ಬಾಲ್ಟಿಮೋರ್‌ : ಸೇತುವೆಗೆ ಹಡಗು ಡಿಕ್ಕಿ : ಕುಸಿದ ಬೃಹತ್ ಸೇತುವೆ

ಬಾಲ್ಟಿಮೋರ್‌:

    ಅಮೆರಿಕದ ಬಾಲ್ಟಿಮೋರ್‌ನ ಅತಿ ಉದ್ದದ ಸೇತುವೆಗೆ ಕಂಟೈನರ್ ಹಡಗೊಂದು ಮಂಗಳವಾರ ಬೆಳಗ್ಗೆ ಡಿಕ್ಕಿ ಹೊಡೆದ ಪರಿಣಾಮ ಬೃಹತ್ ಬ್ರಿಡ್ಜ್ ಕುಸಿದು ಬಿದ್ದಿದೆ ಮತ್ತು ಸೇತುವೆ ಮೇಲೆ ಸಂಚರಿಸುತ್ತಿದ್ದ ಹಲವು ವಾಹನಗಳು ನದಿಗೆ ಬಿದ್ದಿವೆ. ಸುಮಾರು 20 ಮಂದಿ ನೀರಿನಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

    “ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸುಮಾರು 20 ಮಂದಿ ಪಟಾಪ್ಸ್ಕೋ ನದಿಯಲ್ಲಿ ಮುಳುಗಿರುವ ಸಾಧ್ಯತೆ ಇದೆ ಮತ್ತು ಅನೇಕ ವಾಹನಗಳು ನೀರಿಗೆ ಬಿದ್ದಿವೆ” ಎಂದು ಬಾಲ್ಟಿಮೋರ್ ಅಗ್ನಿಶಾಮಕ ಇಲಾಖೆಯ ಕೆವಿನ್ ಕಾರ್ಟ್‌ರೈಟ್ ಅವರು ಸಿಎನ್‌ಎನ್‌ಗೆ ತಿಳಿಸಿದ್ದಾರೆ.

    “ಇದು ಭೀಕರ ತುರ್ತುಸ್ಥಿತಿ”. “ಈಗ ಜನರನ್ನು ರಕ್ಷಿಸುವ ಬಗ್ಗೆ ನಾವು ಗಮನ ಕೊಡಬೇಕು” ಎಂದು ಬಾಲ್ಟಿಮೋರ್ ಅಗ್ನಿಶಾಮಕ ಇಲಾಖೆಯ ಸಂವಹನ ನಿರ್ದೇಶಕ ಕೆವಿನ್ ಕಾರ್ಟ್‌ರೈಟ್ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ.

   ‘ಡಾಲಿ’ ಹೆಸರಿನ ಈ ಹಡಗು ಬಾಲ್ಟಿಮೋರ್‌ನಿಂದ ಶ್ರೀಲಂಕಾದ ರಾಜಧಾನಿ ಕೊಲಂಬೊಗೆ ಹೋಗುತ್ತಿತ್ತು. ರಾತ್ರಿ 1:30ರ ಸುಮಾರಿಗೆ ಹಡಗು ಸೇತುವೆಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ನಂತರ ಹಡಗು ನೀರಿನಲ್ಲಿ ಮುಳುಗಿತು ಮತ್ತು ಸೇತುವೆಯೂ ಕುಸಿದು ಬಿದ್ದಿತು ಎಂದು ವರದಿಗಳು ತಿಳಿಸಿವೆ.

   ಸೇತುವೆ ಕುಸಿದಾಗ ಸುಮಾರು ಏಳು ಮಂದಿ ಕಟ್ಟಡ ಕಾರ್ಮಿಕರು ಮತ್ತು ಮೂರ್ನಾಲ್ಕು ನಾಗರಿಕ ವಾಹನಗಳು ಸೇತುವೆ ಮೇಲೆ ಇದ್ದವು ಎಂದು ಹೇಳಲಾಗಿದೆ. ಘಟನೆಯ ನಂತರ ಸೇತುವೆಯನ್ನು ವಾಹನ ಸಂಚಾರಕ್ಕೆ ಬಂದ್ ಮಾಡಲಾಗಿದೆ. ಸುರಕ್ಷತಾ ಕಾರಣಗಳಿಗಾಗಿ ಅಧಿಕಾರಿಗಳು ಎರಡೂ ದಿಕ್ಕುಗಳಲ್ಲಿ ಎಲ್ಲಾ ಲೇನ್‌ಗಳನ್ನು ಮುಚ್ಚಿದ್ದಾರೆ.

   ಈ ಸೇತುವೆಯನ್ನು ಬಾಲ್ಟಿಮೋರ್ ಬಂದರಿನಲ್ಲಿ ಪಟಾಪ್ಸ್ಕೋ ನದಿಯ ಮೇಲೆ ನಿರ್ಮಿಸಲಾಗಿದೆ. ಸುಮಾರು 3 ಕಿಲೋಮೀಟರ್ ಉದ್ದದ ಈ ಸೇತುವೆಯ ನಿರ್ಮಾಣವು 1972 ರಲ್ಲಿ ಪ್ರಾರಂಭವಾಯಿತು ಮತ್ತು ಸೇತುವೆಯನ್ನು 1977 ರಲ್ಲಿ ಸಂಚಾರಕ್ಕೆ ತೆರೆಯಲಾಯಿತು. ಪ್ರತಿ ವರ್ಷ ಸರಾಸರಿ 1.1 ಕೋಟಿ ವಾಹನಗಳು ಈ ಸೇತುವೆಯ ಮೂಲಕ ಹಾದು ಹೋಗುತ್ತವೆ. ಈ ಸೇತುವೆಯನ್ನು ಕೀ ಸೇತುವೆ ಎಂದೂ ಕರೆಯಲಾಗುತ್ತಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap