ರೇವಣ್ಣ ಜಾಮೀನು ಅರ್ಜಿ ತಿರಸ್ಕೃತ….!

ಬೆಂಗಳೂರು:

    ಮಹಿಳೆಯೊಬ್ಬರ ಅಪಹರಣ ಪ್ರಕರಣದ ಆರೋಪಿಯಾಗಿ ಸದ್ಯ ವಿಶೇಷ ತನಿಖಾ ದಳದ (ಎಸ್‌ಐಟಿ) ಬಂಧನದಲ್ಲಿರುವ ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಮುಂದೂಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಈ ಸಂಬಂಧ ಎಸ್ಐಟಿಗೆ ನೋಟಿಸ್ ಜಾರಿ ಮಾಡಿದೆ. ಮಹಿಳೆಯೊಬ್ಬರನ್ನು ಅಪಹರಿಸಿದ ಆರೋಪದ ಮೇಲೆ 66 ವರ್ಷದ ಮಾಜಿ ಸಚಿವರನ್ನು ಎಸ್‌ಐಟಿ ಶನಿವಾರ ಬಂಧಿಸಿದ್ದು, ಮೇ 8ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ನ್ಯಾಯಾಲಯ ಶನಿವಾರ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

    ಈ ಕುರಿತಂತೆ ಎಚ್‌ಡಿ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್, ಆರೋಪಿ ಪೊಲೀಸ್ ಕಸ್ಟಡಿಯಲ್ಲಿ ಇರುವಾಗ ಆತ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಬಹುದೇ ಎಂಬ ಬಗ್ಗೆ ಆಕ್ಷೇಪಣೆ ಸಲ್ಲಿಸಿ‘ ಎಂದು ಎಸ್ಐಟಿಗೆ ಆದೇಶಿಸಿ ನೋಟಿಸ್ ಜಾರಿಮಾಡಿದರು. ವಿಚಾರಣೆಯನ್ನು ಬುಧವಾರ (ಮೇ 8) ಬೆಳಗ್ಗೆ 11 ಗಂಟೆಗೆ ಮುಂದೂಡಿದರು. 

    ವಿಚಾರಣೆ ವೇಳೆ ಅರ್ಜಿದಾರ ರೇವಣ್ಣ ಪರ ಹಾಜರಾಗಿದ್ದ ಹೈಕೋರ್ಟ್ ಹಿರಿಯ ವಕೀಲ ಸಿವಿ ನಾಗೇಶ್, ಆರೋಪಿಗೆ ಜಾಮೀನು ನೀಡಲು ಸಾಧ್ಯವಿರುವ ಕಾನೂನಿನ ಅಂಶಗಳು ಹಾಗೂ ಸುಪ್ರೀಂಕೋರ್ಟ್ ತೀರ್ಪಿನ ಪೂರ್ವ ನಿದರ್ಶನಗಳನ್ನು ವಿವರಿಸಿದರು.

    ಏಪ್ರಿಲ್ 29 ರಂದು ಮಹಿಳೆಯೊಬ್ಬರನ್ನು ಅಪಹರಿಸಿದ ಆರೋಪದ ಮೇಲೆ ರೇವಣ್ಣ ಮತ್ತು ಅವರ ಆಪ್ತ ಸತೀಶ್ ಬಾಬಣ್ಣ ವಿರುದ್ಧ ಗುರುವಾರ ರಾತ್ರಿ ಪ್ರಕರಣ ದಾಖಲಾಗಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ತನ್ನ ತಾಯಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯ ಪುತ್ರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಬಾಬಣ್ಣನನ್ನು ಎಸ್‌ಐಟಿ ಕಸ್ಟಡಿಗೆ ಪಡೆದುಕೊಂಡಿದೆ.

   ಪ್ರಜ್ವಲ್ ವಿರುದ್ಧ ಸಾಕ್ಷಿ ಹೇಳದಂತೆ ಒತ್ತಾಯಿಸಿ ಮಹಿಳೆಯನ್ನು ಅಪಹರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

    ಪ್ರಜ್ವಲ್ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರ ಆಧಾರದ ಮೇಲೆ ರಾಜ್ಯ ಮಹಿಳಾ ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ನಂತರ ರಾಜ್ಯ ಸರ್ಕಾರವು ಪ್ರಕರಣದ ತನಿಖೆಗಾಗಿ ಏಪ್ರಿಲ್ 28ರಂದು ಎಸ್‌ಐಟಿ ರಚಿಸಿದೆ.

   ಹಾಸನ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾಗಿದ್ದ 33 ವರ್ಷದ ಪ್ರಜ್ವಲ್, ಚುನಾವಣೆ ಮುಗಿದ ಒಂದು ದಿನದ ನಂತರ ಏಪ್ರಿಲ್ 27 ರಂದು ದೇಶವನ್ನು ತೊರೆದಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಸಂಸದರ ವಿರುದ್ಧ ಇಂಟರ್‌ಪೋಲ್ ಬ್ಲೂ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ