ಬೆಳಗಾವಿ
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲ ಚಳಿಗಾಲದ ಅಧಿವೇಶನ ಇಂದಿನಿಂದ ಆರಂಭವಾಗುತ್ತಿದೆ. ಬಾಣಂತಿಯರ ಸಾವು, ಶಿಶುಗಳ ಸಾವು, ವಕ್ಫ್ ವಿವಾದ, ಮುಡಾ ಅಕ್ರಮ, ವಾಲ್ಮೀಕಿ ನಿಗಮ ಹಗರಣ, ಅಬಕಾರಿ ಇಲಾಖೆ ಭ್ರಷ್ಟಾಚಾರ, ಹೀಗೆ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾಲು ಸಾಲು ಬಾಣಗಳು ಬಿಜೆಪಿಯ ಬತ್ತಳಿಕೆಯಲ್ಲಿವೆ. ಆದರೆ, ಬಿಜೆಪಿಗೆ ಬಿಸಿ ತುಪ್ಪವಾಗಿರುವ ಯತ್ನಾಳ್, ಸದನದಲ್ಲಿ ಯಾವ ರೀತಿ ಸ್ಪಂದಿಸುತ್ತಾರೆ ಎಂಬುದು ಕಮಲ ಪಡೆಗೆ ಆತಂಕ ತಂದೊಡ್ಡಿದೆ. ಹೀಗಾಗಿ ಕಣಕ್ಕಿಳಿದಿರುವ ವಿಪಕ್ಷ ನಾಯಕ ಆರ್.ಅಶೋಕ್, ಯತ್ನಾಳ್‌ರನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಸದನದಲ್ಲಿ ಯುದ್ಧಕ್ಕಿಳಿದು ಸರ್ಕಾರಕ್ಕೆ ಖೆಡ್ಡಾ ತೋಡಲು ಸಜ್ಜಾಗಿದ್ದಾರೆ.
ಬಿಜೆಪಿ ಸಿದ್ಧವಾಗಿಟ್ಟುಕೊಂಡಿರುವ ಬಾಣಗಳಿಗೆ ಕಾಂಗ್ರೆಸ್ ನಾಯಕರು ಕೊರೊನಾ ಹಗರಣದ ಪ್ರತ್ಯಸ್ತ್ರ ಸಿದ್ಧ ಮಾಡಿಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ವಕ್ಫ್ ವಿಚಾರ ಮುಂದಿಟ್ಟರೆ, ಯತ್ನಾಳ್ ಪ್ರತ್ಯೇಕ ಹೋರಾಟ ಪ್ರಸ್ತಾಪಿಸಿ ತಿವಿಯುವ ಸಾಧ್ಯತೆ ಇದೆ. ಇದನ್ನರಿತ ಬಿಜೆಪಿ ನಾಯಕರು ಯತ್ನಾಳ್‌ರನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಸದನದಲ್ಲಿ ಹೋರಾಡಲು ಕೌಂಟರ್ ಪ್ಲ್ಯಾನ್ ಮಾಡಿದ್ದಾರೆ. ಇದಕ್ಕೆ ಯತ್ನಾಳ್ ಕೂಡಾ ಜೈ ಎಂದಿದ್ದಾರೆ. ನಮ್ಮ ಆಂತರಿಕ ಜಗಳ ಏನೇ ಇರಲಿ, ರಾಜ್ಯದ ಹಿತಾಸಕ್ತಿಗಾಗಿ ಆರ್ ಅಶೋಕ್ ನೇತೃತ್ವದಲ್ಲೇ ಹೋರಾಟ ಮಾಡುತ್ತೇವೆ ಎಂದಿದ್ದಾರೆ. ಯತ್ನಾಳ್ ಸದ್ಯ ತಮ್ಮ ಮಾತಿನ ಬಾಣವನ್ನು ಸರ್ಕಾರದತ್ತ ತಿರುಗಿಸಿದ್ದಾರೆ. ಸರ್ಕಾರದಲ್ಲಿ ಅಭಿವೃದ್ಧಿ ಕುಸಿದಿದೆ. ಇ.ಡಿ.ದು ಏನಾದರೂ ಆದರೆ, ಸಿಎಂ ಸಿದ್ದರಾಮಯ್ಯರದ್ದು ಕೊನೆ ಅಧಿವೇಶನ ಆಗಬಹುದು ಎಂದಿದ್ದಾರೆ. ಇದಕ್ಕೆ ಸಚಿವ ಚಲುವರಾಯಸ್ವಾಮಿ ಕೌಂಟರ್ ಕೊಟ್ಟಿದ್ದು, ಯತ್ನಾಳ್ಗೆ ಪುರುಸೊತ್ತಿಲ್ಲ ಎಂದು ಕಾಲೆಳೆದಿದ್ದಾರೆ.
ಬಳ್ಳಾರಿಯಲ್ಲಿ ಐವರು ಬಾಣಂತಿಯರ ಸಾವನ್ನು ಪ್ರಸ್ತಾಪಿಸಲು ಬಿಜೆಪಿ ಸಜ್ಜಾಗಿದೆ. ಮೃತರ ಕುಟುಂಬದವರಿಗೆ 1 ಕೋಟಿ ರೂ. ಪರಿಹಾರದ ಜೊತೆಗೆ ಲೋಕಾಯುಕ್ತ ತನಿಖೆಗೆ ಆಗ್ರಹಿಸಿದೆ. ಇದಕ್ಕೆ ಆಡಳಿತಾರೂಢ ಕಾಂಗ್ರೆಸ್ ಕೂಡ ಪ್ರತ್ಯಸ್ತ್ರ ರೆಡಿ ಮಾಡಿಕೊಂಡಿದ್ದು, ಕೇಂದ್ರದ ಲ್ಯಾಬೋರೇಟರಿ ನೀಡಿದ ಸ್ಯಾಂಪಲ್‌ನಿಂದ ಹೀಗಾಯಿತು ಎಂದು ಆರೋಪಿಸಲು ಸಜ್ಜಾಗಿದೆ. 22 ಬ್ಯಾಚ್ಗಳ IV ಸ್ಯಾಂಪಲ್ಸ್ ರಿಜೆಕ್ಟ್ ಆಗಿತ್ತು. ಆದರೆ, ಇದೇ ಐವಿಗಳು ಕೇಂದ್ರದ ಲ್ಯಾಬೋರೇಟರಿಗಳಲ್ಲಿ ಪಾಸ್ ಆಗಿದ್ದವು ಎಂದು ಕೌಂಟರ್ ಕೊಡಲು ರೆಡಿಯಾಗಿದೆ.