ರಾಜ್ಯದ ಮೊದಲ ಸಿಎನ್‌ಜಿ ಖಾಸಗಿ ಬಸ್ ಖರೀದಿಸಿದ ಉದ್ಯಮಿ

ನಾಯಕನಹಟ್ಟಿ: 

ಪೆಟ್ರೋಲ್-ಡೀಸೆಲ್ ದರ ಏರುತ್ತಿರುವ ಕಾರಣ ಖಾಸಗಿ ಬಸ್ ಮಾಲೀಕರು ಬಸ್‌ಗಳನ್ನು ಓಡಿಸಲು ಹರಸಾಹಸ ಪಡುತ್ತಿರುವ ಸನ್ನಿವೇಶದಲ್ಲಿ ಪಟ್ಟಣದ ಯುವ ಉದ್ಯಮಿ ಜೆ.ಆರ್. ರವಿಕುಮಾರ್ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಬಸ್ ಖರೀದಿಸುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ

      ಕಳೆದ ಲಾಕ್‌ಡೌನ್ ಅವಧಿಯಿಂದ ಖಾಸಗಿ ಬಸ್ ಕ್ಷೇತ್ರವು ವ್ಯಾಪಾರ ವಹಿವಾಟಿನಲ್ಲಿ ನೆಲಕಚ್ಚಿದೆ. ಕಾರಣ ಒಂದೇ ಸಮನೇ ಏರುತ್ತಿರುವ ಇಂಧನದ ಬೆಲೆ, ದುಬಾರಿಯಾದ ವಾಹನಗಳ ಬಿಡಿ ಭಾಗಗಳು, ಕೋವಿಡ್‌ಗೆ ಹೆದರಿ ಜನರು ಬಸ್‌ಗಳನ್ನು ಹತ್ತದಿರುವುದರಿಂದ ಖಾಸಗಿ ಬಸ್ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿ ಬಸ್‌ಗಳನ್ನು ಮಾರಿಕೊಳ್ಳುವ ಸ್ಥಿತಿಗೆ ತಲುಪಿದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯುವ ಉದ್ಯಮಿ ಜೆ.ಆರ್.

ರವಿಕುಮಾರ್ 2 ಸಿಎನ್‌ಜಿ ಬಸ್‌ಗಳನ್ನು ಖರೀದಿಸಿ ಒಂದು ಬಸ್ಸನ್ನು ನಾಯಕನಹಟ್ಟಿಯಿಂದ ಚಳ್ಳಕೆರೆ ಮಾರ್ಗವಾಗಿ ಬೆಂಗಳೂರಿಗೆ, ಇನ್ನೊಂದು ಬಸ್ಸನ್ನು ನಾಯಕನಹಟ್ಟಿಯಿಂದ ಚಿತ್ರದುರ್ಗ ಮಾರ್ಗವಾಗಿ ಶಿವಮೊಗ್ಗ ನಗರಕ್ಕೆ ಸಾರ್ವಜನಿಕ ಸೇವೆಗೆ ಒದಗಿಸಿದ್ದಾರೆ.

ನೂತನ ಬಸ್ಸಿನಲ್ಲಿ 60 ಕೆ.ಜಿ ಸಾಮರ್ಥ್ಯದ ಇಂಧನ ಟ್ಯಾಂಕ್ ಇದ್ದು, ಸುಮಾರು 10 ಟನ್ ಬಸ್‌ನ ತೂಕವಿದೆ. 1 ಕೆ.ಜಿ ಸಿಎನ್‌ಜಿ ಇಂಧನಕ್ಕೆ ಸುಮಾರು 8 ಕಿ.ಮೀ. ದೂರ ಕ್ರಮಿಸುವ ಮೈಲೇಜ್ ದೊರೆಯುತ್ತದೆ. ಇತರ ಸಾಂಪ್ರದಾಯಿಕ ಇಂಧನ ಬಳಸುವ ವಾಹನಗಳಿಗೆ ಹೋಲಿಸಿದರೆ ಸಿಎನ್‌ಜಿ ಬಸ್‌ನಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚು ಪ್ರಯೋಜನಗಳಿವೆ.

ಜೆ.ಆರ್. ರವಿಕುಮಾರ್ ಸುಮಾರು 2 ದಶಕಗಳಿಂದ ಖಾಸಗಿ ಬಸ್ ಕ್ಷೇತ್ರದಲ್ಲಿ ಅನುಭವವಿದ್ದು, ನಾಯಕನಹಟ್ಟಿ, ಚಳ್ಳಕೆರೆ, ಚಿತ್ರದುರ್ಗ, ದಾವಣಗೆರೆ, ಜಗಳೂರು, ಶಿವಮೊಗ್ಗ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ 50ಕ್ಕೂ ಹೆಚ್ಚು ಬಸ್‌ಗಳನ್ನು ಓಡಿಸುತ್ತಿದ್ದಾರೆ.

ಜತೆಗೆ ಯಾವಾಗಲೂ ಹೊಸದೊಂದು ಪ್ರಯೋಗಕ್ಕೆ ಮುಂದಾಗುವ ಇವರು, ದಿನೇ ದಿನೇ ಇಂಧನದ ಬೆಲೆ ಏರಿಕೆಯಿಂದ ಕಂಗಾಲಾಗದೇ ಇರುವ ವ್ಯವಸ್ಥೆಯಲ್ಲೇ ಏನಾದರೂ ಸಾಧನೆ ಮಾಡುವ ಹಂಬಲದಿಂದ ಸಾಂಪ್ರದಾಯಿಕ ಇಂಧನಗಳಿಂದ ಓಡುವ ವಾಹನಗಳ ಬದಲಾಗಿ ನೈಸರ್ಗಿಕ ಅನಿಲದ ಸಹಾಯದಿಂದ ಓಡುವ ಈಷರ್ ಕಂಪೆನಿಯ 2 ಬಸ್‌ಗಳನ್ನು ಖರೀದಿಸಿದ್ದಾರೆ.

ಖಾಸಗಿ ಬಸ್ ಕ್ಷೇತ್ರದಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ಈ ವಿನೂತನ ಪ್ರಯೋಗಕ್ಕೆ ಕೈಹಾಕಿದ್ದಾರೆ. ಇದಕ್ಕೂ ಮೊದಲು ಸಿಎನ್‌ಜಿ ಚಾಲಿತ ಬಸ್‌ಗಳು ಕೇವಲ ದೆಹಲಿಯ ರಸ್ತೆಗಳಲ್ಲಿ ಮಾತ್ರ ಕಾಣಲು ಸಾಧ್ಯ.

ದೆಹಲಿಯಲ್ಲಿ ವಿಪರೀತ ವಾಯು ಮಾಲಿನ್ಯದಿಂದ ಸುಪ್ರೀಂ ಕೋರ್ಟ್ ಆದೇಶದಂತೆ ಅಲ್ಲಿಯ ಎಲ್ಲ ಸರ್ಕಾರಿ ವಾಹನಗಳು, ಸಾರ್ವಜನಿಕ ಸೇವಾ ವಲಯದ ವಾಹನಗಳು, ಬಸ್‌ಗಳು ಸಿಎನ್‌ಜಿ ಅಳವಡಿಕೆ ಕಡ್ಡಾಯವಾಗಿದೆ.

ಸಿಎನ್‌ಜಿ ಎಂದರೇನು?: 

ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ). ಶೇ 1 ಒತ್ತಡದ ಅಡಿಯಲ್ಲಿ ಪೆಟ್ರೋಲ್ ಬಾವಿಗಳಲ್ಲಿ ದೊರೆಯುವ ದ್ರವವನ್ನು ಸಾಂದ್ರೀಕೃತಗೊಳಿಸಿದಾಗ ದೊರೆಯುವ ಅನಿಲವನ್ನು ಸಿಎನ್‌ಜಿ ಎಂದು ಕರೆಯುತ್ತೇವೆ.

ಇದು ವಾಹನಗಳಿಗೆ ಸಾಂಪ್ರದಾಯಿಕ ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳಿಗಿಂತ ಕಡಿಮೆ ನಿರ್ವಹಣೆ ವೆಚ್ಚ, ಪರಿಸರ ಸ್ನೇಹಿಯಾಗಿದ್ದು, ಹೆಚ್ಚು ಪರಿಣಾಮಕಾರಿಯಾದ ಪರ್ಯಾಯ ಇಂಧನವಾಗಿದೆ.

ಇದು ಸೂಪರ್ ಗ್ಯಾಸೋಲಿನ್‌ನ 5/1 ಭಾಗವಾಗಿದ್ದು, ಗ್ಯಾಸೋಲಿನ್ ಚಾಲಿತ ವಾಹನಗಳಿಗೆ ಹೋಲಿಸಿದರೆ ಕಾರ್ಬನ್ ಮೋನಾಕ್ಸೈಡ್, ಕಾರ್ಬನ್ ಡೈಆಕ್ಸೈಡ್‌ನಂತಹ ವಿಷಕಾರಿ ಪದಾರ್ಥಗಳನ್ನು ಪರಿಸರಕ್ಕೆ ಹೊರಸೂಸುವಿಕೆಯ ಶೇ 95 ಕಡಿಮೆಯಾಗುತ್ತವೆ.

ಹಾಗೂ ಇತರ ಇಂಧನಗಳ ದರಗಳಿಗೆ ಹೋಲಿಸಿದರೆ ವೆಚ್ಚದಲ್ಲಿ ಕಡಿಮೆ ಇದೆ. ಜತೆಗೆ ವಾಹನ ನಿರ್ವಹಣಾ ವೆಚ್ಚ ಕಡಿಮೆಯಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap