ಬೆಂಗಳೂರು:
ಪರವಾನಗಿ ಹೊಂದಿರುವ ಸಂಸ್ಥೆಗಳಿಗೆ ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ನಿಗದಿಪಡಿಸಿರುವ ಆಟೋರಿಕ್ಷಾ ಪ್ರಯಾಣ ದರಗಳ ಮೇಲೆ ಶೇ.5 ಸೇವಾ ಶುಲ್ಕ ಮತ್ತು ಅನ್ವಯಿಸುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸೇರಿಸಿ ಅಂತಿಮ ಪ್ರಯಾಣ ದರ ನಿಗದಿಪಡಿಸಲು ನಿರ್ದೇಶಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ.
ಆಟೋ ರಿಕ್ಷಾ ಪ್ರಯಾಣಕ್ಕೆ ನಿಗದಿ ಪಡಿಸಿರುವ ದರಕ್ಕಿಂತ ಹೆಚ್ಚಿನ ದರ ವಿಧಿಸಿ ಓಲಾ ಮತ್ತು ಉಬರ್ ತಮ್ಮ ಆ?ಯಪ್ ಮೂಲಕ ಆಟೋರಿಕ್ಷಾ ಸೇವೆ ನೀಡುತ್ತಿದ್ದು, ತಕ್ಷಣದಿಂದ ಬರುವಂತೆ ಈ ಸೇವೆಯನ್ನು ಸ್ಥಗಿತಗೊಳಿಸಬೇಕು ಎಂಬ ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಬೇಕು ಎಂದು ಉಬರ್ ಇಂಡಿಯಾ ಸಿಸ್ಟಮ್ಸ್ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
ರಿಟ್ ಅರ್ಜಿಗಳನ್ನು ವಜಾ ಮಾಡಲಾಗಿದೆ. ಈಗ ಎತ್ತಿ ಹಿಡಿಯಲಾಗಿರುವ ಸರ್ಕಾರದ ಆಕ್ಷೇಪಾರ್ಹವಾದ ಆದೇಶದ ಪ್ರಕಾರ ಮತ್ತು ನಿಗದಿಪಡಿಸಿದ ದರದ ಮೇಲೆ ಅಗ್ರಿಗೇಟರ್ ಸಂಸ್ಥೆಗಳಾದ ಓಲಾ ಮತ್ತು ಉಬೆರ್ ಶೇ. ೫ರಷ್ಟು ಸೇವಾ ಶುಲ್ಕ ಸಂಗ್ರಹಿಸಲು ಅರ್ಹರಾಗಿರುತ್ತಾರೆ? ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಆಟೋರಿಕ್ಷಾ ಅಗ್ರಿಗೇಟರ್ ಸೇವೆ ಒದಗಿಸಲು ಚಾಲ್ತಿಯಲ್ಲಿರುವ ಪರವಾನಗಿ ಹೊಂದಿರುವ ಸಂಸ್ಥೆಗಳಿಗೆ ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ಕಾಲಕಾಲಕ್ಕೆ ನಿಗದಿಪಡಿಸಿರುವ ಆಟೋರಿಕ್ಷಾ ಪ್ರಯಾಣ ದರಗಳ ಮೇಲೆ ಶೇ. 5ರಷ್ಟು ಸೇವಾ ಶುಲ್ಕ ಮತ್ತು ಅನ್ವಯಿಸುವ ಜಿಎಸ್‌ಟಿ ತೆರಿಗೆಯನ್ನು ಸೇರಿಸಿ ಅಂತಿಮ ಪ್ರಯಾಣ ದರ ನಿಗದಿಪಡಿಸಲು ರಾಜ್ಯದ ಎಲ್ಲಾ ಸಾರಿಗೆ ಪ್ರಾಧಿಕಾರಿಗಳಿಗೆ ರಾಜ್ಯ ಸರ್ಕಾರವು 2022ರ ನವೆಂಬರ್ 25ರಂದು ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ಓಲಾ ಮತ್ತು ಉಬರ್ ಆಕ್ಷೇಪಿಸಿದ್ದವು.