು ಸಿಗುವುದೇ ಕಷ್ಟವಾಗಿದೆ.ಕೊತ್ತಂಬರಿ ಸೊಪ್ಪು ಒಂದು ಕಟ್ಟಿಗೆ ೫೦, ರೂ. ದಂಟು ಮತ್ತು ಸಬ್ಬಕ್ಕಿ ೩೦ ರು., ಮೆಂತೆ ಸೊಪ್ಪು ೪೫ ರು.ಗೆ ಮಾರಾಟವಾಗುತ್ತಿದೆ. 

   ಮಳೆಯಿಂದಾಗಿ ಟೊಮ್ಯಾಟೋ ಬೆಳೆಗೆ ಹಾನಿಯಾಗಿದ್ದು, ಬೆಂಗಳೂರು ಎಪಿಎಂಸಿ ಮಾರುಕಟ್ಟೆಗೆ ಶೇ.೨೦ರಷ್ಟು ಪೂರೈಕೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿಎರಡು ತಿಂಗಳ ಹಿಂದೆ ಸಗಟು ದರ ಕೆ.ಜಿಗೆ ೩-೪ ರು.ಇದ್ದ ಬೆಲೆ ಈಗ ೮-೧೨ ರು. ಆಗಿದೆ. ಚಿಲ್ಲರೆ ದರ ಕೆ.ಜಿಗೆ ೨೦ ರು.ಇದ್ದ ಟೊಮ್ಯಾಟೋ ಬೆಲೆ ಈಗ ೩೦ ರು. ಗಡಿ ದಾಟಿದೆ. ಮನೆ, ಹೋಟೆಲ್ ಹಾಗೂ ಶುಭ ಕಾರ್ಯಗಳಲ್ಲಿ ಅಡುಗೆಗೆ ಟೊಮ್ಯಾಟೋ ಬಳಕೆ ಸರ್ವೇ ಸಾಮಾನ್ಯ. ಮಳೆಯಿಂದಾಗಿ ಜಿಲ್ಲೆಯಲ್ಲಿ ಟೊಮ್ಯಾಟೋ ಬೆಳೆಗೆ ಹೆಚ್ಚಿನ ಹಾನಿಯಾಗಿದೆ. ಇದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೆಟೊ ಆವಕ ಕಡಿಮೆ ಯಾಗಿದೆ. ಹೊರ ರಾಜ್ಯ ಮತ್ತು ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿಯಿದೆ.

Recent Articles

spot_img

Related Stories

Share via
Copy link