ಬೆಂಗಳೂರು
ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಂಚಿಕೆ, ಕೆಪಿಸಿಸಿ ನಾಯಕತ್ವ ಬದಲಾವಣೆ ಸಂಬಂಧ ಆಗಾಗ ಹೇಳಿಕೆಗಳು, ಪ್ರತಿ ಹೇಳಿಕೆಗಳು ಮುನ್ನೆಲೆಗೆ ಬರುತ್ತಲೇ ಇವೆ. ಕಾಂಗ್ರೆಸ್ ನಾಯಕರು ಒಂದೊಂದೇ ದಾಳವನ್ನು ಉರುಳಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಇದೀಗ, ಬಹಿರಂಗ ಹೇಳಿಕೆ ನೀಡುತ್ತಿರುವ ಸಚಿವರ ಬದಲಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಲವು ತೋರಿದ್ದಾರೆ ಎನ್ನಲಾಗಿದೆ.
ಮುಂಬರುವ ಬಜೆಟ್ ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟ ಪುನರ್ ರಚನೆ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಸಚಿವ ಸ್ಥಾನ ಕಳೆದುಕೊಂಡಿರುವ ನಾಗೇಂದ್ರರನ್ನು ಸಂಪುಟಕ್ಕೆ ಪುನರ್ ಸೇರ್ಪಡೆಗೊಳಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಒಲವು ಹೊಂದಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದರೊಂದಿಗೆ, ಬಹಿರಂಗ ಹೇಳಿಕೆ ನೀಡುತ್ತಿರುವ ಸಚಿವರಿಗೂ ಬದಲಾವಣೆ ತೂಗುಗತ್ತಿ ಕಾದಿದೆಯಾ ಎಂಬ ಅನುಮಾನ ಮೂಡಿದೆ.
ಕೆಲವು ಮಂದಿ ಸಚಿವರ ಖಾತೆ ಬದಲಾವಣೆಗೂ ಕಾಂಗ್ರೆಸ್ನಲ್ಲಿ ಗಂಭೀರ ಚಿಂತನೆ ನಡೆದಿದೆ. ಅನಗತ್ಯ ಹೇಳಿಕೆ ಕೊಟ್ಟು ಗೊಂದಲ ಸೃಷ್ಟಿಸುತ್ತಿರುವ ಸಚಿವರನ್ನು ಸಂಪುಟದಿಂದ ಕೈ ಬಿಡಲು ಹೈಕಮಾಂಡ್ಗೆ ಒತ್ತಡ ಹೇರಲು ರಾಜ್ಯದ ಉನ್ನತ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ. ಕೆಪಿಸಿಸಿಯಿಂದ ಕಿರಿಕ್ ಸಚಿವರ ವಿರುದ್ಧ ಹೈಕಮಾಂಡ್ಗೆ ಅಸಮಾಧಾನ ದಾಖಲಿಸಲಾಗಿದೆ ಎಂದೂ ಕೆಲವು ಮೂಲಗಳು ತಿಳಿಸಿವೆ.
ಆದರೆ, ಡಿಸಿಎಂ ಡಿಕೆ ಶಿವಕುಮಾರ್ ಮುಂದಿನ ಮಾರ್ಚ್ ವರೆಗೂ ಸಂಪುಟ ಪುನರ್ ರಚನೆಗೆ ಬಗ್ಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ ಎನ್ನಲಾಗಿದೆ. ಹೆಚ್ಚುವರಿ ಡಿಸಿಎಂ ಕೂಗು, ಖಾತೆ ವಿಚಾರಗಳು ಅನಗತ್ಯ ಮುನ್ನಲೆಗೆ ಬರುವ ಆತಂಕದಿಂದ ಪುನರ್ ರಚನೆಗೆ ಬಗ್ಗೆ ಅವರು ಒಲವು ತೋರುತ್ತಿಲ್ಲ.
ಆದರೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರ ಕೆಲವು ನಾಯಕರು ಸಂಪುಟ ಪುನರ್ ರಚನೆ ಅಸ್ತ್ರದ ಮೂಲಕ ಕೆಲ ಸಚಿವರ ಆಟಾಟೋಪಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ಗೆ ಒತ್ತಡ ಹೇರುತ್ತಿದ್ದಾರೆ. ಸಂಪುಟ ಪುನರ್ ರಚನೆ ಕಸರತ್ತಿನ ಮೂಲಕ ಅಧಿಕಾರ ಹಂಚಿಕೆ ಕಿತ್ತಾಟಕ್ಕೆ ತಾತ್ಕಾಲಿಕ ಬ್ರೇಕ್ ಹಾಕುವ ಯೋಚನೆ ಅವರದ್ದಾಗಿದೆ.
ಸಂಪುಟ ಪುನರ್ ರಚನೆ ವೇಳೆ ಸಿಎಂ ಸಿದ್ದರಾಮಯ್ಯ ಅವರ ಇಬ್ಬರು ಅಥವಾ ಮೂವರು ಅತ್ಯಾಪ್ತರಿಗೂ ಕೋಕ್ ನೀಡುವ ಸಾಧ್ಯತೆ ಇದೆ. ಈ ಮೂಲಕ ಸಿಎಂ, ಡಿಸಿಎಂ ಸ್ಥಾನ ಅಲುಗಾಡದಂತೆ ಹೈಕಮಾಂಡ್ ತಂತ್ರ ಹೆಣೆಯುತ್ತಿದೆ. ಈಗಾಗಲೇ ಸಚಿವರ ಕಾರ್ಯವೈಖರಿ ಬಗ್ಗೆ ಹೈಕಮಾಂಡ್ ರಿಪೋರ್ಟ್ ಪಡೆದಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷರಿಂದಲೂ ಪ್ರತ್ಯೇಕ ರಿಪೋರ್ಟ್ ತರಿಸಿಕೊಂಡಿದೆ. ಸಿಎಂ, ಡಿಸಿಎಂ ರಿಂದಲೂ ಪ್ರತ್ಯೇಕ ರಿಪೋರ್ಟ್ ಸಲ್ಲಿಕೆಯಾಗಿದೆ. ಅವುಗಳ ಎಲ್ಲದರ ಆಧಾರದಲ್ಲಿ ಸೂಕ್ತ ತಂತ್ರ ಹೆಣೆಯುತ್ತಿದೆ ಎಂದು ಮೂಲಗಳು ಹೇಳಿವೆ.