
ಭಾರತದಲ್ಲಿ ಅಡುಗೆ ಮನೆಯಲ್ಲಿ ಬಳಸುವ ಖಾದ್ಯ ತೈಲಗಳ ಮೇಲೂ ರಷ್ಯಾ -ಉಕ್ರೇನ್ ನಡುವಿನ ಯುದ್ಧ ತನ್ನ ಪರಿಣಾಮ ಬೀರಿದೆ. ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆ ಆಮದು ಸ್ಥಗಿತವಾಗಿದೆ. ಉಕ್ರೇನ್ ದೇಶದಿಂದಲೇ ಶೇ 70ರಷ್ಟು ಸೂರ್ಯಕಾಂತಿ ಎಣ್ಣೆಯನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ.
ಆದರೆ, ಸದ್ಯಕ್ಕೆ ಆತಂಕದ ಪರಿಸ್ಥಿತಿ ಇಲ್ಲ ಎಂದು ಅತಿದೊಡ್ಡ ಉತ್ಪಾದಕ ಸಂಸ್ಥೆ ಅದಾನಿ ವಿಲ್ಮರ್ ನ ಅಂಗ್ಶು ಮಲಿಕ್ ಹೇಳಿದ್ದಾರೆ.
ಆದರೆ, ಇನ್ನು ಎಷ್ಟು ದಿನ ಕಾಲ ಲಭ್ಯವಿರುವ ದಾಸ್ತಾನು ಬಳಸಲು ಸಾಧ್ಯ ಎಂಬ ಪ್ರಶ್ನೆಗೆ ಕನಿಷ್ಠ 45 ರಿಂದ 60 ದಿನಗಳ ಕಾಲ ಪರಿಸ್ಥಿತಿ ನಿಭಾಯಿಸಬಹುದು. ಅಲ್ಲದೇ ಸದ್ಯದ ಪರಿಸ್ಥಿತಿಯಲ್ಲಿ ಸೂರ್ಯಕಾಂತಿ ಎಣ್ಣೆ ಬದಲಿಯಾಗಿ ಪಾಮ್ ಆಯಿಲ್, ಸೋಯಾಬಿನ್ ಎಣ್ಣೆ ಬಳಕೆಯತ್ತ ಜನ ವಾಲುತ್ತಿದ್ದಾರೆ.
ರಿಫೈಂಡ್ ಕಡ್ಲೇಕಾಯಿ ಎಣ್ಣೆ, ರೈಸ್ ಬ್ರಾನ್ ಎಣ್ಣೆ(ಭತ್ತದ ತೌಡಿನಿಂದ ಮಾಡಿದ ಖಾದ್ಯ ತೈಲ) ಬಳಕೆಗೆ ಸಂಸ್ಥೆಗಳು ಉತ್ತೇಜನ ನೀಡುತ್ತಿದ್ದು, ಈ ಖಾದ್ಯತೈಲಗಳ ಬೆಲೆ ಕೂಡಾ ಸೂರ್ಯಕಾಂತಿ ತೈಲಕ್ಕಿಂತ ಕಡಿಮೆ ಇದೆ ಎಂದು ಅಂಗ್ಶು ಮಲಿಕ್ ಎಕಾನಾಮಿಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಖಾದ್ಯ ತೈಲ ಕಂಪನಿಗಳ ಪರಿಸ್ಥಿತಿ ಏನು?
ಭಾರತದ ಖಾದ್ಯ ತೈಲ ಕ್ಷೇತ್ರದ ಮೇಲೆ ಯುದ್ಧದ ಪರಿಣಾಮವೇನು? ಎಫ್‌ಎಂಸಿಜಿ ಹಾಗೂ ಖಾದ್ಯ ತೈಲ ಕಂಪನಿಗಳ ಪರಿಸ್ಥಿತಿ ಏನು?
ಉಕ್ರೇನ್ ದೇಶದಿಂದಲೇ ಶೇ 70ರಷ್ಟು ಸೂರ್ಯಕಾಂತಿ ಎಣ್ಣೆಯನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಸದ್ಯದ ದಾಸ್ತಾನು 45 ರಿಂದ 60 ದಿನಗಳ ಮಟ್ಟಿಗೆ ಸಾಕಾಗುತ್ತದೆ. ಭಾರತ ಸುಮಾರು 23 ಮಿಲಿಯನ್ ಮೆಟ್ರಿಕ್ ಟನ್ ಗಳಷ್ಟು ತೈಲ ಬಳಕೆ ಮಾಡುತ್ತದೆ.
ಈ ಪೈಕಿ ಸೂರ್ಯಕಾಂತಿ ಎಣ್ಣೆ 3 ಮಿಲಿಯನ್ ಟನ್ ನಷ್ಟಿದ್ದು, ಶೇ 12 ರಿಂದ 13ರಷ್ಟು ಪ್ರಮಾಣದಲ್ಲಿದೆ. ಸೊಯಾಬಿನ್ ಎಣ್ಣೆ, ಕಡ್ಲೆಕಾಯಿ ಎಣ್ಣೆ ಸೇರಿದಂತೆ ಬದಲಿ ಖಾದ್ಯತೈಲ ಬಳಕೆಗೆ ಉತ್ತೇಜನ ನೀಡಲಾಗುತ್ತಿದ್ದು, ಪರಿಸ್ಥಿತಿ ಇನ್ನು ಒಂದು ತಿಂಗಳು ನಿಭಾಯಿಸಬಹುದು. ತೈಲ ಬೆಲೆ ಹೆಚ್ಚಳ ಸಾಧಾರಣವಾಗಿ ಏರಿಳಿತ ಕಾಣುವಂತೆ ಮಾಡಿದರೂ ಭಾರತದಲ್ಲಿ ಸದ್ಯ ಬೆಲೆ ಸ್ಥಿರತೆ ಪಡೆದುಕೊಂಡಿದೆ.
ಭಾರತಕ್ಕೆ ಇರುವ ಬದಲಿ ರಫ್ತು ದೇಶ ಯಾವುದು?
ಸೂರ್ಯಕಾಂತಿ ಎಣ್ಣೆ ಬಳಕೆ ಪ್ರಮಾಣ ತಗ್ಗಿರುವುದರಿಂದ ಹೆಚ್ಚಿನ ಆತಂಕ ಪಡಬೇಕಾಗಿಲ್ಲ. ಆದರೆ, ಬೇಡಿಕೆ ಹೆಚ್ಚಳ ಕಂಡು ಬಂದರೆ ಉಕ್ರೇನ್ ಬದಲಿಗೆ ಅರ್ಜೆಂಟೀನಾದಿಂದ ಎಣ್ಣೆ ತರೆಸಿಕೊಳ್ಳಬಹುದು. ಈ ಬಗ್ಗೆ ಮಾತುಕತೆ ನಡೆದಿದೆ.
ಆದರೆ, ಏಪ್ರಿಲ್ ತಿಂಗಳ ನಂತರವಷ್ಟೇ ಈ ಬಗ್ಗೆ ಖಾತ್ರಿ ಸಿಗಲಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಸೋಯಾಬಿನ್ ಎಣ್ಣೆ ಬಳಕೆ ಹೆಚ್ಚಳ ಕಂಡು ಬಂದಿದ್ದು, ಸೂರ್ಯಕಾಂತಿ ಎಣ್ಣೆ ಬಳಕ್ಕೆ ಶೇ 50ರಷ್ಟು ತಗ್ಗಿದೆ.
ಹಳೆ ಸ್ಟಾಕ್ ಕ್ಲಿಯರ್ ಆಗಬೇಕಿದೆ
ಉಕ್ರೇನ್‌ನಿಂದ ಫೆಬ್ರವರಿ ಮಧ್ಯ ಭಾಗದಲ್ಲಿ ಹೊರಟಿರುವ ಹಡಗು ಸುಮಾರು 1.5 ಲಕ್ಷ ಟನ್ ತೈಲ ಹೊಂದಿದ್ದು, ಇನ್ನೂ ಭಾರತವನ್ನು ತಲುಪಿಲ್ಲ, ಈ ಹಡಗು ಭಾರತ ತಲುಪಿದರೆ ದಾಸ್ತಾನು ಹೆಚ್ಚಳವಾಗಲಿದ್ದು,
ಬೇಡಿಕೆ ಪೂರೈಸಲು ಯಾವುದೇ ತೊಂದರೆ ಇರುವುದಿಲ್ಲ.ಮಿಕ್ಕಂತೆ ಮಾರ್ಚ್ ಅಂತ್ಯಕ್ಕೆ ಅರ್ಜೆಂಟೀನಾದಿಂದ ಆಮದು ಹಾಗೂ ಖಾದ್ಯ ತೈಲ ಉತ್ಪಾದನೆ ಹೆಚ್ಚಳ ಎಲ್ಲವೂ ಸಮಸ್ಯೆಗೆ ಪರಿಹಾರ ಒದಗಿಸಲಿವೆ.
ಸೂರ್ಯಕಾಂತಿ ಎಣ್ಣೆಗೆ ಬದಲಿ ಖಾದ್ಯ ತೈಲ
ದಕ್ಷಿಣ ಭಾರತದಲ್ಲಿ ಸಾಸಿವೆ ಎಣ್ಣೆ, ಸೋಯಾಬಿನ್ ಎಣ್ಣೆ ಬಳಕೆಗಿಂತ ಕಡ್ಲೇಕಾಯಿ ಎಣ್ಣೆ, ರಿಫೈಂಡ್ ನೆಲಗಡಲೆ ಖಾದ್ಯ ತೈಲಗಳನ್ನು ಹೆಚ್ಚು ಬಳಸಲಾಗುತ್ತದೆ. ಅಲ್ಲದೆ ಭತ್ತದ ತೌಡಿನಿಂದ ಉತ್ಪಾದಿಸಿದ ಖಾದ್ಯ ತೈಲ ಕೂಡಾ ಜನಪ್ರಿಯತೆ ಗಳಿಸುತ್ತಿದೆ.
ಈ ಖಾದ್ಯ ತೈಲಗಳ ಬೆಲೆ ಕೂಡಾ ಸೂರ್ಯಕಾಂತಿ ಎಣ್ಣೆಗಿಂತ ಕಡಿಮೆ ಇದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆಯೂ ಆಗುತ್ತಿದೆ ಎಂದು ಅಂಗ್ಶು ಮಲಿಕ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
