ಪಾಕಿಸ್ತಾನಿ ಹೊರಠಾಣೆಗಳಿಗೆ ತಾಲಿಬಾನ್ ಮುತ್ತಿಗೆ- ಸಮವಸ್ತ್ರ, ಶಸ್ತ್ರಾಸ್ತ್ರಗಳು ವಶಕ್ಕೆ

ಕಾಬೂಲ್:

    ಕದನ ವಿರಾಮ ಜಾರಿಯಾಗಿದ್ದರೂ ಅಫ್ಘಾನ್ ಪ್ರದೇಶದೊಳಗೆ ಪಾಕಿಸ್ತಾನ ವಾಯುದಾಳಿಯನ್ನು   ಮುಂದುವರಿಸಿತ್ತು. ಇದರಿಂದ 15 ಮಂದಿ ನಾಗರಿಕರು ಸಾವನ್ನಪ್ಪಿದ್ದರು. ಇದಕ್ಕೂ ಮೊದಲು ತಾಲಿಬಾನ್ ಪಡೆಗಳು   ಪಾಕಿಸ್ತಾನದ ಹೊರಠಾಣೆಗಳನ್ನು ಆಕ್ರಮಿಸಿಕೊಂಡು ಅಲ್ಲಿದ್ದ ಸಮವಸ್ತ್ರ, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿತು. ಬಳಿಕ ಅದನ್ನು ಸಾರ್ವಜನಿಕವಾಗಿ ಪ್ರದರ್ಶಿಸಿತ್ತು. 48 ಗಂಟೆಗಳ ಕದನ ವಿರಾಮ ಜಾರಿಯಲ್ಲಿದ್ದರೂ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಲೇ ಇದೆ. ಎರಡು ದೇಶಗಳ ನಡುವಿನ ಉದ್ವಿಗ್ನತೆಯು ಕೇವಲ ಗಡಿ ಘರ್ಷಣೆಯಾಗಿ ಉಳಿದಿಲ್ಲ. ಇದು ಪೂರ್ಣ ರೂಪದಲ್ಲಿ ಯುದ್ಧವಾಗಿ ಮಾರ್ಪಟ್ಟಿದೆ.

     ಕಾಬೂಲ್ ಮತ್ತು ಕಂದಹಾರ್‌ ಮೇಲೆ ಬುಧವಾರ ಪಾಕಿಸ್ತಾನ ವಾಯುದಾಳಿ ನಡೆಸಿದ್ದು, ಇದರಿಂದ 15 ಅಫ್ಘಾನ್ ನಾಗರಿಕರು ಸಾವನ್ನಪ್ಪಿದ್ದಾರೆ. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ತಾಲಿಬಾನ್ ಪಡೆ ಸ್ಪಿನ್ ಬೋಲ್ಡಾಕ್‌ನಲ್ಲಿ ಗಡಿ ಹೊರಠಾಣೆಗಳನ್ನು ವಶಪಡಿಸಿಕೊಂಡಿತ್ತು.

   ಡುರಾಂಡ್ ಲೈನ್ ಬಳಿಯ ಚೆಕ್ ಪೋಸ್ಟ್ ನಲ್ಲಿ ಪಾಕಿಸ್ತಾನಿ ಸೇನೆ ಬಿಟ್ಟು ಹೋಗಿದ್ದ ಮಿಲಿಟರಿ ಸಮವಸ್ತ್ರಗಳನ್ನು ಅಫ್ಘಾನಿಸ್ತಾನದ ಪೂರ್ವ ನಂಗ್ರಹಾರ್ ಪ್ರಾಂತ್ಯದಲ್ಲಿ ಪ್ರದರ್ಶಿಸಲಾಗಿದೆ. ತಾಲಿಬಾನ್ ಪಡೆಗಳು ಪ್ರತಿದಾಳಿ ನಡೆಸಲು ಪ್ರಾರಂಭಿಸಿದ ಬಳಿಕ ಪಾಕಿಸ್ತಾನಿ ಸೈನಿಕರು ಓಡಿಹೋದರು. ಈ ವೇಳೆ ಗಡಿ ಹೊರಠಾಣೆಗಳನ್ನು ವಶಕ್ಕೆ ಪಡೆದ ತಾಲಿಬಾನ್ ಪಡೆಗಳು ಅಲ್ಲಿದ್ದ ಮಿಲಿಟರಿ ಸಮವಸ್ತ್ರ, ಶಸ್ತ್ರಾಸ್ತ್ರಗಳನ್ನು ಕೂಡ ವಶಕ್ಕೆ ಪಡೆದಿತ್ತು.

   ಎರಡು ದೇಶಗಳ ಸಂಘರ್ಷದ ನಡುವೆ ಪಾಕಿಸ್ತಾನದ ವಿರುದ್ಧ ಇಸ್ಲಾಮಿಕ್ ಎಮಿರೇಟ್‌ನ ಹೋರಾಟಗಾರರ ಅಫ್ಘಾನಿಸ್ತಾನದ ತಾಲಿಬಾನ್ ಜೊತೆ ಸೇರಿದ್ದಾರೆ. ಇದು ಈಗ ಪಾಕಿಸ್ತಾನಕ್ಕೆ ನುಂಗಲಾರದ ತುತ್ತಾಗಿದೆ. 

   ಪಾಕಿಸ್ತಾನ ಅಫ್ಘಾನಿಸ್ತಾನದ ಘರ್ಷಣೆಯಲ್ಲಿ 200ಕ್ಕೂ ಹೆಚ್ಚು ಸಾವು ಸಂಭವಿಸಿದೆ. ತಾಲಿಬಾನ್ ಆಡಳಿತದ ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತಾಕಿ ಭಾರತಕ್ಕೆ ಮೊದಲ ಭೇಟಿ ನೀಡಿದ ಸಂದರ್ಭದಲ್ಲಿ ಎರಡು ದೇಶಗಳ ನಡುವೆ ಯುದ್ಧ ಸಂಭವಿಸಿದೆ. ಕಾಬೂಲ್‌ನಲ್ಲಿರುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಶಿಬಿರಗಳನ್ನು ಗುರಿಯಾಗಿಸಿಕೊಂಡು ಇಸ್ಲಾಮಾಬಾದ್ ದಾಳಿ ನಡೆಸಿದ್ದರಿಂದ ಯುದ್ಧ ಪ್ರಾರಂಭವಾಯಿತು. ಇದರೊಂದಿಗೆ ಗಡಿ ಸಂಘರ್ಷ ಮತ್ತು ಅಫ್ಘಾನಿಸ್ತಾನದ ವಾಯುಪ್ರದೇಶಕ್ಕೆ ನುಗ್ಗಿ ಪಾಕಿಸ್ತಾನ ದಾಳಿ ನಡೆಸಿದೆ ಎಂದು ಅಫ್ಘಾನಿಸ್ತಾನ ದೂರಿದೆ. 

   ಸ್ವಾತಂತ್ರ್ಯಪೂರ್ವ ಭಾರತ ಮತ್ತು ಅಫ್ಘಾನಿಸ್ತಾನದ ನಡುವಿನ ಗಡಿ ರೇಖೆ ಬ್ರಿಟಿಷರು ಗುರುತಿಸಿದ್ದ ಡ್ಯುರಾಂಡ್ ರೇಖೆಯೇ ವಿವಾದದ ಕೇಂದ್ರಬಿಂದುವಾಗಿದೆ. ಈ ರೇಖೆಯನ್ನು ಎರಡೂ ಕಡೆಯ ಪಠಾಣರು ಒಪ್ಪಿಕೊಂಡಿಲ್ಲ. ಹೀಗಾಗಿ ಡ್ಯುರಾಂಡ್ ರೇಖೆಯ ಉದ್ದಕ್ಕೂ ಸುಮಾರು ಏಳು ಸ್ಥಳಗಳಲ್ಲಿ ಪಾಕಿಸ್ತಾನ ಮತ್ತು ಅಫ್ಘಾನ್ ನಡುವೆ ಗುಂಡಿನ ಕಾಳಗ ನಡೆದಿವೆ. ಸಂಘರ್ಷದ ಕುರಿತು ಮಾತನಾಡಿರುವ ಪಕ್ತಿಯಾದ ಕಾಬೂಲ್ ಜಾನ್ ಟೋಲೋ, ಇಸ್ಲಾಮಿಕ್ ಎಮಿರೇಟ್ ಯಾರೊಂದಿಗೂ ಸಂಘರ್ಷವನ್ನು ಬಯಸುವುದಿಲ್ಲ. ಆದರೆ ಪಾಕಿಸ್ತಾನ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಲೇ ಇದೆ ಎಂದು ಹೇಳಿದ್ದಾರೆ.

   ಕಾಬೂಲ್ ನಿವಾಸಿ ಅಬ್ದುಲ್ ಗಫೌರ್ ಅವರು, ನಾವು ಇಸ್ಲಾಮಿಕ್ ಎಮಿರೇಟ್ ಮತ್ತು ನಮ್ಮ ದೇಶವನ್ನು ರಕ್ಷಿಸುತ್ತೇವೆ. ನಮ್ಮ ತಾಯ್ನಾಡಿನಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಯಾವುದೇ ವಿದೇಶಿಯರಿಗೆ ಇಲ್ಲ ಎಂದು ಹೇಳಿದ್ದಾರೆ. 

   ತಾಲಿಬಾನ್ ಹೋರಾಟಗಾರರು ಡುರಾಂಡ್ ರೇಖೆಯಾದ್ಯಂತ ಪಾಕಿಸ್ತಾನಿ ಪಡೆಗಳ ಮೇಲೆ ಬಲವಾದ ದಾಳಿ ನಡೆಸಿದ್ದು, 58 ಪಾಕಿಸ್ತಾನಿ ಸೈನಿಕರನ್ನು ಕೊಂದು 20 ಪಾಕಿಸ್ತಾನಿ ಭದ್ರತಾ ಠಾಣೆಗಳನ್ನು ನಾಶಪಡಿಸಿದೆ ಎನ್ನಲಾಗಿದೆ. ಬುಧವಾರ ಸಂಜೆಯಿಂದ 48 ಗಂಟೆಗಳ ಕದನ ವಿರಾಮ ಜಾರಿಗೆ ಬಂದಿದ್ದರೂ ಇದನ್ನು ಎರಡು ರಾಷ್ಟ್ರಗಳು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಈ ನಡುವೆಯೇ ಪಾಕಿಸ್ತಾನವು ಕತಾರ್ ಮತ್ತು ಸೌದಿ ಅರೇಬಿಯಾ ಸಂಪರ್ಕಿಸಿದ್ದು, ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸುವಂತೆ ಕೇಳಿದೆ ಎನ್ನಲಾಗಿದೆ.

Recent Articles

spot_img

Related Stories

Share via
Copy link