ಬೆಂಗಳೂರು:
ಶಿಗ್ಗಾಂವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ತನ್ನ ಅಭ್ಯರ್ಥಿಯನ್ನು ಬದಲಿಸಿ ಅಚ್ಚರಿ ಮೂಡಿಸಿದ್ದ ಕಾಂಗ್ರೆಸ್ ಪಕ್ಷ ಕೋಲಾರದ ಅಭ್ಯರ್ಥಿ ಕೊತ್ತೂರು ಜಿ ಮಂಜುನಾಥ್ ಒತ್ತಡಕ್ಕೆ ಮಣಿದು ಗುರುವಾರ ಮುಳಬಾಗಲು (ಎಸ್‌ಸಿ) ಅಭ್ಯರ್ಥಿಯನ್ನು ಬದಲಾಯಿಸಿದೆ.
ಮಾಜಿ ಶಾಸಕ ಹಾಗೂ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಮಂಜುನಾಥ್ ಒತ್ತಡಕ್ಕೆ ಮಣಿದ ಕಾಂಗ್ರೆಸ್ ಹೈಕಮಾಂಡ್ ಮುಳಬಾಗಿಲು ಮೀಸಲು ಕ್ಷೇತ್ರದ ಟಿಕೆಟ್ ಪ್ರಕಟಿಸಿದ 12 ಗಂಟೆಯೊಳಗೆ ಅಭ್ಯರ್ಥಿಯನ್ನು ದಿಢೀರ್ ಬದಲಾಯಿಸಿದೆ. ಬುಧವಾರ ರಾತ್ರಿ ಎಐಸಿಸಿ ಪ್ರಕಟಿಸಿದ ಐದನೇ ಪಟ್ಟಿಯಲ್ಲಿ ಡಾ.ಬಿ.ಸಿ. ಮುದ್ದು ಗಂಗಾಧರ್ ಎಂಬುವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಲಾಗಿತ್ತು. ‘ಬಿ’ ಫಾರಂ ಕೂಡ ನೀಡಲಾಗಿತ್ತು.
ಇದರಿಂದ ಕೋಪಗೊಂಡ ಕೊತ್ತೂರು ಮಂಜುನಾಥ್, ‘ಮುದ್ದು ಗಂಗಾಧರ್ ಯಾರು ಎಂಬುವುದೇ ಕ್ಷೇತ್ರದ ಜನರಿಗೆ ಗೊತ್ತಿಲ್ಲ. ಅಭ್ಯರ್ಥಿ ಬದಲಾಯಿಸದಿದ್ದರೆ ಕೋಲಾರದಲ್ಲಿ ನಾಮಪತ್ರ ಸಲ್ಲಿಸುವುದಿಲ್ಲ’ ಎಂದು ಪಟ್ಟು ಹಿಡಿದಿದ್ದರು. ಇದರ ಜೊತೆಗೆ ಮುಳಬಾಗಿಲು ಕ್ಷೇತ್ರದಲ್ಲೂ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಂದಲೂ ಡಾ.ಮುದ್ದು ಗಂಗಾಧರ್ ಅಭ್ಯರ್ಥಿಯಾಗುವುದಕ್ಕೆ ಭಾರಿ ವಿರೋಧ ವ್ಯಕ್ತವಾಯಿತು.
ಗುರುವಾರ ಕೋಲಾರದಲ್ಲಿ ನಾಮಪತ್ರ ಸಲ್ಲಿಸಿದ ಕೊತ್ತೂರು, ತಕ್ಷಣವೇ ಮುಳಬಾಗಿಲಿಗೆ ತೆರಳಿ ಆದಿನಾರಾಯಣ ನಾಮಪತ್ರ ಸಲ್ಲಿಕೆಗೆ ಸಹಕರಿಸಿದರು. ಇದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಹಿನ್ನಡೆಯಾಗಿದ್ದು, ಮಾಜಿ ಯುವ ಕಾಂಗ್ರೆಸ್ ಮುಖಂಡ ಡಾ.ಮುದ್ದುಗಂಗಾಧರ್, ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರ ಆಪ್ತರೂ ಆಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
