ಮುಂಬೈ:
2023ರಲ್ಲಿ ತೆರೆಕಂಡ ಬಾಲಿವುಡ್‌ನ ʼಅನಿಮಲ್ʼ ಚಿತ್ರದಲ್ಲಿ ಮೊದಲ ಬಾರಿಗೆ ಬೋಲ್ಡ್ ಆಗಿ ಕಾಣಿಸಿಕೊಂಡ ಕನ್ನಡತಿ ರಶ್ಮಿಕಾ ಮಂದಣ್ಣ ರಣಬೀರ್ ಕಪೂರ್ ಜತೆ ಇಂಟಿಮೇಟ್ ದೃಶ್ಯಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದರು. ಅದುವರೆಗೆ ಪಕದ್ಮನೆ ಹುಡುಗಿ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರು ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್ʼನಲ್ಲಿ ಗ್ಲಾಮರಸ್ ಅವತಾರ ತಾಳಿ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದರು. ಇದೀಗ ಮತ್ತೊಮ್ಮೆ ಹಾಟ್ ಅವತಾರ ತಾಳಿದ್ದಾರೆ. ಬಾಲಿವುಡ್‌ನ ಹಾರರ್-ಕಾಮಿಡಿ ಚಿತ್ರ ʼಥಮ್ಮʼದ ಮೊದಲ ಹಾಡು ರಿಲೀಸ್ ಆಗಿದ್ದು , ಇದರಲ್ಲಿ ರಶ್ಮಿಕಾ ಮೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಬೋಲ್ಡ್ ಸ್ಟೆಪ್ ಹಾಕಿದ್ದಾರೆ. ಈ ಚಿತ್ರದಲ್ಲಿ ಆಯುಷ್ಮಾನ್ ಖುರಾನ ನಾಯಕನಾಗಿ ನಟಿಸಿದ್ದು, ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್ ಗಮನ ಸೆಳೆದಿದೆ. ಆಯುಷ್ಮಾನ್ ಖುರಾನ-ರಶ್ಮಿಕಾ ಕಾಂಬಿನೇಷನ್‌ನ ಮೊದಲ ಚಿತ್ರ ಇದಾಗಿದ್ದು, ಈ ಕಾರಣಕ್ಕೂ ಕುತೂಹಲ ಕೆರಳಿಸಿದೆ.
ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣದ ಈ ಚಿತ್ರಕ್ಕೆ ಹಾರರ್ ಸಿನಿಮಾದ ಮೂಲಕ ಬಾಲಿವುಡ್‌ನಲ್ಲಿ ಹೊಸದೊಂದು ಟ್ರಂಡ್ ಹುಟ್ಟು ಹಾಕಿರುವ ಆದಿತ್ಯ ಸರ್ಪೋದಾರರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಹಾರರ್ ಚಿತ್ರವನ್ನು ರಶ್ಮಿಕಾ ಒಪ್ಪಿಕೊಂಡಿದ್ದು, ಪ್ರೇತದ ಪಾತ್ರದಲ್ಲಿ ನಟಿಸಿದ್ದಾರೆ.
ಇದೀಗ ಹೊರಬಂದಿರುವ ʼತುಮ್ ಮೇರೆ ನಾ ಹುಯೇʼ ಹಾಡಿನಲ್ಲಿ ಆಯುಷ್ಮಾನ್ ಖುರಾನ ಜತೆ ಮೈಚಳಿ ಬಿಟ್ಟು ರಶ್ಮಿಕಾ ಕುಣಿದಿದ್ದು, ಇವರಿಬ್ಬರ ಕೆಮಿಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇವರಿಬ್ಬರು ಜೋಡಿ ಚೆನ್ನಾಗಿದೆ. ಚಿತ್ರ ನೋಡಲು ಕಾತುರದಿಂದ ಕಾಯುತ್ತಿದ್ದೇವೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಹಲವರು ರಶ್ಮಿಕಾ ಬೋಲ್ಡ್ ಅವತಾರಕ್ಕೆ, ಸ್ಟೆಪ್‌ಗೆ ಬೌಲ್ಡ್ ಆಗಿದ್ದಾರೆ. ಐಟಂ ಸಾಂಗ್ ರೀತಿಯಲ್ಲಿ ಈ ಹಾಡು ಮೂಡುಬಂದಿದ್ದು, ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀಕ್ಷೆ ಪಡೆದುಕೊಂಡಿದೆ. ಹಾಗೆ ನೋಡಿದರೆ ರಶ್ಮಿಕಾ ಹಾಡಿನಲ್ಲಿ ಈ ಹಿಂದೆಯೂ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಿದೆ. ಟಾಲಿವುಡ್‌ನ ʼಪುಷ್ಪʼ ಮತ್ತು ʼಪುಷ್ಪ 2ʼ ಚಿತ್ರಗಳ ಹಾಡಿನಲ್ಲಿ ಬೋಲ್ಡ್ ಸ್ಟೆಪ್ ಹಾಕಿ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದ್ದರು.
ಜನುಮ-ಜನುಮಾಂತರದ ಪ್ರೇಮಕಥೆಯನ್ನು ಹೊಂದಿರುವ ʼಥಮ್ಮʼ ಈಗಾಗಲೇ ನಿರೀಕ್ಷೆ ಮೂಡಿಸಿದ್ದು, ಅಕ್ಟೋಬರ್ 21ರಂದು ಚಿತ್ರ ತೆರೆಕಾಣಲಿದೆ. ಪ್ರಿಯಕರನಿಗಾಗಿ ನೂರಾರು ವರ್ಷಗಳಿಂದ ಕಾಯುತ್ತಿರುವ ಗ್ಲಾಮರಸ್ ದೆವ್ವದ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಇನ್ನು ಮುಖ್ಯ ಪಾತ್ರಗಳಲ್ಲಿ ನವಾಜುದ್ದೀನ್ ಸಿದ್ಧಿಕಿ, ಪರೇಶ್ ರಾವೆಲ್, ಸತ್ಯರಾಜ್ ಮತ್ತಿತರರು ನಟಿಸಿದ್ದಾರೆ. ವರುಣ್ ಧವನ್ ಅತಿಥಿ ಪಾತ್ರದಲ್ಲಿ ನಟಿಸಿದ್ದು, ಮಲೈಕಾ ಅರೋರ ಮತ್ತು ನೋರಾ ಫತೇಹಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಊಟಿ, ಮುಂಬೈ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಸದ್ಯ ಚಿತ್ರತಂಡ ಕೊನೆಯ ಹಂತದ ಸಿದ್ಧತೆಯಲ್ಲಿದ್ದು, ಕೆಲವೇ ದಿನಗಳಲ್ಲಿ ಪ್ರಚಾರ ಕಾರ್ಯಕ್ಕೆ ಇಳಿಯಲಿದೆ.
