ದರ್ಶನ್ ಜಾಮೀನು ಅರ್ಜಿ, ವಿಚಾರಣೆ ಮತ್ತೆ ಮುಂದೂಡಿಕೆ…..!

ಬೆಂಗಳೂರು :

   ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಹಾಗೂ ಇನ್ನು ಕೆಲವರ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್​ನಲ್ಲಿ ನಡೆಯುತ್ತಿದ್ದು, ಕಳೆದ ಕೆಲ ದಿನಗಳಲ್ಲಿ ದರ್ಶನ್, ಪವಿತ್ರಾ ಗೌಡ ಹಾಗೂ ದರ್ಶನ್​ರ ಕಾರು ಚಾಲಕನ ಪರವಾಗಿ ವಕೀಲರುಗಳು ತಮ್ಮ ವಾದಗಳನ್ನು ಮಂಡಿಸಿದ್ದಾರೆ. ಇಂದು (ಡಿಸೆಂಬರ್ 06) ತನಿಖಾಧಿಕಾರಿಗಳ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ವಾದ ಮಂಡಿಸಿದರು. ವಾದ ಆಲಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಡಿಸೆಂಬರ್ 09 (ಸೋಮವಾರ) ಮಧ್ಯಾಹ್ನ 2:30ಕ್ಕೆ ಮುಂದೂಡಿದರು.

   ಪವಿತ್ರಾ ಗೌಡ, ದರ್ಶನ್ ಇನ್ನಿತರೆ ಆರೋಪಿಗಳ ಪರ ವಕೀಲರು ತಮ್ಮ ವಾದಗಳಲ್ಲಿ ಮಂಡಿಸಿದ್ದ ವಿಚಾರಗಳಿಗೆ, ಎತ್ತಿದ್ದ ಪ್ರಶ್ನೆಗಳಿಗೆ ಉತ್ತರ ಕೊಟ್ಟ ದರ್ಶನ್ ಪರ ವಕೀಲರು ತುಸು ಕಠಿಣವಾದ ಪದಗಳನ್ನು ಬಳಸಿಯೇ ವಾದ ಮಂಡಿಸಿದರು. ವಿಶೇಷವಾಗಿ ದರ್ಶನ್ ಪರ ವಕೀಲರಾದ ಸಿವಿ ನಾಗೇಶ್ ಅವರ ವಾದವನ್ನು ನ್ಯಾಯಾಲಯದಲ್ಲಿ ಟೀಕೆ ಮಾಡಿದರಲ್ಲದೆ, ನ್ಯಾಯಾಲಯದ ಹಾದಿ ತಪ್ಪಿಸುವ ಕಾರ್ಯ ಮಾಡಿದ್ದಾರೆ ಎಂದು ಸಹ ವಾದಿಸಿದರು.

   ಇಂದು ವಾದ ಮಾಡಿದ ಎಸ್​ಪಿಪಿ ಪ್ರಸನ್ನ ಕುಮಾರ್ ಅವರು ಮೊದಲಿಗೆ ಪವಿತ್ರಾ ಗೌಡ ಅವರ ವಕೀಲರು ಮಂಡಿಸಿದ ವಾದಗಳಿಗೆ ಚೆಕ್​ಮೇಟ್ ಇಟ್ಟರು. ಪವಿತ್ರಾ ಗೌಡ ಅವರದ್ದು, ಅಪಹರಣದಲ್ಲಾಗಲಿ, ಕೊಲೆಯಲ್ಲಾಗಲಿ ಪಾತ್ರವಿಲ್ಲವೆಂದು ಪವಿತ್ರಾ ಪರ ವಕೀಲ ಸೆಬಾಸ್ಟಿಯನ್ ವಾದಿಸಿದ್ದರು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಸನ್ನ ಕುಮಾರ್ ಅವರು, ರೇಣುಕಾ ಸ್ವಾಮಿ ಅಶ್ಲೀಲ ಸಂದೇಶ ಕಳಿಸಿದಾಗ ಅದು ಇಷ್ಟವಾಗದೇ ಇದ್ದರೆ ಆತನನ್ನು ಕೂಡಲೇ ಬ್ಲಾಕ್ ಮಾಡಬಹುದಿತ್ತು, ಅಲ್ಲದೆ ರೇಣುಕಾ ಸ್ವಾಮಿ ಏಪ್ರಿಲ್ ತಿಂಗಳಿನಿಂದಲೂ ಮೆಸೇಜ್ ಮಾಡುತ್ತಿದ್ದಾನೆ. ಆಗಿನಿಂದಲೂ ಏಕೆ ಬ್ಲಾಕ್ ಮಾಡಲಿಲ್ಲ. ಬದಲಿಗೆ ನಿನ್ನ ನಂಬರ್ ಎಂದು ಪವಿತ್ರಾ ಮೆಸೇಜ್ ಮಾಡಿದ್ದಾರೆ. ಆ ನಂತರ ನಂಬರ್ ಅನ್ನು ಆರೋಪಿ 3 ಪವನ್​ಗೆ ನೀಡಿ ಸಂಭಾಷಣೆ ನಡೆಸುವಂತೆ ಹೇಳಿದ್ದಾರೆ ಎಂದು ಹೇಳುವ ಮೂಲಕ, ರೇಣುಕಾ ಸ್ವಾಮಿ ಅಪಹರಣದಲ್ಲಿ ಪವಿತ್ರಾ ಕೈವಾಡ ಇದೆ ಎಂದರು. 

   ದರ್ಶನ್ ಅನಾರೋಗ್ಯದ ವಿಷಯವಾಗಿ ಅವರ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡ ಪ್ರಸನ್ನ ಕುಮಾರ್, ದರ್ಶನ್ ಪರ ವಕೀಲರು, ನ್ಯಾಯಾಲಯಕ್ಕೆ ಸುಳ್ಳು ಹೇಳಿದ್ದಾರೆ, ನ್ಯಾಯಾಲಯದ ದಾರಿ ತಪ್ಪಿಸುವ ಕಾರ್ಯ ಮಾಡಿದ್ದಾರೆ ಎಂದು ವಾದ ಮಂಡಿಸಿದರು. ಅಂತಿಮವಾಗಿ ನ್ಯಾಯಮೂರ್ತಿಗಳು ಪ್ರಕರಣದ ಮುಂದಿನ ವಿಚಾರಣೆಯನ್ನು ಸೋಮವಾರ (ಡಿಸೆಂಬರ್ 09) ಮಧ್ಯಾಹ್ನ 2:30ಕ್ಕೆ ಮುಂದೂಡಿದರು.

Recent Articles

spot_img

Related Stories

Share via
Copy link