ನವದೆಹಲಿ:
ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಪರಿಕಲ್ಪನೆಯು ದೇಶದ ಸ್ಥಾಪಕ ಪಿತಾಮಹರ ಕನಸಿನ ಕೂಸೇ ಹೊರತು ಭಾರತೀಯ ಜನತಾ ಪಕ್ಷ (BJP)ದ್ದು ಅಲ್ಲ ಎಂದು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಪಾದಿಸಿದ್ದಾರೆ.
‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಉನ್ನತ ಮಟ್ಟದ ಸಮಿತಿಯ ನೇತೃತ್ವ ವಹಿಸಿದ್ದ ಮಾಜಿ ರಾಷ್ಟ್ರಪತಿಗಳು, ಪ್ರಜಾಪ್ರಭುತ್ವದಲ್ಲಿ ಬಹುಮತದ ಒಮ್ಮತದ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು, ಭಿನ್ನಾಭಿಪ್ರಾಯ ಹೊಂದಿರುವ ಪಕ್ಷಗಳು ತಮ್ಮ ನಿಲುವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದರು. ಇದಕ್ಕೂ ಮುನ್ನ ಮೊನ್ನೆ ಗುರುವಾರ ಕೇಂದ್ರ ಸಚಿವ ಸಂಪುಟ, ಸಂಸತ್ತು ಮತ್ತು ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೆ ನಡೆಸುವ ಎರಡು ಮಸೂದೆಗಳಿಗೆ ಅನುಮೋದನೆ ನೀಡಿತು.
ರಾಮನಾಥ್ ಕೋವಿಂದ್ ಅವರ ನೇತೃತ್ವದ ಸಮಿತಿಯು ಲೋಕಸಭೆ, ರಾಜ್ಯ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹಂತಹಂತವಾಗಿ ಏಕಕಾಲದಲ್ಲಿ ನಡೆಸಲು ಶಿಫಾರಸು ಮಾಡಿತ್ತು.
ಸಮಿತಿಯಲ್ಲಿ ವಿರೋಧ ಪಕ್ಷದ ಸದಸ್ಯರು ಇರುವ ಬಗ್ಗೆ ಕೇಳಿದಾಗ, ಆರಂಭದಲ್ಲಿ ಆಗಿನ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸದಸ್ಯರಾಗಲು ಸಿದ್ಧರಿದ್ದರು. ಅವರಿಗೆ ನೇಮಕಾತಿ ಪತ್ರವನ್ನು ಕಳುಹಿಸಲು ಸರ್ಕಾರ ಬಯಸಿತ್ತು ಎಂದರು. ನಂತರ ಅವರು ವಿಷಯವನ್ನು ಅವರ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿದ ನಂತರ ಹಿಂದೆ ಸರಿದರು ಎಂದರು.
‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತ ಸಮಾಲೋಚನೆ ಪ್ರಕ್ರಿಯೆಯಲ್ಲಿ 32 ರಾಜಕೀಯ ಪಕ್ಷಗಳು ಬೆಂಬಲಿಸಿದರೆ, 15 ಪಕ್ಷಗಳು ಬೆಂಬಲಿಸಲಿಲ್ಲ ಎಂದರು.ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಾಸಿಸುತ್ತಿರುವುದರಿಂದ ನನಗೆ ಈ ಚುನಾವಣಾ ಪರಿಕಲ್ಪನೆ ಮೇಲೆ ನಂಬಿಕೆಯಿದೆ. ಬಹುಮತ ಇರುವ ಪಕ್ಷವು ಮೇಲುಗೈ ಸಾಧಿಸಬೇಕು ಎಂದು ನಾನು ಭಾವಿಸುತ್ತೇನೆ. ನಾನು ಇದನ್ನು ಕಾಲ್ಪನಿಕವಾಗಿ ಹೇಳುತ್ತಿದ್ದೇನೆ. ಈ 32 ಪಕ್ಷಗಳು ಪರವಾಗಿರುತ್ತವೆ, ಅವರ ಅಭಿಪ್ರಾಯಗಳನ್ನು ದೇಶವು ಒಪ್ಪಿಕೊಳ್ಳಬೇಕು, ಇತರರು ತಮ್ಮ ಅಭಿಪ್ರಾಯಗಳನ್ನು ಬದಲಾಯಿಸಬೇಕು. ಒಪ್ಪದ 15 ಮಂದಿ ಈ ಸತ್ಯವನ್ನು ಒಪ್ಪಿಕೊಳ್ಳಬೇಕು ಎಂದರು.
ಹಿಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಏಕಕಾಲಿಕ ಚುನಾವಣೆಯ ಕಲ್ಪನೆಯನ್ನು ಬೆಂಬಲಿಸಿದರು ಮತ್ತು ಒಮ್ಮತದಿಂದ ಅಥವಾ ಪೂರ್ಣ ಬಹುಮತವನ್ನು ಹೊಂದಿರುವ ಸರ್ಕಾರದಿಂದ ಯೋಜನೆಯನ್ನು ಕಾರ್ಯಗತಗೊಳಿಸಬಹುದು ಎಂದು ನಂಬಿದ್ದರು ಎಂದು ಸ್ಮರಿಸಿಕೊಂಡರು.
ಪ್ರಸ್ತಾವನೆಗೆ ಒಮ್ಮತ ಮೂಡಿಸುವ ಉದ್ದೇಶದಿಂದ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ವಿವರವಾದ ಚರ್ಚೆಗಾಗಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ (JPC) ಉಲ್ಲೇಖಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1951 ಮತ್ತು 1967 ರ ನಡುವೆ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆಗಳು ನಡೆದಿದ್ದವು. ಏಕಕಾಲಿಕ ಚುನಾವಣೆಗಳ ಪರಿಕಲ್ಪನೆಯು 1983 ರಿಂದ ಅನೇಕ ವರದಿಗಳು ಮತ್ತು ಅಧ್ಯಯನಗಳಲ್ಲಿ ಕಾಣಿಸಿಕೊಂಡಿದೆ, ಮೂಲಭೂತವಾಗಿ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸುವ ಹಿಂದಿನ ಅಭ್ಯಾಸಕ್ಕೆ ಮರಳುವುದನ್ನು ಅದು ಸೂಚಿಸಿತ್ತು.
2014 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ‘ಒಂದು ರಾಷ್ಟ್ರ ಒಂದು ಚುನಾವಣೆ’ ಎಂಬುದು ಬಿಜೆಪಿಯ ಪ್ರಮುಖ ಗುರಿಯಾಗಿದೆ. ಆದಾಗ್ಯೂ, ಈ ಪ್ರಸ್ತಾಪವು ವಿರೋಧ ಪಕ್ಷಗಳಿಂದ ನಿರಂತರ ಹಿನ್ನಡೆಯನ್ನು ಎದುರಿಸುತ್ತಿದೆ, ಇದು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ ಮತ್ತು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತದೆ ಎಂದು ವಿರೋಧ ಪಕ್ಷಗಳ ವಾದವಾಗಿದೆ.