ನವದೆಹಲಿ:
ದೇಶ ವಿರೋಧಿ ಚಟುವಟಿಕೆಗಳಿಗಾಗಿ ಕೇಂದ್ರ ಗೃಹ ಸಚಿವಾಲಯ ಖಲಿಸ್ತಾನ್ ಪರವಾದ ಸಿಖ್ಸ್ ಫಾರ್ ಜಸ್ಟಿಸ್(SFJ)ಸಂಘಟನೆಯ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಐದು ವರ್ಷಗಳವರೆಗೆ ವಿಸ್ತರಿಸಿದೆ.
ಕೇಂದ್ರ ಗೃಹ ಸಚಿವಾಲಯ ಈ ಕುರಿತು ಮಂಗಳವಾರ ಹೊರಡಿಸಿದ ಅಧಿಸೂಚನೆಯಲ್ಲಿ, ಖಲಿಸ್ತಾನಿ ಪರ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ನೇತೃತ್ವದ ಎಸ್‌ಎಫ್‌ಜೆಯನ್ನು ಐದು ವರ್ಷಗಳ ಹಿಂದೆ ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯ್ದೆಯಡಿ ದೇಶದ ಆಂತರಿಕ ಭದ್ರತೆ ಮತ್ತು ಸಮಗ್ರತೆಗೆ ಹಾನಿಯುಂಟುಮಾಡುವ ದೇಶ ವಿರೋಧಿ ಚಟುವಟಿಕೆಗಳಿಗಾಗಿ ನಿಷೇಧಿತ ಸಂಘಟನೆ ಎಂದು ಘೋಷಿಸಲಾಗಿದ್ದು, ಈ ನಿಷೇಧವನ್ನು 5 ವರ್ಷಗಳವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದೆ.
ಎಸ್‌ಎಫ್‌ಜೆ ಪಂಜಾಬ್ ಮತ್ತು ಇತರೆಡೆಗಳಲ್ಲಿ ದೇಶ ವಿರೋಧಿ ಮತ್ತು ವಿಧ್ವಂಸಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಇದು ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಅಡ್ಡಿಪಡಿಸುವ ಉದ್ದೇಶವನ್ನು ಹೊಂದಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಖಲಿಸ್ತಾನಿ ಪರ ಸಂಘಟನೆಯು ಭಾರತೀಯ ಭೂಪ್ರದೇಶದ ಒಂದು ಭಾಗವನ್ನು ಭಾರತ ಒಕ್ಕೂಟದಿಂದ ಬೇರ್ಪಡಿಸುವ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದೆ, ಸಹಾಯ ಮಾಡುತ್ತಿದೆ ಮತ್ತು ಭಾರತ ಮತ್ತು ಇತರೆಡೆ ಈ ಉದ್ದೇಶಕ್ಕಾಗಿ ಹೋರಾಡುತ್ತಿರುವ ಪ್ರತ್ಯೇಕತಾವಾದಿ ಗುಂಪುಗಳನ್ನು ಬೆಂಬಲಿಸುತ್ತಿದೆ ಎಂದು ಸಚಿವಾಲಯ ಆರೋಪಿಸಿದೆ.
ಭಾರತದ ಸಮಗ್ರತೆ, ವಿವಿಧ ವಿಧ್ವಂಸಕ ಚಟುವಟಿಕೆಗಳಲ್ಲಿ ಎಸ್‌ಎಫ್‌ಜೆ ಪಾತ್ರವನ್ನು ಪರಿಗಣಿಸಿ ಗೃಹ ಸಚಿವಾಲಯವು ಯುಎಪಿಎ ಅಡಿಯಲ್ಲಿ ವಿಧಿಸಲಾದ ನಿಷೇಧವನ್ನು ಜುಲೈ 10 ರಿಂದ ಜಾರಿಗೆ ಬರುವಂತೆ ಐದು ವರ್ಷಗಳವರೆಗೆ ವಿಸ್ತರಿಸಿದೆ ಎಂದು ಅಧಿಸೂಚನೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ