ಬೆಂಗಳೂರು : ನಗರದ ನೈಟ್ರೋಜನ್ ಡೈಆಕ್ಸೈಡ್ ಮಟ್ಟ ಡಬ್ಲ್ಯುಎಚ್​ಒ ಮಿತಿಗಿಂತ ದುಪ್ಪಟ್ಟು

ಬೆಂಗಳೂರು

    ಬೆಂಗಳೂರಿನ ವಾರ್ಷಿಕ ಸರಾಸರಿ ನೈಟ್ರೋಜನ್ ಡೈಆಕ್ಸೈಡ್ (NO2) ಸಾಂದ್ರತೆಯು 2023 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ನಿಗದಿಪಡಿಸಿದ ಮಾನದಂಡಗಳಿಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿತ್ತು ಎಂಬುದು ವರದಿಯೊಂದರಿಂದ ತಿಳಿದುಬಂದಿದೆ. ಸಿಟಿ ರೈಲು ನಿಲ್ದಾಣ (ಮೆಜೆಸ್ಟಿಕ್) ಅತಿಹೆಚ್ಚು ಮಾಲಿನ್ಯ ಹೊಂದಿರುವ ಪ್ರದೇಶವಾಗಿ ಹೊರಹೊಮ್ಮಿತ್ತು ಎಂಬುದನ್ನು ‘ಗ್ರೀನ್‌ಪೀಸ್ ಇಂಡಿಯಾ’ದ ಹೊಸ ವರದಿ ಬಹಿರಂಗಪಡಿಸಿದೆ.

   ‘ಬಿಯಾಂಡ್ ನಾರ್ತ್’ ಎಂಬ ಹೆಸರಿನಲ್ಲಿ ಪ್ರಕಟವಾಗಿರುವ ವರದಿಯಲ್ಲಿ ಜೈಪುರ, ಪುಣೆ, ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈ ನಗರಗಳಲ್ಲಿನ ನೈಟ್ರೋಜನ್ ಡೈಆಕ್ಸೈಡ್ ಸಾಂದ್ರತೆಯನ್ನು ಉಲ್ಲೇಖಿಸಲಾಗಿದೆ. 

   ಕಂಟಿನ್ಯೂಸ್ ಆಂಬಿಯೆಂಟ್ ಏರ್ ಕ್ವಾಲಿಟಿ ಮಾನಿಟರಿಂಗ್ (CAAQM) ನೆಟ್‌ವರ್ಕ್‌ನ ಡೇಟಾವನ್ನು ಆಧರಿಸಿದ ಸಂಶೋಧನೆಗಳಿಂದ ಈ ವರದಿ ಸಿದ್ಧಪಡಿಸಲಾಗಿದೆ. ಚೆನ್ನೈನ ನೈಟ್ರೋಜನ್ ಡೈಆಕ್ಸೈಡ್ ಮಟ್ಟ 2023 ರಲ್ಲಿ 314 ದಿನಗಳವರೆಗೆ ಪ್ರತಿ ಘನ ಮೀಟರ್‌ಗೆ 10 ಮೈಕ್ರೊಗ್ರಾಂನಷ್ಟಿತ್ತು. ಇದು ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಸುರಕ್ಷಿತ ಮಿತಿಗಿಂತ ಶೇ 86ರಷ್ಟು ಹೆಚ್ಚಿತ್ತು ಎಂದು ವರದಿ ತಿಳಿಸಿದೆ. ಪುಣೆ ಮತ್ತು ಹೈದರಾಬಾದ್​ನಲ್ಲಿ ಕ್ರಮವಾಗಿ 312 ಮತ್ತು 307 ದಿನಗಳ ವರೆಗೆ ಪ್ರತಿ ಘನ ಮೀಟರ್‌ಗೆ 10 ಮೈಕ್ರೊಗ್ರಾಂನಷ್ಟು ಪತ್ತೆಯಾಗಿತ್ತು.

   ಬೆಂಗಳೂರಿನಲ್ಲಿ 295 ದಿನಗಳಲ್ಲಿ ನೈಟ್ರೋಜನ್ ಡೈಆಕ್ಸೈಡ್ ಮಟ್ಟ ಮಿತಿಗಿಂತ ಹೆಚ್ಚಿತ್ತು. ಜೈಪುರ (277 ದಿನಗಳು), ಮುಂಬೈ (256 ದಿನಗಳು), ಮತ್ತು ಕೋಲ್ಕತ್ತಾ (133 ದಿನಗಳು) ನಂತರದ ಸ್ಥಾನಗಳಲ್ಲಿವೆ. 

   ಬೆಂಗಳೂರಿನಲ್ಲಿ, ಸಿಟಿ ರೈಲ್ವೇ ನಿಲ್ದಾಣದಲ್ಲಿ 2023 ರಲ್ಲಿ 295 ದಿನಗಳ ಕಾಲ ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡವನ್ನೂ ಮೀರಿದ ಪ್ರಮಾಣದಲ್ಲಿ ನೈಟ್ರೋಜನ್ ಡೈಆಕ್ಸೈಡ್ ಪತ್ತೆಯಾಗಿತ್ತು. ಹೊಂಬೇಗೌಡ ನಗರ (125 ದಿನಗಳು), ಬಾಪೂಜಿ ನಗರ (120 ದಿನಗಳು), ಮತ್ತು ಪೀಣ್ಯ (119 ದಿನಗಳು) ಇತರ ಹೆಚ್ಚು ನೈಟ್ರೋಜನ್ ಡೈಆಕ್ಸೈಡ್ ಪತ್ತೆಯಾದ ಪ್ರದೇಶಗಳಾಗಿವೆ. 

   ನಗರದಲ್ಲಿನ 13 ಮಾನಿಟರಿಂಗ್ ಸ್ಟೇಷನ್‌ಗಳ ಪೈಕಿ ಎಂಟರಲ್ಲಿ ವಾರ್ಷಿಕ ಸರಾಸರಿ ನೈಟ್ರೋಜನ್ ಡೈಆಕ್ಸೈಡ್ ಮಟ್ಟ ಪ್ರತಿ ಘನ ಮೀಟರ್‌ಗೆ 20 ಮೈಕ್ರೋಗ್ರಾಂಗಳಿಗಿಂತಲೂ ಹೆಚ್ಚು ಪತ್ತೆಯಾಗಿದೆ. ಶಿವಪುರ ನಿಲ್ದಾಣದಲ್ಲಿ ಪ್ರತಿ ಘನ ಮೀಟರ್‌ಗೆ 15 ಮೈಕ್ರೋಗ್ರಾಂಗಳಷ್ಟು ನೈಟ್ರೋಜನ್ ಡೈಆಕ್ಸೈಡ್ ಮಟ್ಟ ಕಂಡುಬಂದರೆ, ಉಳಿದ ನಾಲ್ಕು ನಿಲ್ದಾಣಗಳಲ್ಲಿ ಪ್ರತಿ ಘನ ಮೀಟರ್‌ಗೆ 10 ರಿಂದ 13 ಮೈಕ್ರೋಗ್ರಾಂಗಳಷ್ಟು ನೈಟ್ರೋಜನ್ ಡೈಆಕ್ಸೈಡ್ ಮಟ್ಟ ಪತ್ತೆಯಾಗಿದೆ ಎಂದು ವರದಿ ಉಲ್ಲೇಖಿಸಿದೆ.

Recent Articles

spot_img

Related Stories

Share via
Copy link