ಮುಂಬೈ:
ಅಯೋಧ್ಯೆಯಲ್ಲಿನ ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿಗೆ ಮುಂದಿನ ವರ್ಷ ಶಂಕುಸ್ಥಾಪನೆ ನೆರವೇರುವ ಸಾಧ್ಯತೆಯಿದ್ದು, ಸಮಾರಂಭಕ್ಕೆ ಸಾಧು ಸಂತರು, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗುರುಗಳನ್ನು ಆಹ್ವಾನಿಸಲಾಗುವುದು ಎಂದು ಯೋಜನೆಗೆ ಸಂಬಂಧಿಸಿದವರು ಶುಕ್ರವಾರ ತಿಳಿಸಿದ್ದಾರೆ. ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (ಐಐಸಿಎಫ್) ಈ ಮಸೀದಿ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ಅಯೋಧ್ಯೆ ಮಸೀದಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಜಿ ಅರ್ಫತ್ ಶೇಖ್ ಮಾತನಾಡಿ, ಮುಂದಿನ ಐದಾರು ವರ್ಷಗಳಲ್ಲಿ ಮಸೀದಿ ನಿರ್ಮಾಣ ಪೂರ್ಣಗೊಂಡಾಗ ಮೆಕ್ಕಾ ಮಸೀದಿಯಲ್ಲಿ ನಮಾಜ್‌ನ ನೇತೃತ್ವ ವಹಿಸುವ ಇಮಾಮ್-ಎ-ಹರಾಮ್ ಸೇರಿದಂತೆ ಎಲ್ಲಾ ದೇಶಗಳ ಉನ್ನತ ಧರ್ಮಗುರುಗಳನ್ನು ಆಹ್ವಾನಿಸಲಾಗುವುದು ಎಂದರು.
ಮಸೀದಿಯ ಜೊತೆಗೆ, ದಂತವೈದ್ಯಶಾಸ್ತ್ರ, ಕಾನೂನು, ವಾಸ್ತುಶಿಲ್ಪ ಮತ್ತು ಅಂತರರಾಷ್ಟ್ರೀಯ ಸಂಬಂಧಗಳಂತಹ ವಿವಿಧ ವಿಷಯಗಳಿಗೆ ಮೀಸಲಾದ ಕಾಲೇಜುಗಳನ್ನು ಮಸೀದಿ ಅಭಿವೃದ್ಧಿ ಸಮಿತಿಯು ಅಲ್ಲಿ ಅಭಿವೃದ್ಧಿಪಡಿಸುತ್ತಿದೆ. ಹೆಚ್ಚುವರಿಯಾಗಿ, ಕ್ಯಾನ್ಸರ್ ಚಿಕಿತ್ಸೆ ಆಸ್ಪತ್ರೆ ಸೇರಿದಂತೆ ಎರಡು ಆಸ್ಪತ್ರೆಗಳು ಬರಲಿವೆ, ಎಲ್ಲಾ ಧರ್ಮದ ಜನರಿಗಾಗಿ ಸಸ್ಯಾಹಾರಿ ಸಮುದಾಯ ಕೇಂದ್ರವನ್ನು ಸಹ ನಿರ್ಮಿಸಲಾಗುವುದು ಎಂದು ಶೇಖ್ ಹೇಳಿದರು.