ಶ್ರೀನಗರ:
ಎನ್‌ಡಿಎ ಸರ್ಕಾರದ ಎರಡು ಪ್ರಮುಖ ಮೈತ್ರಿ ಪಕ್ಷಗಳಾದ ಟಿಡಿಪಿ ಮತ್ತು ಜೆಡಿಯು ಮುಂದಿನ ದಿನಗಳಲ್ಲಿ ಹೆಚ್ಚು ಜಾಗ್ರತೆಯಿಂದಿರಬೇಕು. ಏಕೆಂದರೆ ಮೈತ್ರಿ ಅವಲಂಬನೆಯನ್ನು ಬಿಜೆಪಿ ಹೆಚ್ಚು ಸಮಯ ಪಾಲಿಸಲು ಒಲವು ಹೊಂದಲು ಬಯಸದೇ ಇರುವುದರಿಂದ ಆಪರೇಷನ್ ಕಮಲ ನಡೆಸುವ ಸಾಧ್ಯತೆಯಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಲೋಕಸಭೆ ಚುನಾವಣೆಯ ಜನಾದೇಶವು ಬಿಜೆಪಿ ಸರ್ಕಾರಕ್ಕೆ ಪರ್ಯಾಯವಾಗಿದ್ದರೂ, ಈ ಹಂತದಲ್ಲಿ ಕಾರ್ಯಸಾಧ್ಯವಾದ ಪರ್ಯಾಯ ಸರ್ಕಾರ ಗೋಚರಿಸುವುದಿಲ್ಲ ಎಂದು ಹೇಳಿದರು.
ತಮ್ಮ ಬಗ್ಗೆ ನೋಡಿಕೊಳ್ಳಬೇಕು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಯಾವ ಸಂದರ್ಭದಲ್ಲಿಯೂ ಆಪರೇಷನ್ ಕಮಲ ನಡೆಯಬಹುದು ಎಂದು ನನಗೆ ಅನಿಸುತ್ತದೆ. ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಮತ್ತು ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಪಕ್ಷಗಳ ಸಂಸದರನ್ನು ಆಪರೇಷನ್ ಕಮಲ ಮಾಡಿ ಖರೀದಿಸುವ ಸಾಧ್ಯತೆಯಿದೆ.ಇದು ನಡೆದರೆ ಬಿಜೆಪಿ ಅವರ ಮೇಲೆ ಅವಲಂಬಿತವಾಗುವ ಅವಶ್ಯಕತೆಯಿಲ್ಲ. ಟಿಡಿಪಿ ಮತ್ತು ಜೆಡಿಯು ಈ ಸಂದರ್ಭದಲ್ಲಿ ಅಪಾಯದಲ್ಲಿದೆ ಎನ್ನಬಹುದು ಎಂದಿದ್ದಾರೆ.
ಬಿಜೆಪಿ ನೇತೃತ್ವದ ಸರ್ಕಾರ ಅವಲಂಬಿತವಾಗಿರುವ ಮಿತ್ರಪಕ್ಷಗಳಿಗೆ ನೀಡಿರುವ ಸಚಿವ ಸ್ಥಾನ ಕಡಿಮೆಯಾಗಿದೆ. ಸರ್ಕಾರವು ತುಂಬಾ ಅವಲಂಬಿತವಾಗಿರುವ ಪಕ್ಷಗಳು ಮತ್ತು ಈ ಸರ್ಕಾರದಲ್ಲಿ ಅವರು ಪಡೆದಿರುವ ಮಂತ್ರಿಗಳ ಸಂಖ್ಯೆಯು ತೀರಾ ಕಡಿಮೆಯಾಗಿದೆ. ಇದನ್ನು ಟಿಡಿಪಿ ಮತ್ತು ಜೆಡಿಯು ನೆನಪಿನಲ್ಲಿಟ್ಟುಕೊಳ್ಳಬೇಕು, ಮುಂದಿನ ದಿನಗಳಲ್ಲಿ ಏನಾಗುತ್ತದೆಯೋ ನೋಡೋಣ ಎಂದರು.
ಇಂಡಿಯಾ ಒಕ್ಕೂಟವು ಸರ್ಕಾರ ರಚಿಸಲು ಬಹುಮತವನ್ನು ಗಳಿಸುವ ಅವಕಾಶವನ್ನು ಕಳೆದುಕೊಂಡಿದೆಯೇ ಎಂಬ ಪ್ರಶ್ನೆಗೆ, ವಿರೋಧ ಪಕ್ಷದ ಮೈತ್ರಿಯು ಸಂವೇದನಾಶೀಲವಾಗಿ ವರ್ತಿಸಿದೆ ಎಂದರು. ನಾವು ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸಿ ವಿಫಲವಾಗಿದ್ದೇವೆ ಎಂದು ಟೀಕಿಸುವುದಾದರೆ ನಾವು ಅಧಿಕಾರದ ಹಸಿವು ಹೊಂದಿಲ್ಲ. ಹಾಗೆಂದು ಎನ್ ಡಿಎ ಮಾತ್ರ ಈ ದೇಶವನ್ನು ಆಳಲು ಸಾಧ್ಯ ಎಂದು ಕೂಡ ಭಾವಿಸಬೇಕಾಗಿಲ್ಲ ಎಂದರು.
ಇಂಡಿಯಾ ಒಕ್ಕೂಟವು ಆದೇಶವನ್ನು ಬಹಳ ಸಂವೇದನಾಶೀಲವಾಗಿ ಒಪ್ಪಿಕೊಂಡಿದೆ ಎಂದು ನಾನು ಭಾವಿಸುತ್ತೇನೆ, ಈ ಬಾರಿ ಜನಾದೇಶ ಪ್ರಧಾನಿ ಮೋದಿ ಪರವಾಗಿರಲಿಲ್ಲ. ಹಾಗೆಂದು ಈಗಿನ ಪರಿಸ್ಥಿತಿಯಲ್ಲಿ ಪರ್ಯಾಯ ಸರ್ಕಾರ ರಚನೆ ಸಾಧ್ಯತೆ ಕಾಣುತ್ತಿಲ್ಲ ಎಂದರು.
ಉತ್ತರ ಪ್ರದೇಶದಂತಹ ಪ್ರಮುಖ ರಾಜ್ಯಗಳಲ್ಲಿ ಪ್ರತಿಪಕ್ಷಗಳು ಗಳಿಸಿದ ಲಾಭಗಳ ಬಗ್ಗೆ ಕೇಳಿದಾಗ, ಇದು ಆಡಳಿತ ವಿರೋಧಿ ಮತ್ತು ಬಿಜೆಪಿಯೊಳಗಿನ ಆಂತರಿಕ ಅಧಿಕಾರದ ಕಲಹದಂತಹ ಅಂಶಗಳಿಂದಾಗಿ ಆಗಿದೆ ಎಂದರು.
ಇದು ಆಡಳಿತ ವಿರೋಧಿ ಮತ್ತು ಆಂತರಿಕ ಕಚ್ಚಾಟ ಮತ್ತು ದುರಹಂಕಾರ ಎರಡರ ಸಂಯೋಜನೆಯಾಗಿದೆ ಎಂದು ನಾನು ಭಾವಿಸುತ್ತೇನೆ. ಮೋದಿ ನಂತರ ಬಿಜೆಪಿಯಲ್ಲಿ ಯಾರು ಪ್ರಧಾನಿಯಾಗುತ್ತಾರೆ ಎಂಬ ಬಗ್ಗೆ ಒಂದು ರೀತಿಯ ಜಗಳವಿದೆ ಎಂಬುದು ರಹಸ್ಯವಲ್ಲ. ಸಚಿವರಿಗೆ 75 ವರ್ಷ ವಯಸ್ಸಿನ ಮಿತಿ ಇದೆ, ಅದು ಮೋದಿಯವರಿಗೆ ಅನ್ವಯವಾಗುವುದಿಲ್ಲವೇ, ಇದೇ ಕಾರಣಕ್ಕೆ ಮಧ್ಯ ಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಲಾಯಿತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಷ್ಟ್ರ ರಾಜಕಾರಣಕ್ಕೆ ಬರುವ ಬಗ್ಗೆ ಬಿಜೆಪಿಯಲ್ಲಿಯೇ ಕೆಲವು ನಾಯಕರಿಗೆ ಆತೆಂಕವಿದೆ ಎಂದರು.
ಇಂಡಿಯಾ ಬಣವು ಭವಿಷ್ಯದಲ್ಲಿ ಪ್ರತಿಪಕ್ಷದ ಮೈತ್ರಿಯಾಗಿ ತನ್ನನ್ನು ಉಳಿಸಿಕೊಳ್ಳಬಹುದೇ ಎಂದು ಕೇಳಿದಾಗ, ಅಬ್ದುಲ್ಲಾ ಅದರ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಅದು ನನಗೆ ಗೊತ್ತಿಲ್ಲ, ಈಗಾಗಲೇ ಆಮ್ ಆದ್ಮಿ ಪಕ್ಷವು ಈ ಮೈತ್ರಿ ಸಂಸತ್ತಿನ ಚುನಾವಣೆಗೆ ಸಂಬಂಧಿಸಿದ್ದು ಎಂದು ಹೇಳುತ್ತಿದೆ. ನಾವು ದೆಹಲಿ ವಿಧಾನಸಭಾ ಚುನಾವಣೆಯ ಬಗ್ಗೆ ಯಾವುದೇ ದೃಷ್ಟಿಕೋನವನ್ನು ಹೊಂದಿಲ್ಲ.
ಪಶ್ಚಿಮ ಬಂಗಾಳದಲ್ಲಿ ಇಂಡಿಯಾ ಬಣದಲ್ಲಿ ಯಾವುದೇ ಸೀಟು ಹಂಚಿಕೆ ಇರಲಿಲ್ಲ. ಹಾಗಾಗಿ, ಮುಂಬರುವ ವಿಧಾನಸಭಾ ಚುನಾವಣೆಗೆ ಇದು ಎಷ್ಟು ಪರಿವರ್ತನೆಯಾಗುತ್ತದೆ ಎಂದು ನನಗೆ ತಿಳಿದಿಲ್ಲ. ನಾನು ಹೇಳಲಾರೆ ಎಂದರು.
ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಕಾಂಗ್ರೆಸ್‌ನೊಂದಿಗೆ ಚುನಾವಣಾ ಪೂರ್ವ ಮೈತ್ರಿಯಲ್ಲಿ ಸ್ಪರ್ಧಿಸುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಒಮರ್ ಅಬ್ದುಲ್ಲಾ, ಮೊದಲು ಪಕ್ಷದೊಳಗೆ ಚರ್ಚಿಸಬೇಕಾಗಿದೆ ಎಂದು ಹೇಳಿದರು.
ಇದು ನಾವು ಪಕ್ಷದೊಳಗೆ ಚರ್ಚಿಸಬೇಕಾದ ವಿಷಯ. ಪಕ್ಷದ ಅಧ್ಯಕ್ಷರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾವು ಕಾಂಗ್ರೆಸ್ ಪಕ್ಷದೊಂದಿಗೆ ಯಾವ ರೀತಿಯ ಚರ್ಚೆ ನಡೆಸುತ್ತೇವೆ ಎಂಬುದರ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ ಎಂದರು.