ನವದೆಹಲಿ
ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ಕೆಲವೇ ತಿಂಗಳುಗಳ ಹಿಂದಷ್ಟೇ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ ಬಲಿಷ್ಠ ತಂಡಗಳನ್ನು ಮಣಿಸಿ ಸೆಮಿಫೈನಲ್‌ಗೇರುವಲ್ಲಿ ಯಶಸ್ವಿಯಾಗಿದ್ದ ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಇಡೀ ಕ್ರಿಕೆಟ್ ಲೋಕದಲ್ಲೇ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೀಗ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ತನ್ನ ದೇಶದಲ್ಲಿ ಕ್ರಿಕೆಟ್ ಅನ್ನು ಸಂಪೂರ್ಣವಾಗಿ ನಿಷೇಧಿಸಲು ತಯಾರಿ ನಡೆಸುತ್ತಿದೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ, ತಾಲಿಬಾನ್‌ನ ಪರಮೋಚ್ಚ ನಾಯಕ ಹಿಬತುಲ್ಲಾ ಅಖುಂದ್ಜಾದಾ ಅವರು ದೇಶದಲ್ಲಿ ಕ್ರಿಕೆಟ್ ನಿಷೇಧಿಸಲು ಆದೇಶಿಸಿದ್ದಾರೆ ಎಂದು ಹಲವು ವರದಿಗಳಲ್ಲಿ ಹೇಳಲಾಗುತ್ತಿದೆ.
ಕೆಲವು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿರುವಂತೆ, ಕ್ರಿಕೆಟ್ ಆಟವು ದೇಶದಲ್ಲಿ ಕೆಟ್ಟ ವಾತಾವರಣವನ್ನು ಸೃಷ್ಟಿಸುತ್ತಿದೆ. ಅಲ್ಲದೆ ಈ ಆಟ ಷರಿಯಾ ಕಾನೂನಿಗೆ ವಿರುದ್ಧವಾಗಿದೆ. ಹಾಗಾಗಿ ಈ ಆಟವನ್ನು ದೇಶದಲ್ಲಿ ನಿಷೇಧಿಸಲಾಗುತ್ತಿದೆ ಎಂದು ತಾಲಿಬಾನ್‌ನ ಪರಮೋಚ್ಚ ನಾಯಕ ಹಿಬತುಲ್ಲಾ ಅಖುಂದ್ಜಾದಾ ಹೇಳಿದ್ದಾರೆ ಎಂದು ವರದಿಯಾಗಿದೆ.
ವಾಸ್ತವವಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ದೇಶದಲ್ಲಿ ಹಲವು ಬದಲಾವಣೆಗಳಾಗಿವೆ. ಮೊದಲಿಗೆ ಮಹಿಳೆಯರ ಕ್ರಿಕೆಟ್ಗೆ ನಿಷೇಧ ಹೇರುವುದರ ಜೊತೆಗೆ ಮಹಿಳೆಯರು ಭಾಗವಹಿಸುವ ಎಲ್ಲಾ ಕ್ರೀಡೆಗಳಿಗೆ ತಾಲಿಬಾನ್ ಸರ್ಕಾರ ಬ್ರೇಕ್ ಹಾಕಿತ್ತು. ಇದೀಗ ಪುರುಷರ ಕ್ರಿಕೆಟ್ಗೂ ಫುಲ್ಸ್ಟಾಪ್ ಇಡಲು ಮುಂದಾಗಿದ್ದು, ತಾಲಿಬಾನ್ ಸರ್ಕಾರದ ಈ ನಡೆ ಕ್ರಿಕೆಟ್ ಲೋಕದಲ್ಲಿ ಭಾರೀ ಸಂಚಲನ ಸೃಷ್ಟಿಸುತ್ತಿದ್ದು, ಅಫ್ಘಾನ್ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಸರ್ಕಾರ ಹೇರಿರುವ ಈ ನಿಷೇಧವನ್ನು ಯಾವಾಗ ಮತ್ತು ಹೇಗೆ ಜಾರಿಗೊಳಿಸಲಾಗುವುದು ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ಆದರೆ ಅದರ ಸಾಧ್ಯತೆಯನ್ನು ತಳ್ಳಿಹಾಕುವುದಕ್ಕು ಸಾಧ್ಯವಿಲ್ಲ.
ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಪ್ರಸ್ತುತ ಭಾರತ ಪ್ರವಾಸದಲ್ಲಿದೆ. ಗ್ರೇಟರ್ ನೋಯ್ಡಾದಲ್ಲಿ ನಡೆಯಬೇಕಿದ್ದ ನ್ಯೂಜಿಲೆಂಡ್ ವಿರುದ್ಧ ತಂಡ ಟೆಸ್ಟ್ ಪಂದ್ಯವನ್ನು ಆಡಬೇಕಿತ್ತು. ಆದರೆ ಪ್ರತಿಕೂಲ ಹವಾಮಾನ ಮತ್ತು ಮೈದಾನದ ಕಳಪೆ ಸ್ಥಿತಿಯಿಂದಾಗಿ ಈ ಪಂದ್ಯವನ್ನು ರದ್ದುಗೊಳಿಸಲಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಭಾಗವಾಗಿದ್ದ ಈ ಪಂದ್ಯ ರದ್ದಾಗಿರುವುದು ಉಭಯ ತಂಡಗಳು ನಿರಾಶೆಗೊಳ್ಳುವಂತೆ ಮಾಡಿದೆ. ಈ ನಡುವೆ ತಾಲಿಬಾನ್ ಸರ್ಕಾರದ ಈ ನಿರ್ಧಾರ ಅಫ್ಘಾನ್ ಕ್ರಿಕೆಟ್ ತಂಡದ ಆಟಗಾರರಿಗೆ ಇನ್ನಷ್ಟು ಆತಂಕ ತಂದೊಡ್ಡಿದೆ.