ಸುಂಕ ವಿನಾಯಿತಿ ಘೋಷಿಸಿದ ಟ್ರಂಪ್‌ : ಯಾರು ಯಾರಿಗೆ ಗೊತ್ತಾ…?

ವಾಷಿಂಗ್ಟನ್:

     ವಿಶ್ವದ ಹಲವು ದೇಶಗಳ ಮೇಲೆ ವಿಧಿಸಲಾಗುತ್ತಿರುವ ಪ್ರತಿ ಸುಂಕ ಹಾಗೂ ಶೇ 10 ರಷ್ಟು ಸುಂಕ ಜಾರಿಯನ್ನು ತಡೆಹಿಡಿಯಲು ಅಮೆರಿದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಆದೇಶ ನೀಡಿದ್ದಾಗಿ ಬುಧವಾರ ಘೋಷಿಸಿದ್ದಾರೆ. ಆದರೆ ಚೀನಾ ಮೇಲಿನ ತೆರಿಗೆಯನ್ನು ಶೇ.104ರಿಂದ 125ಕ್ಕೆ ಹೆಚ್ಚಿಸುವುದಾಗಿ ಪ್ರಕಟಿಸಿದ್ದಾರೆ. ಟ್ರಂಪ್‌ ಘೋಷಿಸಿದ ನಿರ್ಧಾರದಿಂದ ಚೀನಾವನ್ನು ಹೊರಗಿಡಲಾಗಿದೆ. ಟ್ರಂಪ್‌ ಘೋಷಿಸಿರುವ ಈ ವಿರಾಮದಿಂದ ಚೀನಾ ಹೊರತುಪಡಿಸಿದಂತೆ ಇತರ ದೇಶಗಳಿಗೆ ವಿಧಿಸಿರುವ ಪ್ರತಿಸುಂಕದಲ್ಲಿ ಎಷ್ಟು ಇಳಿಕೆಯಾಗಿದೆ ಎಂದು ತಿಳಿದು ಬಂದಿಲ್ಲ.

   ಅಮೆರಿಕ ತೆರಿಗೆ ಹೇರಿದ ಬಳಿಕ ಸುಮಾರು 75 ದೇಶಗಳು, ತಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಅಮೆರಿಕದ ಜತೆ ಸಂಧಾನಕ್ಕೆ ಆಗಮಿಸಿವೆ. ಹೀಗಾಗಿ ನಾನು ಅವುಗಳ ಮೇಲೆ 90 ದಿನ ತೆರಿಗೆ ಹೇರಿಕೆ ಮುಂದೂಡಲು ನಿರ್ಧರಿಸಿದ್ದೇನೆ. ಅವುಗಳ ಮೇಲೆ ಶೇ.10 ಮೂಲ ಆಮದು ತೆರಿಗೆ ಮುಂದುವರಿಯಲಿದೆ. ಆದರೆ ಚೀನಾ ಮಾತ್ರ ಸುಮ್ಮನಿರದೇ ನಮ್ಮ ಮೇಲೆ ಪ್ರತಿತೆರಿಗೆ ಹೇರಿದೆ. ಹೀಗಾಗಿ ಚೀನಾ ಮೇಲಿನ ತೆರಿಗೆಯನ್ನು ಶೇ.125ಕ್ಕೆ ಹೆಚ್ಚಿಸಿದ್ದೇನೆ’ ಎಂದು ತಮ್ಮ ಟ್ರುತ್‌ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿದ್ದಾರೆ.

     ಅಮೆರಿಕದ ಶೇ 104 ರ ಪ್ರತೀಕಾರವಾಗಿ ಅಮೆರಿಕದ ವಸ್ತುಗಳಿಗೆ ಚೀನಾ 84 ಪ್ರತಿಶತ ಸುಂಕವನ್ನು ವಿಧಿಸುವುದಾಗಿ ಘೋಷಿಸಿದೆ. ಇದರ ಬೆನ್ನಲ್ಲೇ ಟ್ರಂಪ್‌ ಶೇ 125ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಚೀನಾ ಜಾಗತಿಕ ಮಾರುಕಟ್ಟೆಗಳನ್ನು ಅಗೌರವಿಸಿದೆ, ಆದ್ದರಿಂದ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಟ್ರಂಪ್‌ ತಿಳಿಸಿದ್ದಾರೆ. ಪ್ರತಿಸುಂಕ ಜಾರಿಗೊಳಿಸಿದ ಕ್ಷಣದಿಂದಲೂ ಅಮೆರಿಕ ಹಾಗೂ ಇತರ ರಾಷ್ಟ್ರಗಳ ನಡುವೆ ವ್ಯಾಪಾರ ಸಮರ ಪ್ರಾರಂಭವಾಗಿತ್ತು. ಅದರಲ್ಲೂ ಅಮೆರಿಕ ಹಾಗೂ ಚೀನಾ ನಡುವೆ ಶಕ್ತಿ ಪ್ರದರ್ಶನಕ್ಕೂ ಇದು ಕಾರಣವಾಗಿತ್ತು. 

    ಇದೀಗ ಟ್ರಂಪ್‌ ಚೀನಾಗೆ ಬಿಗ್‌ ಶಾಕ್‌ ನೀಡಿದ್ದಾರೆ. ಟ್ರಂಪ್‌ ತೆರಿಗೆ ಹೊಡೆತಕ್ಕೆ ಸಿಲುಕಿ 2-3 ದಿನಗಳಿಂದ ಮಂಕಾಗಿದ್ದ ಜಾಗತಿಕ ಷೇರುಪೇಟೆಗಳು ಗುರುವಾರ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಹೆಚ್ಚುತ್ತಿರುವ ವ್ಯಾಪಾರ ಸಂಘರ್ಷ, ಟ್ರಂಪ್ ತೆರಿಗೆ ನೀತಿ, ವ್ಯಾಪಾರ ಕಳವಳ, ರಿಸರ್ವ್‌ ಬ್ಯಾಂಕ್‌ ಸತತ 2ನೇ ಅವಧಿಗೆ ಬಡ್ಡಿದರ ಇಳಿಕೆ ಮಾಡಿರುವುದು ಭಾರತದ ಷೇರುಪೇಟೆಯ ಮೇಲೆಯೂ ಪರಿಣಾಮ ಬೀರಿದೆ. ಇದೀಗ ಅಮೆರಿಕ ಶೇರು ಮಾರುಕಟ್ಟೆಯಲ್ಲಿ ಚೇತರಿಕೆ ಕಂಡು ಬಂದಿದೆ. ಕಚ್ಛಾ ತೈಲ ಮಾರುಕಟ್ಟೆಯಲ್ಲಿಯೂ ಒಮ್ಮೆಲೆ ತಲ್ಲಣವಾಗಿದೆ.

Recent Articles

spot_img

Related Stories

Share via
Copy link