ಬೆಂಗಳೂರು
ರಾಜ್ಯದಲ್ಲಿ ಚಳಿಗಾಲ ಹಾಗೂ ದಿತ್ವಾ ಚಂಡಮಾರುತದ ಪ್ರಭಾವದಿಂದ ಚಳಿ ಹೆಚ್ಚಾಗಿದೆ. ಪರಿಣಾಮ ತರಕಾರಿಗಳ ಮೇಲೆಯೂ ಆಗಿದೆ. ಇದರಿಂದ ಇಳುವರಿ ಕಡಿಮೆಯಾಗಿದ್ದು, ತರಕಾರಿಗಳ ಬೆಲೆ ಗಗನಕ್ಕೇರಿದೆ. ಎಲ್ಲರಿಗೂ ಬೇಕಾದ ಟೊಮೆಟೊ ಬೆಲೆ ನೂರರ ಹತ್ತಿರದಲ್ಲಿದ್ದರೆ, ನುಗ್ಗೇಕಾಯಿ ಬೆಲೆಯಂತೂ ಐನೂರರ ಗಡಿ ದಾಟಿದೆ. ಗ್ರಾಹಕರು ʼಸದ್ಯ ನಮಗೆ ರಸಂ ಸಾಕುʼ ಎಂದುಕೊಂಡು ಸುಮ್ಮನಾಗುತ್ತಿದ್ದಾರೆ.
ಬಹುತೇಕ ತರಕಾರಿಗಳ ಬೆಲೆ ಏರಿಕೆಯಾಗಿದೆ. ಕೆಲ ತರಕಾರಿಗಳ ಬೆಲೆ ಶತಕದ ಗಡಿ ದಾಟಿದರೆ, ನುಗ್ಗೆಕಾಯಿ ಬೆಲೆ ಐದುನೂರರ ಗಡಿ ದಾಟಿದೆ. ಕಳೆದ ಒಂದು ವಾರದಿಂದ ಚಳಿ ರಾಜಧಾನಿ ಜನರನ್ನು ಫ್ರಿಜ್‌ನಲ್ಲಿ ಇಟ್ಟಂತೆ ತಂಪಾಗಿಸಿದೆ. ಆದರೆ ಅಡುಗೆಗೆ ಬೇಕಾದ ತರಕಾರಿಗಳ ದರ ಜನರ ಜೇಬು ಸುಡುತ್ತಿದೆ.
ಬೆಂಗಳೂರಿಗೆ ಈ ಹಿಂದೆ ಪ್ರತಿದಿನ 100 ಟನ್ ನುಗ್ಗೆಕಾಯಿ ಸಪ್ಲೈ ಆಗುತ್ತಿತ್ತು. ಆದರೆ ಇದೀಗ ವಾತಾವರಣ ಬದಲಾವಣೆಯಿಂದ ನುಗ್ಗೆಕಾಯಿ ಬೆಳೆ ಸರಿಯಾಗಿ ಬಂದಿಲ್ಲ. ಇದರಿಂದ ಪ್ರತಿದಿನ ನಗರಕ್ಕೆ 30ರಿಂದ 40 ಟನ್ ಮಾತ್ರ ನುಗ್ಗೆಕಾಯಿ ಸಪ್ಲೈ ಆಗ್ತಿದೆ. ಕೊರತೆಯ ಪರಿಣಾಮ ನುಗ್ಗೇಕಾಯಿ ಹಾಪ್‌ಕಾಮ್ಸ್‌ನಲ್ಲಿ ಒಂದು ಕೆಜಿ 510 ರೂ.ಗೆ ಮಾರಾಟವಾಗ್ತಿದೆ. ಮಾರ್ಕೆಟ್‌ಗಳಲ್ಲಿ ಒಂದು ನುಗ್ಗೇಕಾಯಿ 50 ರೂ., ಜೋಡಿ ನುಗ್ಗೇಕಾಯಿ 100 ರೂ. ಆಗಿದೆ. ಇದರಿಂದ ಸಿಲಿಕಾನ್ ಸಿಟಿ ಜನರು ನುಗ್ಗೇಕಾಯಿ ಸಹವಾಸ ಬೇಡ ಅಂತಿದ್ದಾರೆ. ಈಗಾಗಲೇ ಟೊಮೆಟೋ ಬೆಲೆ ಅರ್ಧಶತಕ ಬಾರಿಸಿ ಮೇಲೇರಿದ್ದು, ಉಳಿದ ತರಕಾರಿಗಳು ನಿಧಾನವಾಗಿ ಶತಕ ಬಾರಿಸುತ್ತಿದೆ. ಎಲ್ಲಾ ತರಕಾರಿಗಳ ಬೆಲೆಯೂ ಏರಿಕೆಯಾಗಿದೆ ಎಂದು ಗೃಹಿಣಿಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಯಾವುದರ ಬೆಲೆ ಎಷ್ಟು?
ನುಗ್ಗೇಕಾಯಿ- ಕೆ.ಜಿಗೆ 510 ರೂ.
ಅವರೇಕಾಯಿ- ಕೆ.ಜಿಗೆ 85 ರೂ.
ಹುರುಳಿಕಾಯಿ – ಕೆ.ಜಿಗೆ 62 ರೂ.
ಊಟಿ ಕ್ಯಾರೆಟ್ – ಕೆ.ಜಿಗೆ 88 ರೂ.
ಬಿಟ್‌ರೂಟ್ – ಕೆ.ಜಿಗೆ 55 ರೂ.
ಹಣ್ಣು ಹುರಳಿಕಾಯಿ – ಕೆ.ಜಿಗೆ 110 ರೂ.
ಹಸಿ ಮೆಣಸಿನಕಾಯಿ– ಕೆ.ಜಿಗೆ 70 ರೂ.
ಬೆಂಡೆಕಾಯಿ – ಕೆ.ಜಿಗೆ 84 ರೂ.
ಟೊಮೆಟೋ – ಕೆ.ಜಿಗೆ 80 ರೂ.
ಟೊಮೆಟೋ ಬೆಲೆಯಂತು ದಿನೇ ದಿನೇ ಏರಿಕೆಯಾಗುತ್ತಿದೆ. ಕೆ.ಜಿ ಟೊಮೆಟೋಗೆ ಮಾರುಕಟ್ಟೆಯಲ್ಲಿ 70 ರೂ.ಯಿಂದ 90 ರೂ.ನಲ್ಲಿ ಮಾರಾಟವಾಗ್ತಿದೆ. ಕಳೆದ ಒಂದು ವರ್ಷದಿಂದ ಟೊಮೆಟೋಗೆ ಉತ್ತಮ ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದರು. ಈಗ ಟೊಮೆಟೋಗೆ ಉತ್ತಮ ಬೆಲೆ ಬಂದಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.








