ಬೆಂಗಳೂರು:
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ (Actor Darshan) ಮಧ್ಯಂತರ ಜಾಮೀನು ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ನಾಳೆಗೆ (ಅ.29) ಮುಂದೂಡಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕು ಎಂದು ದರ್ಶನ್ ಪರ ವಕೀಲರು ಕೋರ್ಟ್ಗೆ ಮನವಿ ಮಾಡಿದ್ದಾರೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಎಸ್ಪಿಪಿ ಸಮಯ ಕೋರಿದ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಮಂಗಳವಾರ ಮಧ್ಯಾಹ್ನ 2.30ಕ್ಕೆ ಕೋರ್ಟ್ ಮುಂದೂಡಿದೆ.
ಬೆನ್ನು ನೋವು ಹಿನ್ನೆಲೆಯಲ್ಲಿ ದರ್ಶನ್ಗೆ ಸ್ಕ್ಯಾನಿಂಗ್ ಮಾಡಿಸಲಾಗಿದೆ. ಸರಿಯಾಗಿ ರಕ್ತಪರಿಚಲನೆ ಆಗುತ್ತಿಲ್ಲ, ಇದರಂದ ಕಿಡ್ನಿಗೆ ಸಮಸ್ಯೆಯಾಗಬಹುದು. ಡಿಸ್ಕ್ ಸಮಸ್ಯೆ ಇರುವ ಹಿನ್ನೆಲೆ ತಕ್ಷಣ ಸರ್ಜರಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಇಲ್ಲದಿದ್ದರೆ ಪಾರ್ಶ್ವವಾಯು ಸಂಭವಿಸುವ ಸಾಧ್ಯತೆ ಇದೆ ಎಂದು ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ನ್ಯಾಯಾಧೀಶರಿಗೆ ಮನವಿ ಮಾಡಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ದರ್ಶನ್ಗೆ ಜಾಮೀನು ನೀಡಬೇಕು, ಬೆಂಗಳೂರು ಅಥವಾ ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಇನ್ನು ದರ್ಶನ್ ಆರೋಗ್ಯದ ಬಗ್ಗೆ ವೈದ್ಯಕೀಯ ವರದಿಯನ್ನು ಜೈಲು ಅಧಿಕಾರಿಗಳು ಕೋರ್ಟ್ಗೆ ಸಲ್ಲಿಸಿದ್ದಾರೆ. ಮತ್ತೊಂದೆಡೆ ಜೈಲಿನಲ್ಲಿ ರಾಜಾತಿಥ್ಯ ಆರೋಪ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿಗೆ ಸಿಸಿಬಿ ಚಂದ್ರಗುಪ್ತ ಮತ್ತು ತಂಡ ಭೇಟಿ ನೀಡಿ ದರ್ಶನ್ರನ್ನು ವಿಚಾರಣೆ ನಡೆಸಿದ್ದಾರೆ.ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ಗೆ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ವೈದ್ಯರು ಸೂಚನೆ ಕೊಟ್ಟಿದ್ದರು. ವೈದ್ಯರ ಸಲಹೆಯಂತೆ ಬಳ್ಳಾರಿಯಲ್ಲಿ ನಟ ದರ್ಶನ್ ಎಂಆರ್ಐ ಸ್ಕ್ಯಾನಿಂಗ್ ಮಾಡಿಸಲು ಒಪ್ಪಿಕೊಂಡಿದ್ದರು.
ಬೆಂಗಳೂರು ಜೈಲಿನಲ್ಲಿದ್ದಾಗಲೇ ನಟ ದರ್ಶನ್ ಗೆ ಬೆನ್ನು ನೋವಿನ ಸಮಸ್ಯೆ ಕಂಡು ಬಂದಿತ್ತು. ಅದರಂತೆ ವಿಮ್ಸ್ ಆಸ್ಪತ್ರೆಯ ವೈದ್ಯರು ಇತ್ತೀಚೆಗೆ ಜೈಲಿಗೆ ಭೇಟಿ ನೀಡಿ ನಟ ದರ್ಶನ್ ಆರೋಗ್ಯವನ್ನು ತಪಾಸಣೆ ಮಾಡಿದ್ದರು. ಈ ವೇಳೆ ಆಸ್ಪತ್ರೆಗೆ ದಾಖಲಾಗಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಹೀಗಾಗಿ ದರ್ಶನ್ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಂಡಿದ್ದರು.