ಬೆಂಗಳೂರು
ಮೋದಿ ಅವರು ನಮ್ಮ ವಿರುದ್ಧ ಅನಗತ್ಯ ಟೀಕೆ ಮಾಡುವುದನ್ನು ಬಿಟ್ಟು, ರಾಜ್ಯಕ್ಕೆ ಡಬಲ್ ಇಂಜಿನ ಸರ್ಕಾರದ ಕೊಡುಗೆಗಳೇನು ಎಂಬುದನ್ನು ಹೇಳಲಿ ಎಂದು ಡಿ.ಕೆ. ಶಿವಕುಮಾರ್ ಕಿಡಿಕಾರಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮ್ಮ ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸಿ ರಾಜ್ಯಕ್ಕೆ ಅವರು ನೀಡಿರುವ ಕೊಡುಗೆಗಳನ್ನು ಹೇಳಲಿ. ಮೇಕೆದಾಟು, ಮಹದಾಯಿ ಯೋಜನೆ ಆರಂಭಿಸಲು ಏನಾದರೂ ಕ್ರಮ ಕೈಗೊಂಡಿದ್ದಾರಾ? ಬಿಜೆಪಿಯ ತಾಣ ಎಂದು ಹೇಳಿಕೊಳ್ಳುವ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ಏನಾದರೂ ಕ್ರಮ ಕೈಗೊಂಡಿದ್ದಾರಾ? ಜಾಗತಿಕ ಬಂಡವಾಳ ಹೂಡಿಕೆಯಲ್ಲಿ ಯಾರಾದರೂ ಈ ಭಾಗದಲ್ಲಿ ಬಂಡವಾಳ ಹೂಡಿಕೆ ಮಾಡಿದರಾ? ಎಂದು ಪ್ರಶ್ನಿಸಿದರು.
ಬಿಜೆಪಿ ಅವರಿಗೆ ನಮ್ಮ ಗ್ಯಾರಂಟಿ ಯೋಜನೆಗಳಿಂದ ಆತಂಕ ಎದುರಾಗಿದೆ. ರಾಜ್ಯದ ಜನರಿಗೆ 200 ಯುನಿಟ್ ಉಚಿತ, ಮನೆಯೊಡತಿಗೆ 2 ಸಾವಿರ ಖಚಿತ, ಅನ್ನಭಾಗ್ಯದಲ್ಲಿ 10 ಕೆ.ಜಿ ಅಕ್ಕಿ ನಿಶ್ಚಿತ. ಯುವಕರಿಗೆ ನಿರುದ್ಯೋಗ ಭತ್ಯೆ ಹಾಗೂ ಮಹಿಳೆಯರಿಗೆ ಸಾರ್ವಜನಿಕ ಬಸ್ ಗಳಲ್ಲಿ ಉಚಿತ ಪ್ರಯಾಣ ಜಾರಿ ಮಾಡುತ್ತೇವೆ. ಇವುಗಳನ್ನು ಅರಗಿಸಿಕೊಳ್ಳಲಾಗದೆ ಒಂದಲ್ಲಾ ಒಂದು ವಿಚಾರವಾಗಿ ಗೊಂದಲ ಮೂಡಿಸುತ್ತಿದ್ದಾರೆ. ಅವರು ಏನೇ ಮಾಡಿದರೂ ಕಾಂಗ್ರೆಸ್ ಪಕ್ಷ 141 ಸ್ಥಾನಗಳಲ್ಲಿ ಗೆಲವು ಸಾಧಿಸಿ ಅಧಿಕಾರಕ್ಕೆ ಬಂದೇ ಬರಲಿದೆ’ ಎಂದು ತಿರುಗೇಟು ನೀಡಿದರು.
ಗುರುವಾರ ಸಂಜೆ ಹನುಮಾನ್ ಚಾಲೀಸ ಪಠಣೆಗೆ ಕೆಲವು ಸಂಘಟನೆಗಳ ಕರೆ ನೀಡಿರುವ ವಿಚಾರವಾಗಿ ಮಾತನಾಡಿ, ನಾವು ದಿನನಿತ್ಯ ಹನುಮ ಚಾಲೀಸ ಪಠಣೆ ಮಾಡುತ್ತೇವೆ. ಅವರು ಮಾತ್ರ ಹನುಮನ ಭಕ್ತರೇ? ನಾವು ಹನುಮನ ಭಕ್ತರಲ್ಲವೇ? ಹಿಂದೆ ಇದ್ದ ಆರ್ ಎಸ್ಎಸ್ ಬೇರೆ ಈಗಿರುವ ಆರ್ ಎಸ್ಎಸ್ ಬೇರೆ. ನಾವು ಸಮಾಜದಲ್ಲಿ ಶಾಂತಿ ಭಂಗ ಮಾಡುವ ಸಂಘಟನೆಗಳ ಬಗ್ಗೆ ಮಾತನಾಡಿದ್ದು, ಯಾವ ಸಂಘಟನೆಗಳು ಸಮಾಜದ ಶಾಂತಿಗೆ ಭಂಗ ಮಾಡುತ್ತವೆಯೋ ಅಂತಹ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದೇವೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ