ಬೆಂಗಳೂರು:
ಲೋಕಸಭೆ ಚುನಾವಣೆ 2024ರ ಹೊತ್ತಿನಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಜಾಹೀರಾತು ಫೈಟ್ ಜೋರಾಗಿದೆ. ಕೆಲ ದಿನಗಳ ಹಿಂದೆ ಪತ್ರಿಕೆಗಳಲ್ಲಿ ಕಾಂಗ್ರೆಸ್ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಚೊಂಬು ಜಾಹೀರಾತನ್ನು ಪ್ರಕಟಿಸಿ ವ್ಯಾಪಕವಾಗಿ ಸದ್ದು ಮಾಡಿತ್ತು.
ಈಗ ಅದಕ್ಕೆ ಪ್ರತಿಯಾಗಿ ಬಿಜೆಪಿ ಕಾಂಗ್ರೆಸ್ ಸರ್ಕಾರ ವಿರುದ್ದ 9 ಕಾರಣಗಳನ್ನು ನೀಡಿ ಕಾಂಗ್ರೆಸ್ ಡೇಂಜರಸ್ ಎಂದು ಜಾಹೀರಾತು ನೀಡಿದೆ. ಅಲ್ಲದೆ ಕನ್ನಡಿಗರ ಕೈಗೆ ಚಿಪ್ಪು ನೀಡಿದ ಕಾಂಗ್ರೆಸ್ ಸರ್ಕಾರ ಎಂದು ಆಪಾದಿಸಿ 10 ಕಾರಣಗಳನ್ನು ನೀಡಿದೆ.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ವಿರುದ್ಧ ಕಾಂಗ್ರೆಸ್ ನ ಪೇಸಿಎಂ ಪೋಸ್ಟರ್ ಅಭಿಯಾನ ಭಾರೀ ಸದ್ದು ಮಾಡಿತ್ತು. ಲೋಕಸಭೆ ಚುನಾವಣೆಗೂ ಕಾಂಗ್ರೆಸ್ ಇದೇ ಜಾಹೀರಾತು ತಂತ್ರವನ್ನು ಅನುಸರಿಸಿತು. ಆದರೆ ಈ ಸಲ ಬಿಜೆಪಿ ಕಾಂಗ್ರೆಸ್ ಗೆ ತಿರುಗೇಟು ಕೊಟ್ಟಿದೆ. ಕಾಂಗ್ರೆಸ್ ನ ಚೊಂಬಿನ ಜಾಹೀರಾತು ಅಭಿಯಾನಕ್ಕೆ ಬಿಜೆಪಿ ಚಿಪ್ಪಿನ ತಿರುಗೇಟು ಕೊಟ್ಟಿದೆ. ಬಿಜೆಪಿ ಪ್ರಮುಖ ಪತ್ರಿಕೆಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಈ ಬಗ್ಗೆ ಜನರ ಗಮನ ಸೆಳೆಯಲು ಪ್ರಯತ್ನಿಸಿದೆ.
ಕೇಂದ್ರ ಸರ್ಕಾರ ಹಾಗೂ ಬಿಜೆಪಿಯಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬುದನ್ನು ಜನತೆಯ ಮುಂದೆ ಬಿಂಬಿಸಲು ಕಾಂಗ್ರೆಸ್ ಏಪ್ರಿಲ್ 19ರಂದು ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ದೊಡ್ಡ ಚೊಂಬಿನ ಫೋಟೋ ಇರುವ ಜಾಹೀರಾತು ಪ್ರಕಟಿಸಿ ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಚೊಂಬು ಎಂದು ಟೀಕಿಸಿತ್ತು.
ಇದಕ್ಕೆ ತಿರುಗೇಟು ಎಂಬಂತೆ ಬಿಜೆಪಿ 2013ರಲ್ಲಿ ಸಿಎಂ ಸಿದ್ದರಾಮಯ್ಯ ಅವರು ಚೊಂಬು ಹಿಡಿದುಕೊಂಡು ಬಯಲು ಶೌಚಕ್ಕೆ ಹೋಗುತ್ತಿರುವ ಮತ್ತು 2023ರಲ್ಲಿ ಚೊಂಬು ಹಿಡಿದುಕೊಂಡು ಶೌಚಾಲಯಕ್ಕೆ ಹೋಗುತ್ತಿರುವ ಎಡಿಟೆಡ್ ಚಿತ್ರವನ್ನು ಟ್ವೀಟ್ ಮಾಡಿ ಇಷ್ಟೇ ವ್ಯತ್ಯಾಸ ಎಂದಿತು. ಅಲ್ಲದೆ ಕಾಂಗ್ರೆಸ್ ಡೇಂಜರ್ ಎಂಬ ಜಾಹೀರಾತಿನಲ್ಲಿ ಲವ್ ಜಿಹಾದ್, ಕುಕ್ಕರ್ ಬಾಂಬ್, ವಿಧಾನ ಸೌಧ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಸೇರಿದಂತೆ ಹಲವು ವಿಚಾರಗಳನ್ನು ಉಲ್ಲೇಖಿಸಿದೆ. ಕನ್ನಡಿಗರ ಕೈಗೆ ಚಿಪ್ಪು ನೀಡಿದ ಕಾಂಗ್ರೆಸ್ ಎಂದು ಜಾಹೀರಾತು ನೀಡಿ ಅದರಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಕನ್ನಡಿಗರ ಕೈಗೆ ಸಿಕ್ಕಿರೋದು ಚಿಪ್ಪು ಎಂದು ಟೀಕಿಸಿದೆ.