ಹೈದರಾಬಾದ್:
ಇಲ್ಲಿನ ಬಾಚುಪಲ್ಲಿ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ನಿರ್ಮಾಣ ಹಂತದ ಅಪಾರ್ಟ್‌ಮೆಂಟ್‌ನ ತಡೆಗೋಡೆ ಕುಸಿದು ನಾಲ್ಕು ವರ್ಷದ ಮಗು ಸೇರಿದಂತೆ ಏಳು ಮಂದಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.ಬಾಚುಪಲ್ಲಿ ಪೊಲೀಸರ ಪ್ರಕಾರ, ಮೃತರು ಒಡಿಶಾ ಮತ್ತು ಛತ್ತೀಸ್‌ಗಢಕ್ಕೆ ಸೇರಿದ ವಲಸೆ ಕಾರ್ಮಿಕರಾಗಿದ್ದು, ಮಂಗಳವಾರ ಸಂಜೆ ಈ ಘಟನೆ ನಡೆದಿದೆ.
ಸಂತ್ರಸ್ತರ ದೇಹಗಳನ್ನು ಕಟ್ಟಡದ ಅವಶೇಷಗಳಡಿಯಿಂದ ಬುಧವಾರ ಮುಂಜಾನೆ ಹೊರತೆಗೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ನಗರ ಮತ್ತು ತೆಲಂಗಾಣದ ಹಲವೆಡೆ ಭಾರಿ ಮಳೆ ಸುರಿದಿದ್ದು, ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಹಲವೆಡೆ ರಸ್ತೆಗಳು ಜಲಾವೃತಗೊಂಡಿಂದ್ದು, ಸಂಚಾರ ದಟ್ಟಣೆ ಉಂಟಾಗಿದೆ.
ಡಿಆರ್‌ಎಫ್ (ವಿಪತ್ತು ನಿರ್ವಹಣಾ ಪಡೆ) ತಂಡಗಳನ್ನು ನಿಯೋಜಿಸಲಾಗಿದ್ದು, ನಗರದ ವಿವಿಧೆಡೆ ನೀರು ನಿಂತಿರುವುದು ಮತ್ತು ಬಿದ್ದ ಮರಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿ (ಪುರಸಭೆ ಆಡಳಿತ ಮತ್ತು ನಗರಾಭಿವೃದ್ಧಿ) ದಾನಕಿಶೋರ್ ಅವರು ಜಿಎಚ್‌ಎಂಸಿ ಆಯುಕ್ತ ರೊನಾಲ್ಡ್ ರೋಸ್ ಅವರೊಂದಿಗೆ ವಿವಿಧ ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಿ ನಗರದ ಮೈದಾನದಲ್ಲಿ ಡಿಆರ್‌ಎಫ್ ತಂಡಗಳಿಗೆ ಸೂಚನೆಗಳನ್ನು ನೀಡಿದರು.