ಧಾರವಾಡ : ವಿಶಿಷ್ಠ ರೀತಿಯಲ್ಲಿ ನಾಮಪತ್ರ ಸಲ್ಲಿಕೆಗೆ ಆಗಮಿಸಿದ ಸ್ವತಂತ್ರ ಅಭ್ಯರ್ಥಿ

ಹುಬ್ಬಳ್ಳಿ:

     ಮುಂಬರುವ ಲೋಕಸಭೆ ಚುನಾವಣೆಗೆ ಧಾರವಾಡ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಶಿವಾನಂದ ಮುತ್ತಣ್ಣನವರ್ ನಿನ್ನೆ ಮಂಗಳವಾರ ಹುಬ್ಬಳ್ಳಿಯಿಂದ ಧಾರವಾಡದವರೆಗೆ ವಿಶಿಷ್ಟ ರ್ಯಾಲಿ ನಡೆಸಿಕೊಂಡು ಹೋಗಿ ಚುನಾವಣಾಧಿಕಾರಿ ಕಚೇರಿಯಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು. ಹುಬ್ಬಳ್ಳಿಯ ಮಾಜಿ ವಾರ್ಡ್ ಸದಸ್ಯ ಮುತ್ತಣ್ಣನವರ್ ತಮ್ಮ ಬೆಂಬಲಿಗರೊಂದಿಗೆ ಎತ್ತಿನ ಗಾಡಿಯಲ್ಲಿ 20 ಕಿ.ಮೀ ಮೆರವಣಿಗೆ ಸಾಗಿ ನಾಮಪತ್ರ ಸಲ್ಲಸುವ ಮೂಲಕ ಗಮನ ಸೆಳೆದರು.

    ಮುತ್ತಣ್ಣನವರ್ ಮತ್ತು ಅವರ ಬೆಂಬಲಿಗರು ಹುಬ್ಬಳ್ಳಿಯ ರಾಣಿ ಚೆನ್ನಮ್ಮ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ನಂತರ ರ್ಯಾಲಿ ಪ್ರಾರಂಭಿಸಿದರು. ಅಲಂಕೃತ ಎತ್ತಿನ ಬಂಡಿಗಳು ಆಕರ್ಷಣೆಯಾಗಿದ್ದು, ಒಂದು ಗಂಟೆಯಲ್ಲಿ ರ್ಯಾಲಿ ಧಾರವಾಡ ತಲುಪಿತು. ಕೆಲವು ಕಡೆ ಮೀಸಲಾದ ಬಿಆರ್ ಟಿಎಸ್ ಕಾರಿಡಾರ್‌ನಲ್ಲಿ ಬಂಡಿ ಚಲಿಸಲು ಪೊಲೀಸರು ಅನುಮತಿ ನೀಡಿದರು. ದಾರಿಯಲ್ಲಿ ಸಾಗುತ್ತಿದ್ದ ಅನೇಕರು ಬಂಡಿಗಳ ಫೋಟೋಗಳು ಮತ್ತು ವೀಡಿಯೊಗಳನ್ನು ತೆಗೆಯುತ್ತಿರುವುದು ಕಂಡುಬಂತು.

   ಈ ಸಂದರ್ಭದಲ್ಲಿ ಮುತ್ತಣ್ಣನವರ್ ಮಾತನಾಡಿ, ಮಹದಾಯಿ ನೀರಿಗಾಗಿ ಹಲವು ವರ್ಷಗಳಿಂದ ಉತ್ತರ ಕರ್ನಾಟಕದ ಜನರು ಹೋರಾಟ ನಡೆಸುತ್ತಿದ್ದಾರೆ. ಈ ಭಾಗದ ಹಲವು ರಾಜಕಾರಣಿಗಳು ಮಹದಾಯಿ ವಿಚಾರದಲ್ಲಿ ಲಾಭ ಪಡೆದಿದ್ದಾರೆ ಎಂದು ಆರೋಪಿಸಿದರು.

   ಮಹದಾಯಿ ವಿಚಾರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗಲಿ, ಪ್ರಧಾನಿ ನರೇಂದ್ರ ಮೋದಿಯಾಗಲಿ ಇದುವರೆಗೆ ಏನೂ ಪ್ರಯೋಜನ ಮಾಡಿಕೊಟ್ಟಿಲ್ಲ. ಸತತವಾಗಿ ಆಯ್ಕೆಯಾಗಿದ್ದರೂ ಜೋಶಿ ಅವರು ಸಂಸತ್ತಿನಲ್ಲಿ ಧ್ವನಿ ಎತ್ತಲಿಲ್ಲ. ಸರಿಯಾದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಜನರ ಗಮನ ಸೆಳೆಯಲು ಬಂಡಿ ರ್ಯಾಲಿ ಇಂದು ಮಾಡುತ್ತಿದ್ದೇನೆ ಎಂದರು.

   ಧಾರವಾಡದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ನಿಂದ ವಿನೋದ ಅಸೋಟಿ ಮತ್ತು ಸ್ವತಂತ್ರ ಅಭ್ಯರ್ಥಿಯಾಗಿ ದಿಂಗಾಲೇಶ್ವರ ಸ್ವಾಮೀಜಿ ನಡುವೆ ಕುತೂಹಲಕಾರಿ ಸ್ಪರ್ಧೆ ಏರ್ಪಡುವ ನಿರೀಕ್ಷೆಯಿದೆ. ಜಿಲ್ಲೆಯಲ್ಲಿ ಲಿಂಗಾಯತ ಮತಗಳನ್ನು ವಿಭಜಿಸುವ ನಿರೀಕ್ಷೆಯಿದೆ. ಮತ್ತೊಂದೆಡೆ, ಅಸೋಟಿ ಮತ್ತು ಮುತ್ತಣ್ಣವರ್ ಇಬ್ಬರೂ ಕುರುಬ ಸಮುದಾಯಕ್ಕೆ ಸೇರಿದವರು.

   ತಮ್ಮ ಪುತ್ರನಿಗೆ ಹಾವೇರಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ ಅವರ ಸಲಹೆ ಮೇರೆಗೆ ಮುತ್ತಣ್ಣನವರ್ ಸ್ವತಂತ್ರವಾಗಿ ಧಾರವಾಡದಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಈಶ್ವರಪ್ಪನವರು ಶಿವಮೊಗ್ಗದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap